Advertisement

ಭಾರತೀಯ ಚಿತ್ರರಂಗದ ಡ್ಯಾನ್ಸ್‌ ಸರ್ಕಸ್‌ ತರಹ ಇದೆ

06:10 PM Mar 20, 2018 | Team Udayavani |

ಸರೋಜ್‌ ಖಾನ್‌ -ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು. ಅದರಲ್ಲೂ ಹಿಂದಿ ಚಿತ್ರರಂಗದಲ್ಲಿ ಸರೋಜ್‌ ಖಾನ್‌ಗೆ ದೊಡ್ಡ ಸ್ಥಾನವಿದೆ. ಇವತ್ತು ಬಾಲಿವುಡ್‌ನ‌ಲ್ಲಿ ಟಾಪ್‌ಸ್ಟಾರ್‌ಗಳಾಗಿ ಮಿಂಚುತ್ತಿರುವ ಬಹುತೇಕ ನಟ-ನಟಿಯರನ್ನು ಕುಣಿಸಿದ, ಅದ್ಭುತ ಡ್ಯಾನ್ಸ್‌ ಮೂಲಕ ಸಿನಿಮಾಕ್ಕೆ ಹೊಸ ಮೆರುಗು ನೀಡಿದವರ ಸರೋಜ್‌ ಖಾನ್‌. 2000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕಿಯಾಗಿ ಹೆಸರು ಮಾಡಿದವರು ಖ್ಯಾತಿ ಅವರ ಬೆನ್ನಿಗಿದೆ.

Advertisement

“ಮಿಸ್ಟರ್‌ ಇಂಡಿಯಾ’, “ಚಾಂದಿನಿ’, “ಹೀರೋ’, “ನಗಿನಾ’, “ದೇವದಾಸ’ …. ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿನ ಸೂಪರ್‌ ಹಿಟ್‌ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದವರು ಸರೋಜ್‌ ಖಾನ್‌. ಈಗ ಸರೋಜ್‌ ಖಾನ್‌ ಅವರ ವಯಸ್ಸು 70. ಆದರೆ, ಉತ್ಸಾಹ ಬತ್ತಿಲ್ಲ.  ಇವತ್ತಿಗೂ ಅದೇ ಪಫೆಕ್ಷನ್‌. ಅಂದುಕೊಂಡ ಸ್ಟೆಪ್‌ ಬರೋವರೆಗೆ ಬಿಡದೇ ಇರುವಂತಹ ಕೆಲಸದ ಶ್ರದ್ಧೆ.

ಈಗ ಯಾಕೆ ಇವರ ಮಾತು ಎಂದು ನೀವು ಕೇಳಬಹುದು. ಸರೋಜ್‌ ಖಾನ್‌ ಕನ್ನಡಕ್ಕೆ ಬಂದಿದ್ದಾರೆ. “ಗರ’ ಎಂಬ ಚಿತ್ರದ ಎರಡು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಕೆಲಸ ಮಾಡಿದ ಬಗ್ಗೆ ಅವರಿಗೂ ಖುಷಿ ಇದೆ. “ಇಲ್ಲಿನ ಜನ ತುಂಬಾ ಪ್ರತಿಭಾವಂತರು. ಎಲ್ಲಾ ಕೆಲಸಗಳಲ್ಲೂ ತೊಡಗಿಕೊಳ್ಳುವ ಜೊತೆಗೆ ಪ್ರತಿಯೊಂದು ಅಂಶದ ಬಗ್ಗೆ ಪ್ರತಿಯೊಬ್ಬರು ಜವಾಬ್ದಾರರಾಗಿರುತ್ತಾರೆ’ ಎಂದು ಕನ್ನಡದ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ.

ಸರೋಜ್‌ ಖಾನ್‌ ಮುಂದೆಯೂ ಕನ್ನಡದಿಂದ ಅವಕಾಶ ಬಂದರೆ ನೃತ್ಯ ನಿರ್ದೇಶನ ಮಾಡಿಕೊಡುವುದಾಗಿ ಹೇಳುತ್ತಾರೆ. “ನಾನು ಕಾಸ್ಟ್ಲಿ ಅಲ್ಲ, ನನಗೆ ಮಟನ್‌, ಫಿಶ್‌ ಯಾವುದೂ ಬೇಡ. ಸಿಂಪಲ್‌ ಫ‌ುಡ್‌ ಸಾಕು. ಫ್ಲೈಟ್‌ ಅಥವಾ ಎಸಿ ರೈಲು ಬುಕ್‌ ಮಾಡಿದರೆ ನಾನು ಬಂದು ಹೋಗುತ್ತೇನೆ’ ಎನ್ನುವ ಮೂಲಕ ತಮ್ಮ ಸರಳತೆ ಮೆರೆಯುತ್ತಾರೆ. ಮೊದಲೇ ಹೇಳಿದಂತೆ ಬಾಲಿವುಡ್‌ನ‌ ಸ್ಟಾರ್‌ ನಟರ ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದವರು ಸರೋಜ್‌ ಖಾನ್‌.

