ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಈಗ ಭಾರೀ ಹಿಮಪಾತವಾಗುತ್ತಿದೆ. ಹಿಮಪಾತದ ಕಾರಣದಿಂದ ಇಲ್ಲಿನ ರಸ್ತೆಗಳೆಲ್ಲಾ ಭಾರೀ ಹಿಮದಿಂದ ಮುಚ್ಚಲ್ಪಟ್ಟಿವೆ. ಇಂತಹ ಸನ್ನಿವೇಶದಲ್ಲಿ ತುಂಬು ಗರ್ಭಿಣಿಯೊಬ್ಬರನ್ನು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಪಡೆಯ ಯೋಧರು ಮತ್ತು ನಾಗರಿಕರು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದ್ದು ನಮ್ಮ ಯೋಧರ ಈ ಮಾನವೀಯ ಕಾರ್ಯಕ್ಕೆ ದೇಶವಾಸಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ವಿಶೇಷವೆಂದರೆ ಭಾರತೀಯ ಸೇನೆಯು ತನ್ನ 72ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ದಿನದಂದೇ ಈ ಘಟನೆ ವರದಿಯಾಗಿದೆ ಮತ್ತು 0.31 ಸೆಕೆಂಡಿನ ಈ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಯೋಧರ ಮಾನವೀಯ ಕಾರ್ಯವನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ.
#HumsaayaHainHum
‘ತನ್ನ ವೃತ್ತಿಪರತೆಗೆ ಹೆಸರಾಗಿರುವ ಭಾರತೀಯ ಸೇನೆ ದೇಶದ ನಾಗರಿಕರು ಆಪತ್ತಿಗೆ ಸಿಲುಕಿದಾಗಲೆಲ್ಲಾ ಅವರ ನೆರವಿಗೆ ಧಾವಿಸುವ ಮೂಲಕ ತನ್ನ ಮಾನವೀಯ ಮುಖವನ್ನೂ ಸಹ ವ್ಯಕ್ತಪಡಿಸುತ್ತಿದೆ. ಪರಿಸ್ಥಿತಿಗೆ ಸ್ಪಂದಿಸುವ ಮೂಲಕ ಕಷ್ಟಕರವಾದದ್ದನ್ನೂ ಸಾಧ್ಯಮಾಡುವ ಸಾಮರ್ಥ್ಯ ನಮ್ಮ ಸೇನೆಗಿದೆ’ ಎಂದು ಪ್ರಧಾನಿ ಮೋದಿ ರೀಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಶಮೀಮಾ ಎಂಬ ತುಂಬು ಗರ್ಭಿಣಿಯನ್ನು ಸುಮಾರು 30 ಜನಸ್ಥಳಿಯರ ನೆರವಿನಿಂದ ಸ್ಟ್ರೆಚರ್ ಮೂಲಕ ಹೊತ್ತೊಯ್ದ ಭಾರತೀಯ ಸೇನೆಯ ನೂರು ಜನ ಯೋಧರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುತ್ತಾರೆ. ಬಳಿಕ ಶಮೀಮಾ ಅವರು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ಸೇನೆ ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ತಿಳಿಸಿದೆ.