Advertisement

Indian Constituiton: ಸಂವಿಧಾನ ಓದು, ಅರಿವು ನಿರಂತರವಾಗಲಿ

01:53 AM Aug 24, 2024 | Team Udayavani |

ಜನರಿಂದ ಜನರಿಗಾಗಿಯೇ ಇರುವ ಜನರದೇ ಆದ ಸರಕಾರದ ಸ್ಪಷ್ಟ ರೂಪರೇಖೆಯೊಂದಿಗೆ ನಾಗರಿಕರ ಬದುಕನ್ನು ಹಸನುಗೊಳಿಸಲು ಬೇಕಾದ ಎಲ್ಲ ಅಂಶಗಳನ್ನು ಒಳಗೊಂಡ ಭಾರತದ ಸಂವಿಧಾನ ನಮ್ಮ ಹೆಮ್ಮೆ. ಅಂತಹ ಸಂವಿಧಾನ ಇತ್ತೀಚಿನ ಲೋಕಸಭಾ ಚುನಾವಣೆಯ ಪೂರ್ವದಲ್ಲೂ ಮತ್ತು ಅನಂತರವೂ ಚರ್ಚೆಯ ಕೇಂದ್ರಬಿಂದುವಾಗಿದೆ. ಸಂವಿಧಾನದ ಪಾವಿತ್ರ್ಯತೆ ವನ್ನು ಎತ್ತಿ ಹಿಡಿಯುವಲ್ಲಿ ತಾವು ಮುಂದೆ ಎಂದು ಸಾಬೀತು ಪಡಿಸಲು ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷ ಮತ್ತು ವಿಪಕ್ಷ ಎರಡೂ ಪೈಪೋಟಿಗಿಳಿದಂತೆ ಕಾಣುತ್ತದೆ.

Advertisement

ಸಂವಿಧಾನದ ಫ‌ಲವಾಗಿ ಸ್ವಾತಂತ್ರೋತ್ತರದಲ್ಲಿ ದಕ್ಕಿದ ನೆಮ್ಮದಿಯ ಬದುಕನ್ನು ಕಸಿಯುವ ಯಾವುದೇ ಪ್ರಯತ್ನವನ್ನು ಜನ ಕ್ಷಮಿಸಲಾರರು ಎನ್ನುವ ಜನಭಾವನೆಯ ಅರಿವು ಈಗ ರಾಜಕೀಯ ಪಕ್ಷಗಳಿಗೆ ಆಗಿದೆ. ಜನಭಾವನೆಯ ಸೂಕ್ಷ್ಮತೆ ಮತ್ತು ತೀವ್ರತೆಯನ್ನು ಈ ಚರ್ಚೆ ಬೆಟ್ಟು ಮಾಡಿ ತೋರಿಸು ವಂತಿದೆ. ಸಾಕು ಇಷ್ಟೇ ಸಾಕು. ರಾಜಕೀಯ ಪಕ್ಷಗಳ ಈ ಭಯವೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಹಣತೆ ನಿರಂತರವಾಗಿ ದೇದೀಪ್ಯಮಾನವಾಗಿ ಉರಿಯುತ್ತಿರಲು ಆಸರೆಯಾಗಿರುತ್ತದೆ ಎನ್ನುತ್ತಿದ್ದಾರೆ ಸಾಮಾನ್ಯ ನಾಗರಿಕರು.

ತಮ್ಮ ನಿರ್ಗಮನದ ಅನಂತರ ಭಾರತ ಅರಾಜಕತೆಯ ಗೂಡಾಗುವುದೆಂಬ ಆಂಗ್ಲರ ವ್ಯಂಗ್ಯವನ್ನು ಹುಸಿಗೊಳಿಸಿದ್ದು ಇದೇ ಸಂವಿಧಾನ. ಆಗಷ್ಟೇ ಸ್ವಾತಂತ್ರ್ಯ ದ ತಂಗಾಳಿಗೆ ಮೈಒಡ್ಡಿದ ಜನತೆಯ ಎದುರು ಕಲ್ಯಾಣರಾಜ್ಯದ ಕಲ್ಪನೆಯ ಬೀಜ ಬಿತ್ತಿ ಸ್ಪಷ್ಟ ಮಾರ್ಗದರ್ಶನ ಮಾಡಿದ್ದು ಸಹಾ ಇದೇ ಸಂವಿಧಾನ. ಸಂವಿಧಾನದ ಅಕ್ಷರ ಮತ್ತು ಭಾವನೆಯನ್ನು ಅರ್ಥ ಮಾಡಿಕೊಂಡು ನಡೆಯುವಲ್ಲಿ ಈ ದೇಶದ ಅಶಿಕ್ಷಿತ ಜನರು ಹಿಂದೆ ಬೀಳಲಿಲ್ಲ. ಮತ ಪಡೆದ ರಾಜಕಾರಣಿಗಳು ಮತಿಹೀನರಂತೆ ನಿರಂಕುಶರಾದಾಗ ಸಮಯವರಿತು ಅವರ ಕಿವಿ ಹಿಂಡಿದ್ದೂ ಸಹ ಹೊದೆಯಲು ಅರಿವೆ ಇಲ್ಲದ, ಇರಲು ಬೆಚ್ಚನೆಯ ಮನೆಯಿಲ್ಲದ, ಹೊಟ್ಟೆ ತುಂಬಾ ಉಣ್ಣಲೂ ಇಲ್ಲದ ಸಾಮಾನ್ಯ ನಾಗರಿಕರೇ.