ನೀವು ಕಂಡಂತೆ ಬಾಲಿವುಡ್‌ನ‌ಲ್ಲಿ ಯಾರು ಬೆಸ್ಟ್‌ ಡ್ಯಾನ್ಸರ್‌ ಎಂದರೆ ಮಾಧುರಿ ದೀಕ್ಷಿತ್‌ ಎಂಬ ಉತ್ತರ ಅವರಿಂದ ಬರುತ್ತದೆ. ಜೊತೆಗೆ ಶ್ರೀದೇವಿಯ ಹೆಸರು ಹೇಳಲು ಅವರು ಮರೆಯೋದಿಲ್ಲ. “ಶ್ರೀದೇವಿ ನನ್ನ ಡಾರ್ಲಿಂಗ್‌. ಆಕೆಯನ್ನು ಮರೆಯಲು ಸಾಧ್ಯವಿಲ್ಲ. ಆಕೆ ತೀರಿಕೊಂಡ ನಂತರ ನಾನು ಯಾವುದೇ ಸಂದರ್ಶನ ನೀಡಿಲ್ಲ. ಆಕೆಯನ್ನು ನೆನೆಸಿಕೊಂಡರೆ ಅಳು ಬರುತ್ತದೆ. ಅದೊಂದು ದಿನ ಆಕೆ ಕರೆ ಮಾಡಿ ನನ್ನನ್ನು ಹಾಗೂ ನನ್ನ ತಂಡವನ್ನು ಚೆನ್ನೈಗೆ ಕರೆಸಿಕೊಂಡಿದ್ದಳು.

Advertisement

ಬೆಳಗ್ಗೆ ನಾನು ಎದ್ದೇಳುವಾಗ ನನ್ನ ದಿಂಬು ಪಕ್ಕ ಒಂದು ಜ್ಯುವೆಲ್ಲರಿ ಬಾಕ್ಸ್‌ ಇತ್ತು. ಅಪ್ಪಿತಪ್ಪಿ ಇಲ್ಲಿಟ್ಟರಬೇಕೆಂದು ನಾನು ಅದನ್ನು ಆಕೆಯ ತಾಯಿಗೆ ಕೊಡೋಕೆ ಹೋದೆ. ಆಗ ಆಕೆಯ ತಾಯಿ, “ಅದು ಶ್ರೀದೇವಿ ನಿಮಗಾಗಿ ಇಟ್ಟು ಹೋಗಿರೋದು’ ಎಂದರು. ತೆಗೆದು ನೋಡಿದರೆ ಅದರಲ್ಲಿ ವಜ್ರದ ನೆಕ್ಲೆಸ್‌ ಇತ್ತು. ಜೊತೆಗೆ ನನ್ನ ತಂಡದ ಪ್ರತಿ ಸದಸ್ಯರಿಗೂ 11 ಸಾವಿರ ರೂಪಾಯಿಯನ್ನೂ ನೀಡಿದಳು’ ಎಂದು ಶ್ರೀದೇವಿಯನ್ನು ನೆನಪಿಸಿಕೊಳ್ಳುತ್ತಾರೆ. 

ಇದೇ ವೇಳೆ ಸರೋಜ್‌ ಖಾನ್‌ ಬಾಲಿವುಡ್‌ನ‌ ಮತ್ತೂಬ್ಬ ನಟನ ಬಗ್ಗೆ ಹೇಳಲು ಮರೆಯುವುದಿಲ್ಲ. ಅದು ಗೋವಿಂದ. “ನಾನು ಡ್ಯಾನ್ಸ್‌ ಸ್ಕೂಲ್‌ ಆರಂಭಿಸಿದಾಗ ಒಬ್ಬರಿಗೆ 100 ರೂಪಾಯಿ ಶುಲ್ಕ ಇಟ್ಟಿದ್ದೆ. ಅಂದು ಗೋವಿಂದ ಡ್ಯಾನ್ಸ್‌ಗೆ ಸೇರಲು ಕಾಸಿರಲಿಲ್ಲ. ಉಚಿತವಾಗಿ ಸೇರಿಸಿಕೊಂಡೆ. ಆದರೆ, ಆತನಿಗೆ ಮೊದಲ ಸಿನಿಮಾ ಸಿಕ್ಕಾಗ ಬಂದು ನನ್ನ ಕೈಗೊಂದು ಕವರ್‌ ಕೊಟ್ಟ. ಅದನ್ನು ತೆಗೆದು ನೋಡಿದಾಗ ಅದರಲ್ಲಿ 24 ಸಾವಿರ ರೂಪಾಯಿ ಇತ್ತು.

