ನವದೆಹಲಿ:ಭಾರತದ ಗಡಿಭಾಗದಲ್ಲಿ ನುಸುಳುಕೋರರಿಗೆ ನೆರವು ನೀಡುತ್ತಿರುವ ಪಾಕಿಸ್ತಾನ ಮಿಲಿಟರಿಗೆ ತಕ್ಕ ಪ್ರತ್ಯುತ್ತರ ಎಂಬಂತೆ
ಭಾರತೀಯ ಸೇನಾ ಪಡೆ ಗಡಿಭಾಗದಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸ ಮಾಡಿರುವುದನ್ನು ಮಂಗಳವಾರ ಬಹಿರಂಗಗೊಳಿಸಿದೆ. ಘಟನೆಯಲ್ಲಿ 20ರಿಂದ 25 ಸೈನಿಕರು ಸಾವನ್ನಪ್ಪಿರುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.
ಜಮ್ಮು ಕಾಶ್ಮೀರದ ಗಡಿಭಾಗದ ನೌಶೇರಾ ಸೆಕ್ಟರ್ ನಲ್ಲಿ ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸ ಮಾಡಿರುವುದಾಗಿ ಮೇಜರ್ ಜನರಲ್ ಅಶೋಕ್ ನರುಲಾ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಗಡಿಭಾಗ ನುಸುಳಿ ಬರುತ್ತಿರುವ ನುಸುಳುಕೋರರು ಜಮ್ಮು ಕಾಶ್ಮೀರ ಪ್ರದೇಶದ ಯುವಕರ ಮೇಲೆ ಪ್ರಭಾವ ಬೀರುತ್ತಿದ್ದು ಆ ಚಟುವಟಿಕೆ ಹತ್ತಿಕ್ಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿರುವುದಾಗಿ ವಿವರಿಸಿದರು.
ಗಡಿಭಾಗದಲ್ಲಿ ಶಸ್ತ್ರ ಸಜ್ಜಿತ ನುಸುಳುಕೋರರಿಗೆ ಪಾಕಿಸ್ತಾನ ಸೇನೆ ಬೆಂಬಲ ನೀಡುತ್ತಿದೆ. ಗಡಿ ನುಸುಳಿ ಬಂದವರು ಜಮ್ಮು ಕಾಶ್ಮೀರ ಯುವಕರ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲ ಗಡಿಭಾಗದ ಗ್ರಾಮಗಳನ್ನೂ ಗುರಿಯಾಗಿರಿಸಿ ದಾಳಿ ನಡೆಸಲು ಹೇಸುವುದಿಲ್ಲ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ಗಡಿ ನುಸುಳುಕೋರರಿಗೆ ಪಾಠ ಕಲಿಸಲು ಗಡಿಭಾಗದ ಪಾಕ್ ಸೇನಾ ನೆಲೆಗಳನ್ನು ಗ್ರೆನೇಡ್ ಲಾಂಚರ್ ಮೂಲಕ
ಧ್ವಂಸಗೊಳಿಸಿರುವುದಾಗಿ ತಿಳಿಸಿದ ನರುಲಾ ಅವರು ಕೇವಲ 24 ಸೆಕೆಂಡ್ ಗಳಲ್ಲಿ ಧ್ವಂಸಗೊಳಿಸಿರುವುದಾಗಿ ವಿವರಿಸಿದರು.