ಹೊಸದಿಲ್ಲಿ: ವಾಟ್ಸ್‌ಆ್ಯಪ್ ಮೂಲಕ ಯೋಧರನ್ನು ವಂಚಿಸಿ ಸೇನೆಯ ಪ್ರಮುಖ ಮಾಹಿತಿ ಪಡೆಯಲು ಪಾಕಿಸ್ಥಾನ, ಚೀನದವರು ಇನ್ನಿಲ್ಲದ ತಂತ್ರಗಳನ್ನು ಹೂಡುತ್ತಾರೆ. ಇಂಥ ವ್ಯವಸ್ಥಿತ ಜಾಲಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಭೂಸೇನೆ ಅದೇ ಮಾದರಿಯ ಸಂವಹನ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.
“ಸೆಕ್ಯೂರ್ ಆ್ಯಪ್ಲಿಕೇಶನ್ ಫಾರ್ ಇಂಟರ್‌ನೆಟ್’- ಎಸ್‌ಎಐ ಎಂಬ ಹೆಸರಿನ ಆ್ಯಪ್ ಇದಾಗಿದ್ದು, ಅದರ ಮೂಲಕ ವ್ಯೂಹಾತ್ಮಕ ಮಾಹಿತಿ ಸೋರಿಕೆ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಮಾತ ನಾಡಿದ ಹಿರಿಯ ಅಧಿಕಾರಿಯೊಬ್ಬರು ಎಸ್‌ಎಐ (ಸಾಯ್) ಎನ್ನುವುದು ಸರಳ ಆ್ಯಪ್ಲಿಕೇಶನ್. ಅದು ಆ್ಯಂಡ್ರಾಯ್ಡ ವ್ಯವಸ್ಥೆಯಲ್ಲಿ ಲಭ್ಯವಿದೆ. ಅದನ್ನು ಸೇನೆಯ ವಿವಿಧ ವಿಭಾಗಗಳಲ್ಲಿ ಬಳಕೆ ಮಾಡಲಾಗುತ್ತದೆ. ವಾಯ್ಸ, ಟೆಕ್ಸ್ಟ್ ಮೆಸೇಜ್, ವಿಡಿಯೋ ಮೆಸೇಜ್‌ಗಳನ್ನು ಕಳುಹಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿರುವ ಸೇನೆಯ ಸಿಗ್ನಲಿಂಗ್ ವಿಭಾಗದಲ್ಲಿ ಕೆಲಸ ಮಾಡುವ ಕ. ಸಾಯಿ ಶಂಕರ್ ಎಸ್‌ಎಐ ಆ್ಯಪ್ ಅನ್ನು ಆರಂಭಿಕ ಹಂತದಲ್ಲಿ ಅಭಿವೃದ್ಧಿಗೊಳಿ ಸಿದ್ದರು. ಅನಂತರ ಅದನ್ನು ಸೇನೆಯ ಉಪಯೋಗಕ್ಕೆ ತಕ್ಕಂತೆ ಮೇಲ್ದರ್ಜೆಗೆ ಏರಿಸಲಾಯಿತು ಎಂದು ಅವರು ಹೇಳಿದ್ದಾರೆ. ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆ್ಯಪ್‌ನಂತೆಯೇ ಎಸ್‌ಎಐ ಇದೆ. ಟೆಲಿಗ್ರಾಂ, ಸಂವಾದ ( SAMVAD) ಮತ್ತು ಜಿಐಎಂಎಸ್‌ನಂತೆಯೇ ಕಾರ್ಯ ನಿರ್ವಹಿಸುತ್ತದೆ. ಆದರೆ ಸೇನೆಯ ಅಗತ್ಯಕ್ಕೆ ತಕ್ಕಂತೆ ಭದ್ರತಾ ವ್ಯವಸ್ಥೆಯ ಜತೆಗೆ ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ ಆಅಧಿಕಾರಿ. ಹೊಸ ಆ್ಯಪ್ ಅನ್ನು ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಕಂಪ್ಯೂ ಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂಗೆ ಮಾತ್ರ ಛೇದಿಸಿ ಮಾಹಿತಿ ವಿಶ್ಲೇಷಿಸಲು ಸಾಧ್ಯವಿದೆ. ಜತೆಗೆ ಸೇನೆಯಲ್ಲಿರುವ ಸೈಬರ್ ವಿಭಾಗಕ್ಕೆ ಈ ಅವಕಾಶವಿದೆ. ಈ ವ್ಯವಸ್ಥೆಯ ಬೌದ್ಧಿಕ ಹಕ್ಕುಸ್ವಾಮ್ಯ ಪಡೆಯುವ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಹೊಸ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ. ಸಾಯಿ ಶಂಕರ್ ಅವರ ಕೌಶಲ್ಯಯುಕ್ತ ಸಾಧನೆಯನ್ನು ಪ್ರಶಂಸಿಸಿದ್ದಾರೆ.