ಭಾರತದ ಜತೆಯಲ್ಲೇ ಅಥವಾ ಅನಂತರ ಸ್ವಾತಂತ್ರ್ಯ  ಪಡೆದ ಏಷ್ಯಾದ ಮತ್ತು ಆಫ್ರಿಕಾದ ಅನೇಕ ದೇಶಗಳು ಮಿಲಿಟರಿ ಸರ್ವಾಧಿಕಾರಿಗಳ ಕೈಯಲ್ಲಿ ಸಿಕ್ಕಿ ನಲುಗಿದರೂ ಭಾರತ ಮಾತ್ರ ಸಂವಿಧಾನದ ಬಲದಿಂದ ತನ್ನ ಪ್ರಜಾಪ್ರಭುತ್ವವನ್ನು ಜಗತ್ತೇ ವಿಸ್ಮಯ ಪಡುವಂತೆ ಜತನದಿಂದ ಕಾಪಿಟ್ಟುಕೊಂಡಿತು. ಸಂವಿಧಾನದ ಆಶಯದಂತೆ ಆಡಳಿತ ಯಂತ್ರ ಸಾಗುತ್ತಿರುವವರೆಗೆ ನಮ್ಮ ದೇಶ ಸುರಕ್ಷಿತ ವಾಗಿರು ವುದರಲ್ಲಿ ಸಂಶಯವಿಲ್ಲ. ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾದ ಹಿರಿಯ ಚೇತನಗಳು ಒಂದೊಂದಾಗಿ ಕಳಚಿದಂತೆ, ತ್ಯಾಗ ಬಲಿದಾನದಿಂದ ಸಂಪಾದಿಸಿದ ಸ್ವಾತಂತ್ರ್ಯದ ಹಿನ್ನೆಲೆ-ಮಹತ್ವವನ್ನೇ ಈಗಿನ ಯುವಪೀಳಿಗೆ ಮರೆತುಬಿಡುತ್ತಾರೋ ಎನ್ನುವ ಘಟನೆಗಳು ಅಲ್ಲೊಂದು ಇಲ್ಲೊಂದು ಘಟಿಸುತ್ತಿವೆ.

ಸ್ವಾತಂತ್ರೊÂàತ್ತರದಲ್ಲಿ ದೇಶ ಪ್ರಜಾಪ್ರಭುತ್ವದ ಪ್ರಗತಿಪಥದಲ್ಲಿ ಸಾಗುವಂತೆ ಮಾಡಿದ್ದು ನಮ್ಮ ಸಂವಿಧಾನ. ಬಡವ-ಶ್ರೀಮಂತ, ಜಾತಿ-ಮತದ ಭೇದಭಾವ ಇಲ್ಲದೇ ಇಲ್ಲದೇ ಎಲ್ಲ ನಾಗರಿಕರಿಗೂ ಸಮಾನ ಅವಕಾಶ ಕಲ್ಪಿಸಿ ನೆಮ್ಮದಿಯ ಬದುಕನ್ನು ನೀಡಿದ ಹೆಗ್ಗಳಿಕೆ ನಮ್ಮ ಸಂವಿಧಾನದ್ದು. ಇಂತಹ ಸಂವಿಧಾನವನ್ನು ಬದಲಾಯಿಸಲಾಗುತ್ತದೆ ಎನ್ನುವ ಗುಲ್ಲು ಸಹಜವಾಗಿಯೇ ನಾಗರಿಕರನ್ನು ಚಿಂತಿಸುವಂತೆ ಮಾಡಿದ್ದರೆ ಅದರಲ್ಲೇನೂ ಆಶ್ಚರ್ಯವಿಲ್ಲ.