ಅದರ ಮೇಲೆ “ಗುರುದಕ್ಷಿಣೆ’ ಎಂದು ಬರೆದಿತ್ತು. ಆ ನಂತರ 2002ರಲ್ಲಿ ನನ್ನ ಆರೋಗ್ಯ ಕೆಟ್ಟು ಮಲಗಿದ್ದೆ. ನನ್ನ ನೆನಪಿನ ಶಕ್ತಿಯೇ ಹೊರಟು ಹೋಗಿತ್ತು. ಆಗಲೂ ಗೋವಿಂದ ಒಂದು ಪಾರ್ಸೆಲ್‌ ಕಳುಹಿಸಿದ್ದ. ತೆಗೆದು ನೋಡಿದಾಗ ಅದರಲ್ಲಿ ನಾಲ್ಕು ಲಕ್ಷ ರೂಪಾಯಿ ಇತ್ತು. ನನ್ನ ಆರೋಗ್ಯ ವೆಚ್ಚಕ್ಕಾಗಿ ಆ ಕಾಸು ಕಳುಹಿಸಿಕೊಟ್ಟಿದ್ದ ಗೋವಿಂದ’ ಎಂದು ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳುತ್ತಾರೆ.

ಎಲ್ಲಾ ಓಕೆ, ಭಾರತೀಯ ಚಿತ್ರರಂಗದ ಸದ್ಯದ ಡ್ಯಾನ್ಸ್‌ ಹೇಗಿದೆ ಎಂದರೆ ಸರ್ಕಸ್‌ ತರಹ ಇದೆ ಎಂಬ ಉತ್ತರ ಸರೋಜ್‌ ಖಾನ್‌ರಿಂದ ಬರುತ್ತದೆ. “ಈಗ ಹೊಸದನ್ನು ಪ್ರಯತ್ನಿಸುವುದಿಲ್ಲ. ಮಾಡಿದ್ದನ್ನೇ ರಿಪೀಟ್‌ ಮಾಡುತ್ತಾರೆ. ಡ್ಯಾನ್ಸ್‌ ಎಂದರೆ ಹೊಸ ಹೊಸ ಸ್ಟೆಪ್‌ಗಳ ಮೂಲಕ ಕಟ್ಟಿಕೊಡುವಂಥದ್ದು. ಆದರೆ ಈಗ ಸರ್ಕಸ್‌ ತರಹ ಆಗಿದೆ’ ಎನ್ನುತ್ತಾರೆ.

ಎಪ್ಪತ್ತರ ವಯಸ್ಸಲ್ಲೂ ಉತ್ಸಾಹದ ಚಿಲುಮೆಯಂತೆ ಓಡಾಡಿಕೊಂಡು ನೃತ್ಯ ನಿರ್ದೇಶನ ಮಾಡುತ್ತಿರುವ ಸರೋಜ್‌ ಖಾನ್‌ಗೆ ಡ್ಯಾನ್ಸ್‌ ಬಿಟ್ಟು ಬದುಕುವ ಶಕ್ತಿ ಇಲ್ಲವಂತೆ. “ಇನ್ನೂ ಏನಕ್ಕೆ ಕೆಲಸ ಮಾಡುತ್ತೀ ಎಂದು ಮಕ್ಕಳು ಬೈಯುತ್ತಾರೆ. ಆದರೆ ಕೆಲಸ ಮಾಡದೇ, ಡ್ಯಾನ್ಸ್‌ ಹೇಳಿಕೊಡದೇ ಇದ್ದರೆ ನಾನು ಸಾಯುತ್ತೇನೆ. ಅದೇ ನನ್ನ ಉಸಿರು’ ಎಂದು ಕೆಲಸದ ಮೇಲಿನ ಪ್ರೀತಿಯನ್ನು ತೋರಿಸುತ್ತಾರೆ ಸರೋಜ್‌ ಖಾನ್‌. 

Advertisement

Udayavani is now on Telegram. Click here to join our channel and stay updated with the latest news.

Next