Advertisement

ಕಲ್ಲು ಹೊಡೆದರೆ ಸುಮ್ಮನಿರಬೇಕಾ?: ಜ|ಬಿಪಿನ್‌ ರಾವತ್‌ ಪ್ರಶ್ನೆ

09:52 AM May 29, 2017 | Karthik A |

ಹೊಸದಿಲ್ಲಿ: ‘ಜನ ಕಲ್ಲು ತೂರುತ್ತಾರೆ, ಜನ ನಮ್ಮ ಕಡೆ ಪೆಟ್ರೋಲ್‌ ಬಾಂಬ್‌ ಎಸೆಯುತ್ತಾರೆ. ಒಂದು ವೇಳೆ ನಮ್ಮವರು ಏನು ಮಾಡುವುದು ಎಂದು ಕೇಳಿದರೆ, ನಾನು ಅವರಿಗೆ ಸುಮ್ಮನೆ ನಿಂತು ಕೊಂಡು ಹಾಗೆಯೇ ಸತ್ತುಬಿಡಿ ಎಂದು ಹೇಳಲೇ? ನೀವು ಸತ್ತ ಮೇಲೆ ನಾನು ರಾಷ್ಟ್ರೀಯ ಧ್ವಜದೊಂದಿಗೆ ಉತ್ತಮ ಶವಪೆಟ್ಟಿಗೆ ತಂದು, ನಿಮ್ಮ ಶವವನ್ನು ಅದರಲ್ಲಿರಿಸಿ, ಸಕಲ ಗೌರವಗಳೊಂದಿಗೆ  ನಿಮ್ಮ ಮನೆಗೆ ಕಳುಹಿಸುತ್ತೇನೆ ಎಂದು ಹೇಳಲೇ? ಸೇನೆಯ ಮುಖ್ಯಸ್ಥನಾಗಿ ನಾನು ಅವರಿಗೆ ಈ ರೀತಿ ಹೇಳಬೇಕೇ? ಸಾಧ್ಯವಿಲ್ಲ. ನಾನು ನನ್ನ ಸಹೋದ್ಯೋಗಿಗಳ ಧೈರ್ಯ ಕಾಪಾಡಲೇಬೇಕು…’ ಇದು ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಹೇಳಿದ ಮಾತುಗಳು. ಜಮ್ಮು ಮತ್ತು ಕಾಶ್ಮೀರದಲ್ಲಿ ಗಲಭೆ ನಿಯಂತ್ರಿಸಲು ‘ಮಾನವ ಗುರಾಣಿ’ ಬಳಸಿದ್ದ ಮೇಜರ್‌ ಲೀಟುಲ್‌ ಗೊಗೋಯ್‌ ಅವರಿಗೆ ಪ್ರಶಸ್ತಿ ಕೊಟ್ಟದ್ದು ಟೀಕೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ಕೊಟ್ಟಿರುವ ಅವರು, ಕಾಶ್ಮೀರದ ಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ.

Advertisement

ಸಂದರ್ಶನದ ಪೂರ್ಣ ಪಾಠ:
ಇದು ಛಾಯಾ ಸಮರ

ಇದೊಂದು ಛಾಯಾ ಸಮರ ಮತ್ತು ಛಾಯಾ ಸಮರವೆಂದರೆ ಅದು ಕೀಳು ಯುದ್ಧ. ಇದನ್ನು ಕೆಟ್ಟ ರೀತಿಯಲ್ಲೇ ಆಡಲಾಗುತ್ತದೆ. ಎದುರಾಳಿಗಳು ನಿಮಗೆ ಮುಖಾಮುಖೀಯಾದಾಗ ಮಾತ್ರ ನಿಯಮಗಳು ಅನ್ವಯಿಸುತ್ತವೆ. ಆದರೆ ಇದು ಕೀಳು ಸಮರ… ಹೀಗಾಗಿಯೇ ಎದುರಿಸಲು ನವೀನ ಮಾರ್ಗ ಅನುಸರಿಸುವುದು ಅಗತ್ಯವಾಗಿದೆ.

ಶಸ್ತ್ರ ಬಳಸಲಿ
ಒಂದು ರೀತಿ ನೋಡುವುದಾದರೆ ಈ ಜನ ಕಲ್ಲು ಎಸೆಯುವ ಬದಲು, ಬಂದೂಕಿನಿಂದ ಗುಂಡು ಹಾರಿಸಲಿ. ಆಗ ನಾವು ಖುಷಿ ಪಡುತ್ತೇವೆ. ಅಷ್ಟೇ ಅಲ್ಲ, ನಾವೇನು ಮಾಡಬೇಕೋ ಅದನ್ನೇ ಮಾಡುತ್ತೇವೆ.