Advertisement

ನಮ್ಮ ಪ್ರಜಾಪ್ರಭುತ್ವದ ಶಕ್ತಿ ಇರುವುದೇ ಸಂವಿಧಾನದಲ್ಲಿ. ಸಂವಿಧಾನದ ಕುರಿತು ಪ್ರತಿಯೋರ್ವರೂ ತಿಳಿದುಕೊಳ್ಳುವ ಅಗತ್ಯ ಇದೆ. ಆದ್ದರಿಂದಲೇ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಓದು ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ ಸಂಸತ್ತು ಎನ್ನುವ ಕ್ರಿಯಾಶೀಲ ಚಟುವಟಿಕೆ ನಡೆಸಲಾಗುತ್ತದೆ. ನಿಸ್ಸಂಶಯವಾಗಿಯೂ ಇವೆಲ್ಲ ಸಂವಿಧಾನದ ಅರಿವು ಭವಿಷ್ಯದ ನಾಗರಿಕರಲ್ಲಿ ಮೂಡಿಸುವ ಕೆಲಸ ಮಾಡುತ್ತಿದೆ.

ಅಂದು ದೇಶದ ಮೇಲೆ ತುರ್ತುಸ್ಥಿತಿ ಹೇರಿ ಜನರ ಹಕ್ಕುಗಳನ್ನು ದಮನಿಸಿ ಲಕ್ಷಾಂತರ ಜನರನ್ನು ಜೈಲಿಗೆ ಹಾಕಿದಾಗಲೂ ದೇಶದ ಜನರು ಸಿಡಿದೆದ್ದರು. ಸಂವಿಧಾನದ ರಕ್ಷಣೆಯ ಕುರಿತಾದ ಜನರ ಕಳವಳ ವಿನಾಕಾರಣದ್ದಲ್ಲ. ಹಾಗೆಂದು ವಿನಾ ಕಾರಣ ಸಂವಿಧಾನ ರಕ್ಷಣೆಯ ಜಪ ಮಾಡುತ್ತಾ ಅದನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದೂ ತರವಲ್ಲ. ಇಂತಹ ಕುತ್ಸಿತ ಪ್ರಯತ್ನಗಳನ್ನು ಅರಿಯದಷ್ಟು ಮುಗ್ಧರೂ ಅಲ್ಲ ಭಾರತೀಯ ಪ್ರಜೆಗಳು. ಸಂವಿಧಾನದ ರಕ್ಷಣೆಯ ಕುರಿತಾಗಿ ಹುಟ್ಟಿಕೊಂಡ ಚರ್ಚೆಯ ದಿಕ್ಕನ್ನು ದೇಶಹಿತದಲ್ಲಿ ಈಗ ಬದಲಿಸುವ ಅಗತ್ಯವಿದೆ.

ಸಂವಿಧಾನದಲ್ಲಿ ಹೇಳಿದ ಆದರ್ಶಗಳನ್ನು ನಾಗರಿಕರೆಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಯತ್ನ ನಡೆಯಬೇಕಿದೆ. ಸಂವಿಧಾನದ ರಾಜ್ಯ ನಿರ್ದೇಶನ ತಣ್ತೀಗಳಲ್ಲಿ ಹೇಳಲಾದ ಅಂಶಗಳು ಬಹಳಷ್ಟು ಜನರಿಗೆ ಸರಿಯಾಗಿ ತಿಳಿದೇ ಇಲ್ಲ. ಸಂವಿಧಾನ ರಕ್ಷಣೆ ಎಂದರೆ ಕೇವಲ ತಮಗೆ ನೀಡಲಾದ ಹಕ್ಕುಗಳಿಗಾಗಿ ಹೋರಾಟಕ್ಕಷ್ಟೇ ಸೀಮಿತವಾಗಬಾರದು. ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು.

ವಿದ್ಯಾರ್ಥಿಗಳಲ್ಲಿ, ನಾಗರಿಕರಲ್ಲಿ ಸಂವಿಧಾನ ನೀಡಿದ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ಸಮಾನತೆಯ ಹಕ್ಕು, ಸ್ವಾತಂತ್ರÂದ ಹಕ್ಕು, ಧಾರ್ಮಿಕ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು, ಸಂವಿಧಾನಾತ್ಮಕ ಹಕ್ಕುಗಳ ಕುರಿತು ಹೆಚ್ಚಿನ ನಾಗರಿಕರು ಅರಿತಿರುತ್ತಾರೆ.

