ನವದೆಹಲಿ: ನಮ್ಮ ಸೈನಿಕರ ಸಮವಸ್ತ್ರ ಇನ್ನು ಕೆಲವು ದಿನಗಳಲ್ಲಿ ಬದಲಾಗಲಿದೆ. ಭಾರತೀಯ ಸೈನಿಕರು ಎಲ್ಲಾ ರೀತಿಯ ವಾತಾವರಣಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರೆಲ್ಲರೂ ತೊಡುವ ಸಮವಸ್ತ್ರ ಮಾತ್ರ ಒಂದೇ ರೀತಿಯದ್ದಾಗಿದೆ.
ಈ ಅನನುಕೂಲವನ್ನು ತಪ್ಪಿಸಲು ನಿರ್ಧರಿಸುವ ಅಧಿಕಾರಿಗಳು ಇದೀಗ ನಮ್ಮ ಸೈನಿಕರ ಸಮವಸ್ತ್ರವನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಸೇನಾ ಮೂಲಗಳನ್ನು ಉದ್ಧರಿಸಿ ಖಾಸಗಿ ವೆಬ್ ಸೈಟ್ ಒಂದು ವರದಿ ಮಾಡಿದೆ.
ವಿಭಿನ್ನ ಹವಾಮಾನಗಳಿಗೆ ಹೊಂದಿಕೆಯಾಗುವಂತೆ ಸೇನಾ ಸಮವಸ್ತ್ರದ ಸ್ವರೂಪವನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ನಮ್ಮ ಸೈನಿಕರು ತೊಡುತ್ತಿರುವ ಸಮವಸ್ತ್ರದಲ್ಲಿ ಟೆರಿಕೋಟ್ ಫೈಬರ್ ಅಂಶ ಹೆಚ್ಚಿದ್ದು ಇದು ತುಂಬಾ ಶೆಕೆ ಮತ್ತು ತೇವಾಂಶ ವಾತಾವರಣಗಳಿಗೆ ಹೊಂದಿಕೆಯಾಗುವುದಿಲ್ಲ.
ಇದಕ್ಕೂ ಮೊದಲು ಹತ್ತಿ ಬಟ್ಟೆಯ ಸಮವಸ್ತ್ರಗಳನ್ನು ನಮ್ಮ ಸೈನಿಕರು ತೊಡುತ್ತಿದ್ದರು. ಆದರೆ ಇವುಗಳ ನಿರ್ವಹಣೆ ಕಷ್ಟಕರವಾಗಿದ್ದ ಕಾರಣ ಟೆರಿಕೋಟ್ ಫೈಬರ್ ನಿಂದ ತಯಾರಿಸಲಾದ ಸಮವಸ್ತ್ರಗಳ ಬಳಕೆ ಚಾಲ್ತಿಗೆ ಬಂತು.
ಇದೀಗ ಈ ಎಲ್ಲಾ ಅಂಧಗಳನ್ನು ಪರಿಗಣಿಸಿ ಮತ್ತು ಸಮಕಾಲೀನ ಯುದ್ಧಭೂಮಿಯ ಸನ್ನಿವೇಶಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ಸಮವಸ್ತ್ರಗಳ ಸ್ವರೂಪವನ್ನು ನಿರ್ಧರಿಸಲಾಗುವುದು ಎಂದು ತಿಳಿದುಬಂದಿದೆ.