ಪೋರ್ಟ್ ಬ್ಲೇರ್ : ಅಪಾರ ಪ್ರಮಾಣದ ನೀರು ತುಂಬಿಕೊಂಡು ಮುಳುಗಡೆ ಭೀತಿಗೆ ಗುರಿಯಾಗಿದ್ದ ಎಂ ವಿ ಸ್ವರಾಜ್ ಹಡಗಿನ 343 ಮಂದಿ ಸಿಬಂದಿಗಳನ್ನು ಭಾರತೀಯ ಕರಾವಳಿ ಕಾವಲು ಪಡೆಯ ಅರುಣಾ ಅಸಫ್ ಅಲಿ ನೌಕೆಯು ಅತ್ಯಂತ ಸಕಾಲಿಕ ಮತ್ತು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳ ಉತ್ತರದ ತುತ್ತ ತುದಿಯಲ್ಲಿರುವ ಮತ್ತು ಕಾರ್ ನಿಕೋಬಾರ್‌ನಿಂದ ಸುಮಾರು 40 ನಾಟಿಕಲ್ ಮೈಲ್ ದೂರದಲ್ಲಿರುವ ತಾಣವೊಂದರಲ್ಲಿ ಎಂ ವಿ ಸ್ವರಾಜ್ ಹಡುಗು ನೀರಿನಿಂದ ತುಂಬಿಕೊಂಡು ಮುಳುಗುವ ಭೀತಿಯಲ್ಲಿತ್ತು. 343 ಮಂದಿ ಸಿಬಂದಿಗಳು ಜೀವಭಯದಲ್ಲಿ ಇದ್ದರು. ಅಂತೆಯೇ ನಾವೆಯಿಂದ ತುರ್ತು ರಕ್ಷಣೆ, ಸಹಾಯದ ಕೋರಿಕೆ ಬಂದಿತ್ತು.
ಆಗ ಐಜಿಸಿ ನಾವೆ ಸರಿಯಾದ ಹೊತ್ತಿನಲ್ಲಿ ಗಮ್ಯ ತಾಣಕ್ಕೆ ಧಾವಿಸಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಹಡಗಿನಲ್ಲಿದ್ದ ಎಲ್ಲ 343 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಪಾರುಗೊಳಿಸಿತು.
ಮಾತ್ರವಲ್ಲದೆ ಹೆವಿ ಡ್ನೂಟಿ ಸಬ್ ಮರ್ಸಿಬಲ್ ಪಂಪ್ ಗಳನ್ನು ಬಳಸಿಕೊಂಡು ಹಡಗಿನಲ್ಲಿ ತುಂಬಿದ್ದ ನೀರನ್ನು ಹೊರ ಹಾಕುವ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸಿ ಎಂ ವಿ ಸ್ವರಾಜ್ ನೌಕೆ ಮುಳುಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಯಿತು.
ಭಾರತೀಯ ಕರಾವಳಿ ಕಾವಲು ಪಡೆಯು ಅರುಣಾ ಅಸಫ್ ಅಲಿ ನಾವೆಯು ಅತ್ಯಂತ ವೇಗದಲ್ಲಿ ಧಾವಿಸುವ ಸರೋಜಿನಿ ನಾಯ್ಡು ವರ್ಗದ ಕಾವಲು ನೌಕೆಯಾಗಿದೆ. ಶರವೇಗದಲ್ಲಿ ಧಾವಿಸುವುದು ಮಾತ್ರವಲ್ಲದೆ ಸಶಸ್ತ್ರ ಕಣ್ಗಾವಲು ವೇದಿಕೆಯನ್ನೂ ಹೊಂದಿರುವ ಈ ನೌಕೆ ಕಡಿಮೆ ಆಳ ನೀರಿನ ಕಾರ್ಯಾಚರಣೆಯ ಸಾಮರ್ಥ್ಯವನ್ನೂ ಹೊಂದಿದೆ.