ಶ್ರೀನಗರ್: ಕೋವಿಡ್ 19 ವೈರಸ್ ಅಟ್ಟಹಾಸ ಒಂದೆಡೆಯಾದರೆ, ಸದ್ದಿಲ್ಲದೆ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ದಾಳಿ ನಡೆಸಲು ಸಂಚು ನಡೆಸಿ ಠಿಕಾಣಿ ಹೂಡಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನಾಪಡೆ ಶುಕ್ರವಾರ ಕರಾರುವಕ್ಕಾಗಿ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಸೇನಾಪಡೆಯ ಕದನವಿರಾಮ ಉಲ್ಲಂಘನೆಗೆ ತಕ್ಕ ತಿರುಗೇಟು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸೇನಾ ಮೂಲಗಳು ನ್ಯೂಸ್ ಏಜೆನ್ಸಿ ಎಎನ್ ಐಗೆ ತಿಳಿಸಿರುವ ಪ್ರಕಾರ, ಪಾಕಿಸ್ತಾನ ಸೇನೆ ಐವರು ಉಗ್ರರನ್ನು ಅಕ್ರಮವಾಗಿ ಕೇರನ್ ಸೆಕ್ಟರ್ ನೊಳಗೆ ಏಪ್ರಿಲ್ 1ರಂದು ಕಳುಹಿಸಿತ್ತು. ಈ ಉಗ್ರರು ಗಡಿ ನಿಯಂತ್ರಣ ರೇಖೆಯಲ್ಲಿರುವ ಸೇನಾಪಡೆಯನ್ನು ಗುರಿಯಾಗಿರಿಸಿ ದಾಳಿ ನಡೆಸಲು ಸಿದ್ಧತೆ ನಡೆಸಿರುವುದಾಗಿ ವಿವರಿಸಿದೆ.
ಈ ಜಿದ್ದಾಜಿದ್ದಿಯ ಹೋರಾಟದಲ್ಲಿ ಸೇನೆಯ ವಿಶೇಷ ಪಡೆ ಐವರು ಉಗ್ರರನ್ನು ಹೊಡೆದುರುಳಿಸಿತ್ತು. ಆದರೆ ಈ ಕದನದಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಯ ಐದು ಯೋಧರು ಹುತಾತ್ಮರಾಗಿರುವುದಾಗಿ ಮೂಲಗಳು ತಿಳಿಸಿದೆ.
ಭಾರತೀಯ ಸೇನಾಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿರುವುದನ್ನು ಡ್ರೋಣ್ ನಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೋವನ್ನು ಎಎನ್ ಐ ಪೋಸ್ಟ್ ಮಾಡಿದೆ. ಈ ಪ್ರದೇಶದಲ್ಲಿ ಮತ್ತೊಂದು ಉಗ್ರರ ತಂಡ ಒಳನುಸುಳಲು ತಯಾರಾಗಿದೆ ಎಂದು ಸೇನಾ ಮೂಲಗಳು ತಿಳಿಸಿದೆ. ಭಾರತೀಯ ಸೇನೆ ಸ್ಫೋಟಕವನ್ನು ಎಸೆದ ಪರಿಣಾಮ ಪಾಕ್ ಸೇನೆಯ ಯೋಧರು ಸಾವನ್ನಪ್ಪಿರುವುದಾಗಿ ತಿಳಿಸಿದೆ.