ಅದು ನನ್ನ ಹಕ್ಕು ಇದು ನನ್ನ ಹಕ್ಕು ಎಂದು ಪ್ರತಿಭಟಿಸುತ್ತಾರೆ. ಆದರೆ ಅದೇ ಸಂವಿಧಾನದಲ್ಲಿ ಇರುವ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಿ,ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಅನುಸರಿಸಿ, ದೇಶದ ಸಾರ್ವಭೌಮತೆಯನ್ನು ಗೌರವಿಸಿ, ದೇಶವನ್ನು ರಕ್ಷಿಸಿ ಮತ್ತು ಕರೆ ಮಾಡಿದಾಗ ರಾಷ್ಟ್ರೀಯ ಸೇವೆ ಸಲ್ಲಿಸಿ, ಸಹೋದರತ್ವ ಬೆಳೆಸಿ, ಸಂಸ್ಕೃತಿ ಉಳಿಸಿ, ಪರಿಸರ ಉಳಿಸಿ, ವೈಜ್ಞಾನಿಕ ಮನೋಭಾವ ಬೆಳೆಸಿ, ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ, ಹಿಂಸೆ ತಪ್ಪಿಸಿ, ಜೀವನದ ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಿ, 6-14 ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳಿಸಿ ಎನ್ನುವ ನಾಗರಿಕರು ಮಾಡಬೇಕಾದ 11 ಮೂಲ ಕರ್ತವ್ಯದ ಕುರಿತು ಅರಿವು ಎಷ್ಟು ಜನರಿಗೆ ಇದೆ?

ದೇಶ ಚಿರಾಯುವಾಗಬೇಕಾದರೆ ಕೇವಲ ಹೊರಗಿನ ಆಕ್ರಮಣ ಎದುರಿಸಲು ಸನ್ನದ್ಧರಾದರಷ್ಟೇ ಸಾಲದು. ಹೊರಗಿನ ಶತ್ರುಗಳಷ್ಟೇ ದೇಶಕ್ಕೆ ನಿಷ್ಠರಲ್ಲದ ನಾಗರಿಕರೂ ಅಪಾಯಕಾರಿ. ಆಂತರಿಕ ಅಪಾಯ ವನ್ನು ಎದುರಿಸಲೂ ದೇಶ ಸಿದ್ಧರಾಗಿರಬೇಕು. ನಾಗರಿಕರು ದೇಶಕ್ಕೆ ನಿಷ್ಠರಾಗಿ ಸದಾ ಜಾಗೃತರಾಗಿದ್ದಾಗ ಮಾತ್ರ ದೇಶದ ಭವಿಷ್ಯ ಸುಭದ್ರವಾಗಿರಲು ಸಾಧ್ಯ. ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಓದಿನ ಜತೆಯಲ್ಲಿ ನಾಗರಿಕರ ಕರ್ತವ್ಯದ ಅರಿವು ಮೂಡಿಸುವ ಕೆಲಸವೂ ನಡೆಯಲಿ. ದೇಶಕ್ಕೆ ನಿಷ್ಠರಾಗಿರುವುದನ್ನು, ದೇಶವನ್ನು ಪ್ರೀತಿಸುವುದನ್ನು ಕಲಿಸಲಿ. ಅದುವೇ ನಾವು ಮಾಡಬಹುದಾದ ನಿಜವಾದ ದೇಶಸೇವೆ.

ದೇಶನಿಷ್ಠ ನಾಗರಿಕರೇ ದೇಶದ ಭವಿಷ್ಯ
ಸಂವಿಧಾನದಲ್ಲಿ ಹೇಳಿದ ಆದರ್ಶಗಳನ್ನು ನಾಗರಿಕರೆಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಯತ್ನ ನಡೆಯಬೇಕಿದೆ. ಸಂವಿಧಾನ ರಕ್ಷಣೆ ಎಂದರೆ ಕೇವಲ ತಮಗೆ ನೀಡಲಾದ ಹಕ್ಕುಗಳಿಗಾಗಿ ಹೋರಾಟಕ್ಕಷ್ಟೇ ಸೀಮಿತವಾಗಬಾರದು. ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು. ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಓದಿನ ಜತೆಯಲ್ಲಿ ನಾಗರಿಕರ ಕರ್ತವ್ಯದ ಅರಿವು ಮೂಡಿಸುವ ಕೆಲಸವೂ ನಡೆಯಲಿ. ನಾಗರಿಕರು ದೇಶಕ್ಕೆ ನಿಷ್ಠರಾಗಿ ಸದಾ ಜಾಗೃತರಾಗಿದ್ದಾಗ ಮಾತ್ರ ದೇಶದ ಭವಿಷ್ಯ ಸುಭದ್ರವಾಗಿರಲು ಸಾಧ್ಯ.


– ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next