Advertisement

LACಗೆ ಭಾರತ್‌ ನಿಗಾ: ಭಾರತೀಯ ಸೇನೆಗೆ ಸುಧಾರಿತ ಸ್ವದೇಶೀ ಡ್ರೋನ್‌

01:22 AM Jul 22, 2020 | Hari Prasad |

ಹೊಸದಿಲ್ಲಿ: ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನ ಸೈನಿಕರ ಚಲನವಲನಗಳ ಮೇಲೆ ನಿಗಾ ಹೆಚ್ಚಿಸಲು ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ‘ಭಾರತ್‌’ ವಿಶೇಷ ಡ್ರೋನ್‌ಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ.

Advertisement

ಈ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಡಿಆರ್‌ಡಿಒದ ಚಂಡೀಗಢ ಪ್ರಯೋಗಾಲಯ ಅಭಿವೃದ್ಧಿಪಡಿಸಿದೆ.

ವಿಶ್ವದ ಅತ್ಯಂತ ಚುರುಕು ಬುದ್ಧಿ ಮತ್ತು ಹಗುರವಾದ ಕಣ್ಗಾವಲು ಡ್ರೋನ್‌ಗಳ ಪಟ್ಟಿಗೆ ಇವು ಸೇರಬಲ್ಲವು ಎಂದು ಡಿಆರ್‌ಡಿಒ ವಿಶ್ವಾಸ ವ್ಯಕ್ತಪಡಿಸಿದೆ.

ಪೂರ್ವ ಲಡಾಖ್‌ನ ಅತೀ ಎತ್ತರದ ಪ್ರದೇಶಗಳಲ್ಲಿ ನಿಖರ ಕಣ್ಗಾವಲಿಗಾಗಿ ಭಾರತೀಯ ಸೇನೆಗೆ ಡ್ರೋನ್‌ಗಳ ಆವಶ್ಯಕತೆ ಇದೆ. ಡಿಆರ್‌ಡಿಒ ಹಸ್ತಾಂತರಿಸಿರುವ ಡ್ರೋನ್‌ಗಳು ಎಲ್‌ಎಸಿ ವಲಯಗಳಲ್ಲಿ ಕಾರ್ಯಾಚರಣೆಗಿಳಿಯಲಿವೆ ಎಂದು ರಕ್ಷಣ ಮೂಲಗಳು ತಿಳಿಸಿವೆ.

ಕಾಯ್ದೆಗೆ ತಿದ್ದುಪಡಿ
ಪೂರ್ವ ಲಡಾಖ್‌ನಲ್ಲಿ ಚೀನದ ದುರಾಕ್ರಮಣ, ದಕ್ಷಿಣ ಚೀನ ಸಮುದ್ರದ ಮೇಲೆ ಹಕ್ಕು ಸ್ಥಾಪಿಸುವ ಕ್ಸಿ ಜಿನ್‌ಪಿಂಗ್‌ ಆಡಳಿತದ ನಿಲುವು ವಿರೋಧಿಸುವ ರಾಷ್ಟ್ರೀಯ ರಕ್ಷಣ ಅಧಿಕಾರ ಕಾಯ್ದೆ (ಎನ್‌ಡಿಎಎ) ತಿದ್ದುಪಡಿಯನ್ನು ಅಮೆರಿಕದ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ ಸರ್ವಾನುಮತದಿಂದ ಅಂಗೀಕರಿಸಿದೆ.

Advertisement

ಕೋವಿಡ್ 19ನ್ನು ಎಲ್ಲೆಡೆ ಹಬ್ಬಿಸಿ, ವಿಶ್ವದ ಗಮನವನ್ನು ಬೇರೆಡೆ ವರ್ಗಾಯಿಸಲು ಚೀನ ಇಂಥ ದುರ್ವರ್ತನೆ ತೋರುತ್ತಿದೆ ಎಂದು ಅಮೆರಿಕ ಸಂಸದರು ಅಭಿಪ್ರಾಯಪಟ್ಟಿದ್ದಾರೆ. ಲಡಾಖ್‌ ಅಲ್ಲದೆ ಬ್ರೂನೈ, ಮಲೇಷ್ಯಾ, ಫಿಲಿಪ್ಪೀನ್ಸ್‌, ತೈವಾನ್‌, ವಿಯೆಟ್ನಾಂಗಳ ಮೇಲೆ ಚೀನದ ದುರಾಕ್ರಮಣಕ್ಕೆ ಕಡಿವಾಣ ಹಾಕಲು ಈ ತಿದ್ದುಪಡಿ ನೆರವಾಗಲಿದೆ.

ಮಿಗ್‌-29 ಕೆ ಫೈಟರ್‌ ನಿಯೋಜನೆ
ಲಡಾಖ್‌ ಗಡಿಯ ಉದ್ವಿಗ್ನತೆ ನಡುವೆ ಭಾರತೀಯ ನೌಕಾಪಡೆ ಮಿಗ್‌-29 ಕೆ ಸೂಪರ್‌ಸಾನಿಕ್‌ ಫೈಟರ್‌ ಜೆಟ್‌ ಮತ್ತು ಪೊಸಿಡಾನ್‌-8 ಐಗಳನ್ನು ನಿಯೋಜಿಸುತ್ತಿದೆ. 18 ಜೆಟ್‌ಗಳನ್ನು ಐಎನ್‌ಎಸ್‌ ವಿಕ್ರಮಾದಿತ್ಯದಲ್ಲಿ, ಉಳಿದವುಗಳನ್ನು ಗೋವಾದಲ್ಲಿ ನಿಯೋಜಿಸಲಾಗಿದೆ. ಹಾಗೆಯೇ ಅಮೆರಿಕ ಮೂಲದ ಪಿ-8ಐ ಯುದ್ಧ ವಿಮಾನಗಳನ್ನು ಎಲ್‌ಎಸಿಯಲ್ಲಿ ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾರತ್‌ ಬಲ
– ತೀವ್ರ ಶೀತ ವಲಯಕ್ಕೆ ತಕ್ಕಂತೆ ತಂತ್ರಜ್ಞಾನ

– ಮಿತ್ರರು, ಶತ್ರುಗಳ ಪತ್ತೆಗೆ ವಿಶೇಷ ಬುದ್ಧಿಮತ್ತೆ

– ಕ್ಷಣ ಕ್ಷಣದ ವೀಡಿಯೋ ಚಿತ್ರೀಕರಿಸಿ ರವಾನೆ

– ಕಾಡಿನಲ್ಲಿ ಅಡಗಿದವರನ್ನೂ ಪತ್ತೆಹಚ್ಚುವ ಶಕ್ತಿ

– ನಿಖರ ರಾತ್ರಿದೃಷ್ಟಿ

– ಶತ್ರು ರಾಡಾರ್‌ಗಳಲ್ಲಿ ಪತ್ತೆಯಾಗದು

Advertisement

Udayavani is now on Telegram. Click here to join our channel and stay updated with the latest news.

Next