Advertisement
ವರ್ಷದ ಹಿಂದೆ ಲಡಾಖ್ ಘರ್ಷಣೆಗೂ ಮುನ್ನ ಚೀನದ ಪಡೆಗಳು ಇದೇ ಮಾದರಿಯಲ್ಲಿ ಗಡಿ ಭಾಗದಲ್ಲಿ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದ್ದವು. ಎಲ್‌ಎಸಿಯಲ್ಲಿ ತಿಂಗಳುಗಳ ಕಾಲ ನಡೆದ ಸಂಘರ್ಷದಲ್ಲಿ ಭಾರತ ದಿಟ್ಟ ಪ್ರತ್ಯುತ್ತರ ನೀಡಿದ ಬಳಿಕ ಉಭಯ ದೇಶಗಳ ನಡುವೆ ಹಲವಾರು ಸುತ್ತಿನ ಸೇನಾ ಮಟ್ಟದ ಮಾತುಕತೆಗಳು ನಡೆದು ಕೊನೆಯಲ್ಲಿ ಚೀನ ತನ್ನ ಪಡೆಗಳನ್ನು ಎಲ್‌ಎಸಿಯಿಂದ ವಾಪಸ್ ಕರೆಸಿಕೊಳ್ಳಲು ಸಮ್ಮತಿಸಿತ್ತು. ಇದರ ಹೊರತಾಗಿಯೂ ಎಲ್‌ಎಸಿಯಲ್ಲಿ ಗಸ್ತು ಹೆಚ್ಚಿಸಿದ್ದೇ ಅಲ್ಲದೆ ಗಡಿ ಪ್ರದೇಶದಲ್ಲಿ ವಿವಿಧ ಸೇನಾ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು.
Related Articles
Advertisement
ಇದೇ ವೇಳೆ ಎಲ್‌ಎಸಿಯಲ್ಲಿನ ವಿವಾದಿತ ಪ್ರದೇಶಗಳ ಮೇಲೆ ಅಧಿಪತ್ಯ ಸ್ಥಾಪಿಸುವ ಷಡ್ಯಂತ್ರವಾಗಿ ತನ್ನ ಭೂಭಾಗದೊಳಗೆ ಸಣ್ಣ ಸಣ್ಣ ಸೇನಾ ಗ್ರಾಮಗಳನ್ನು ನಿರ್ಮಿಸುತ್ತಿದೆ. ಇದು ಚೀನದ ಸೇನಾ ಕಾರ್ಯತಂತ್ರದ ಭಾಗವೆನ್ನಲಾಗಿದ್ದು ಈ ಗ್ರಾಮಗಳಲ್ಲಿ ಟಿಬೆಟ್ ನಿವಾಸಿಗರು ಅಥವಾ ತನ್ನ ಯೋಧರಿಗೆ ಖಾಯಂ ಆಗಿ ವಾಸ್ತವ್ಯ ಹೂಡುವಂತೆ ಆದೇಶ ನೀಡುವ ಸಾಧ್ಯತೆಗಳಿವೆ ಮತ್ತು ಸಂಘರ್ಷದ ಸಂದರ್ಭದಲ್ಲಿ ಈ ಗ್ರಾಮಗಳನ್ನು ಚೀನ ಸೈನಿಕರು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚೀನದ ಯಾವುದೇ ಷಡ್ಯಂತ್ರ ವನ್ನು ವಿಫಲಗೊಳಿಸಲು ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ. ಯುದ್ಧ ಸನ್ನದ್ಧ ತಂಡವಾದ ಸಮಗ್ರ ಸಮರ ಪಡೆ (ಐಬಿಜಿ) ರಚನೆಗೆ ತಾತ್ವಿಕ ಒಪ್ಪಿಗೆ ಲಭಿಸಿರುವುದರಿಂದ ಯಾವುದೇ ತುರ್ತು ಸಂದರ್ಭದಲ್ಲಿ ಅತ್ಯಂತ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಸಜ್ಜಾಗುವ ರೀತಿಯಲ್ಲಿ ಈ ತಂಡವನ್ನು ರಚಿಸಿದ್ದು ಅವಶ್ಯಬಿದ್ದಲ್ಲಿ ಈ ತಂಡವನ್ನು ಬಳಸಿಕೊಳ್ಳಲು ಭಾರತೀಯ ಸೇನೆ ನಿರ್ಧರಿಸಿದೆ. ಗಡಿ ಪ್ರದೇಶದಲ್ಲಿನ ಮೂಲಸೌಕರ್ಯ ಗಳನ್ನು ಹೆಚ್ಚಿಸುವ ಜತೆಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲು, ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿಕೊಂಡಿದ್ದು ಚೀನಕ್ಕೆ ಸಡ್ಡು ಹೊಡೆದಿದೆ.