ವಾಷಿಂಗ್ಟನ್: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ಖಲಿಸ್ತಾನಿ ಸಂಘಟನೆಯ ಬೆಂಬಲಿಗರು ಬೆಂಕಿ ಹಚ್ಚಿರುವ ಘಟನೆಯ ಬಗ್ಗೆ ವರದಿಯಾಗಿದೆ. ಇದು ಕಳೆದ ಐದು ತಿಂಗಳಿನಲ್ಲಿ ನಡೆದ ಎರಡನೇ ದಾಳಿಯಾಗಿದೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ಮುಂಜಾನೆ ಭಾನುವಾರ ಮುಂಜಾನೆ 1:30 ರಿಂದ 2:30 ರ ಸಮಯದಲ್ಲಿ ಬೆಂಕಿ ಹಚ್ಚಲಾಗಿದೆ. ಈ ಕೃತ್ಯವನ್ನು ಖಲಿಸ್ತಾನಿ ಬೆಂಬಲಿಗರು ಎಸಗಿದ್ದಾರೆ ಎಂದು ಸ್ಥಳೀಯ ಸುದ್ದಿ ವಾಹಿನಿ ʼದಿಯಾ ಟಿವಿʼ ವರದಿ ಮಾಡಿದೆ.
ಖಲಿಸ್ತಾನಿ ಬೆಂಬಲಿಗರು ರಿಲೀಸ್ ಮಾಡಿದ್ದಾರೆ ಎನ್ನಲಾದ ವಿಡಿಯೋವನ್ನು ʼ ದಿಯಾ ಟಿವಿʼ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.
ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಸ್ಯಾನ್ ಫ್ರಾನ್ಸಿಸ್ಕೋ ಅಗ್ನಿಶಾಮಕ ಇಲಾಖೆಯಿಂದ ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು ಎಂದು ವರದಿ ತಿಳಿಸಿದೆ.
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ನ ವಕ್ತಾರ ಮ್ಯಾಥ್ಯೂ ಮಿಲ್ಲರ್, “ವಿಧ್ವಂಸಕತೆ ಮತ್ತು ಬೆಂಕಿ ಹಚ್ಚಿರುವ ಘಟನೆ ಅಮೆರಿಕ ಬಲವಾಗಿ ಖಂಡಿಸುತ್ತದೆ” ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇದೇ ವರ್ಷದ ಮಾರ್ಚ್ ನಲ್ಲಿ ಅಮೃತಪಾಲ್ ಸಿಂಗ್ ಗಾಗಿ ಪಂಜಾಬ್ ಪೊಲೀಸರು ಹುಡುಕಾಟ ಆರಂಭಿಸಿದ ವೇಳೆ ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸವನ್ನು ಧ್ವಂಸಗೊಳಿಸಿದರು.