ಮುಂಬಯಿ : 2019ರ ಹೊಸ ವರ್ಷದ ಇಂದಿನ ಮೊದಲ ದಿನವಾದ ಮಂಗಳವಾರ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 186 ಅಂಕಗಳ ಉತ್ತಮ ಜಿಗತವನ್ನು ದಾಖಲಿಸಿ 36,254.57 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಆಶಾದಾಯಕವಾಗಿ ಕೊನೆಗೊಳಿಸುವುದರೊಂದಿಗೆ ಹೊಸ ವರ್ಷಕ್ಕೆ ಶುಭಾರಂಭ ನೀಡಿತು.
ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ತೀವ್ರ ಹಿನ್ನಡೆ ಕಂಡಿದ್ದ ಮುಂಬಯಿ ಶೇರು ಅನಂತರ ಆರ್‌ಬಿಐ ನೀಡಿದ ಧನಾತ್ಮಕ ಪ್ರತಿಕ್ರಿಯೆಯಿಂದ ಹುರುಪು ಪಡೆಯಿತು. ದೇಶದ ಸಾರ್ವಜನಿಕ ರಂಗದ ಬ್ಯಾಂಕುಗಳು ಈಗ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದ್ದು ಅವುಗಳ ಮೇಲಿನ ಅನುತ್ಪಾದಕ ಆಸ್ತಿಯ ಒತ್ತಡ ಕಡಿಮೆಯಾಗುತ್ತಿದೆ ಎಂದು ಆರ್‌ಬಿಐ ಹೇಳಿದುದು ಮುಂಬಯಿ ಶೇರು ಪೇಟೆಯಲ್ಲಿ ಹೊಸ ವಿಶ್ವಾಸ ತುಂಬಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 47.55 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,910.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಬ್ಯಾಂಕ್ ಶೇರುಗಳು ಮಾತ್ರವಲ್ಲದೆ ಟೆಲಿಕಾಂ, ಐಟಿ, ಆಟೋ ಮತ್ತು ಫಾರ್ಮಾ ಕ್ಷೇತ್ರದ ಶೇರುಗಳು ಉತ್ತಮ ಬೇಡಿಕೆಯನ್ನು ಪಡೆದವು.
ಎಚ್ ಡಿ ಎಫ್ ಸಿ ಬ್ಯಾಂಕ್, ಎಸ್‌ಬಿಐ, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್‌ಫೋಸಿಸ್, ಹೀರೋ ಮೋಟೋಕಾರ್ಪ್, ಟಾಟಾ ಮೋಟರ್, ಸನ್ ಫಾರ್ಮಾ, ಬಜಾಜ್ ಫಿನಾನ್ಸ್, ಟಿಸಿಎಸ್, ಪವರ್ ಗ್ರಿಡ್, ಐಟಿಸಿ, ಬಜಾಜ್ ಆಟೋ, ಮಾರುತಿ, ಕೋಲ್ ಇಂಡಿಯಾ, ಲಾರ್ಸನ್, ಆರ್‌ಐಎಲ್ ಶೇರುಗಳು ಶೇ.1.3ರ ಏರಿಕೆಯನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,701 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,445 ಕಂಪೆನಿಗಳು ಮುನ್ನಡೆ ಸಾಧಿಸಿದವು; 1.105 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 151 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.