ಸೇನೆ ಕಂಡರೆ ಹೆದರಲೇಬೇಕು
ನಿಮ್ಮನ್ನು ಕಂಡರೆ ಎದುರಾಳಿಗಳು ಹೆದರಲೇಬೇಕು. ನಮ್ಮದು ಸ್ನೇಹ ಮನೋಭಾವ ಇರುವ ಸೇನೆ. ಆದರೆ ನಮ್ಮನ್ನು ಕಾನೂನು ಮತ್ತು ಸುವ್ಯವಸ್ಥೆ ಮರುಸ್ಥಾಪಿಸಲು ಕರೆದಾಗ ಮಾತ್ರ ಜನ ಹೆದರಲೇಬೇಕು.

ಧೈರ್ಯ ತುಂಬೋದು ನನ್ನ ಕರ್ತವ್ಯ
ಸೇನಾ ಮುಖ್ಯಸ್ಥನಾಗಿ ನನ್ನ ಆತಂಕವಿರುವುದು ಸೇನೆಯ ನೈತಿಕತೆ ಬಗ್ಗೆ. ಅದು ನನ್ನ ಕರ್ತವ್ಯ. ನಾನು ಸಮರಾಂಗಣದಿಂದ ತುಂಬಾ ದೂರದಲ್ಲೇ ಇದ್ದೇನೆ. ನಾನು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಉತ್ತೇಜಿಸಲು ಸಾಧ್ಯವಿಲ್ಲ. ಆದರೆ ನನ್ನ ಹುಡುಗರಿಗೆ ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಬಹುದು. ಯಾವಾಗಲೂ ನನ್ನ ಜನರಿಗೆ ಒಂದು ಮಾತು ಹೇಳುತ್ತೇನೆ, ಕೆಲವೊಮ್ಮೆ ತಪ್ಪುಗಳಾಗುತ್ತವೆ, ಆದರೆ ಈ ರೀತಿ ಆದಾಗ ನೀವು ಅಧೀರರಾಗುವುದು ಬೇಡ, ನಾನಿದ್ದೇನೆ ಎಂದೇ ಹೇಳುತ್ತೇನೆ.

Advertisement

ಪೊಲೀಸ್‌-ಸೇನೆ ಸಂಬಂಧ: ನಾಳೆ ಅನಂತ್‌ನಾಗ್‌ನಲ್ಲಿ ಚುನಾವಣೆ ನಡೆದು ಇಂಥವೇ ಸಂಗತಿಗಳು ಆಗಲೂಬಹುದು. ಸಹಾಯಕ್ಕೆ ಕರೆದಾಗ ಸೇನೆ ಸ್ಪಂದಿಸದಿದ್ದರೆ, ನಾವು ರಕ್ಷಣೆ ಕೊಡುವ ಜನ, ಪೊಲೀಸರು ಮತ್ತು ಸೇನೆಯ ನಡುವಿನ ನಂಬಿಕೆ ಮುರಿದುಹೋಗುತ್ತದೆ. ಇಂಥ ಪರಿಸ್ಥಿತಿ ಉದ್ಭವಿಸಲೇಬಾರದು. ಏಕೆಂದರೆ, ಹೀಗೆ ಆಗಲಿ ಎಂದೇ ಉಗ್ರರು ಕಾಯುತ್ತಿದ್ದಾರೆ. ಅಲ್ಲದೆ ಇದು ಸೇನೆ ಮತ್ತು ಇತರೆ ರಕ್ಷಣಾ ಪಡೆಗಳ ನಡುವೆ ಕಂದಕ ಸೃಷ್ಟಿಸುತ್ತದೆ.

ಗೊಗೋಯ್‌ ತನಿಖೆ ಬಗ್ಗೆ: ಕೋರ್ಟ್‌ ಆಫ್ ಎನ್‌ಕ್ವಾಯರಿಯಲ್ಲಿ ಏನಾಗುತ್ತಿದೆ ಎಂಬುದು ನನಗೆ ಗೊತ್ತು. ಸದ್ಯದಲ್ಲೇ ಇದು ಅಂತಿಮವಾಗುತ್ತದೆ. ಅವರಿಗೆ ಶಿಕ್ಷಿಸಲು ನಾವು ಏನು ಮಾಡಬೇಕು?.

ರಾಜಕೀಯ ಕ್ರಮ: ಕಾಶ್ಮೀರ ಸಮಸ್ಯೆಗೆ ರಾಜಕೀಯ ತಂತ್ರಗಾರಿಕೆ ಮೂಲಕ ಪರಿಹಾರ ಮಾಡಿಕೊಳ್ಳುವುದು ಸರಕಾರಗಳಿಗೆ ಬಿಟ್ಟ ವಿಚಾರ. ಆದರೂ ಈ ಹಿಂದೆ ಏನಾಯ್ತು? ಕಾರ್ಗಿಲ್‌ ಸಮರವಾಯ್ತು ಅಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next