ರಾಯಗಢ, ಮಹಾರಾಷ್ಟ್ರ : ಭಾರತೀಯ ತಟ ರಕ್ಷಣಾ ಪಡೆಯ ಹೆಲಿಕಾಪ್ಟರ್ ಇಂದು ಶನಿವಾರ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುರೂದ್ ನ ನಂದಗಾಂವ್ ಸಮೀಪ ಪತನಗೊಂಡಿರುವುದಾಗಿ ವರದಿಯಾಗಿದೆ.
ಹೆಲಿಕಾಪ್ಟರ್ ಪತನಗೊಂಡ ವೇಳೆಗೆ ಅದರೊಳಗೆ ನಾಲ್ಕು ಚಾಲಕ ಸಿಬಂದಿಗಳು ಇದ್ದರು. ಇವರಲ್ಲಿ ಮೂವರನ್ನು ಸುರಕ್ಷಿತವಾಗಿ ಪಾರುಗೊಳಿಸಲಾಗಿದೆ; ಓರ್ವ ಮಹಿಳೆಗೆ ಗಾಯಗಳಾಗಿವೆ.
ಹೆಲಿಕಾಪ್ಟರ್ ಇಳಿಯುವಾಗ ಈ ದುರಂತ ಸಂಭವಿಸಿದೆ. ಇದು ಕೋಸ್ಟ್ ಗಾರ್ಡ್‌ನ ಚೇತಕ್ ಹೆಲಿಕಾಪ್ಟರ್ ಎಂದು ಗೊತ್ತಾಗಿದೆ.
ತನ್ನ ಎಂದಿನ ವಿಚಕ್ಷಣೆಯ ಕರ್ತವ್ಯದಲ್ಲಿ ಆಗಸದಲ್ಲಿ ಹಾರಾಡುತ್ತಿದ್ದ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಹೆಲಿಕಾಪ್ಟರ್ ಇಳಿಯುವಾಗ ಅದು ವಸ್ತುತಃ ನೆಲಕ್ಕೆ ಬಡಿಯಿತು.
ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಗೆ ನೆರವಾಗಲು ಭಾರತೀಯ ನೌಕಾ ಪಡೆಯ ಶೋಧನ ಹೆಲಿಕಾಪ್ಟರ್ ಒಂದು ವೈದ್ಯಕೀಯ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನೆರವಾಯಿತು. ಇಂದು ಶನಿವಾರ ಮಧ್ಯಾಹ್ನ 2.40ರ ಸುಮಾರಿಗೆ ಮುಂಬಯಿಯಿಂದ ಸುಮಾರು 160 ಕಿ.ಮೀ. ದಕ್ಷಿಣದಲ್ಲಿ ಈ ದುರಂತ ಸಂಭವಿಸಿತೆಂದು ಕೋಸ್ಟ್ ಗಾರ್ಡ್ ಮೂಲಗಳು ತಿಳಿಸಿವೆ.