ನ್ಯೂಯಾರ್ಕ್ : ಅಮೆರಿಕದಲ್ಲಿ ಪ್ರಕೃತ ದ್ವೇಷದ ಕಿಚ್ಚಿನ ದಾಳಿಗಳಿಗೆ ಗುರಿಯಾಗುತ್ತಿರುವ ಭಾರತೀಯರು ತೀವ್ರ ಪಾಣಭಯದಲ್ಲಿ ಬದುಕುವ ಸ್ಥಿತಿ ಇರುವ ನಡುವೆಯೇ ಅಮೆರಿಕದ ನ್ಯೂಜೆರ್ಸಿಯಲ್ಲಿ 29 ವರ್ಷ ಪ್ರಾಯದ ಭಾರತೀಯ ಅಮೆರಿಕನ್ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.
ಕಳೆದ ವಾರವೇ ಸಂಭವಿಸಿರುವ ಈ ಸಾವು ಖಾಸಗಿ ವಿಷಯಕ್ಕೆ ಸಂಬಂಧಿಸಿರುವುದಾಗಿ ಮೃತ ಭಾರತೀಯ ವ್ಯಕ್ತಿಯ ಕುಟುಂಬದವರು ಹೇಳಿದ್ದು ಇದು ಜನಾಂಗೀಯ ದ್ವೇಷದ ಫಲವಾಗಿ ನಡೆದಿರುವ ಸಾವಲ್ಲ ಎಂಬುದು ತಡವಾಗಿ ಗೊತ್ತಾಗಿದೆ.
ಜೆರ್ಸಿ ನಗರದಲ್ಲಿ ಸಂಭವಿಸಿರುವ ಈ ಭಾರತೀಯ ವ್ಯಕ್ತಿಯ ಸಾವಿನ ನಿಖರ ಕಾರಣಗಳು ಇನ್ನೂ ಗೊತ್ತಾಗಿಲ್ಲ; ವೈದ್ಯಕೀಯ ಪರೀಕ್ಷರ ಕಾರ್ಯಾಲಯವು ಈ ಸಾವಿನ ಕುರಿತಾದ ತನಿಖೆಯನ್ನು ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೇ ಗೊತ್ತಾಗಬೇಕಾಗಿದೆ.
ಈ ನಡುವೆ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ನಿನ್ನೆ ಟ್ವೀಟ್ ಮಾಡಿ, “ಇಲ್ಲಿನ ಭಾರತೀಯ ಕಾನ್ಸುಲೇಟ್ ನ ಅಧಿಕಾರಿಗಳು ಮಸ್ಯಾಚುಸೆಟ್ಸ್‌ನಲ್ಲಿರುವ ಮೃತ ಭಾರತೀಯ ಅಮೆರಿಕನ್ ವ್ಯಕ್ತಿಯ ತಂದೆಯನ್ನು ಸಂಪರ್ಕಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ಮೃತ ಭಾರತೀಯ ವ್ಯಕ್ತಿಯ ತಂದೆ ಹೇಳಿರುವ ಪ್ರಕಾರ, ಈ ಸಾವು ಕೌಟುಂಬಿಕ ದುರದೃಷ್ಟದ ಖಾಸಗಿ ವಿಷಯ ಕುರಿತಾದ ಸಾವಾಗಿದೆ.
ಭಾರತೀಯ ಅಮೆರಿಕನ್ ವ್ಯಕ್ತಿಯ ಈ ಸಾವನ್ನು ಯಾರೂ ಪ್ರಕೃತ ಅಮೆರಿಕದಲ್ಲಿ ನಡೆಯುತ್ತಿರುವ ದ್ವೇಷದ ಕಿಚ್ಚಿನ ಘಟನೆಗಳೊಂದಿಗೆ ಜೋಡಿಸಬಾರದು ಎಂದು ಆತನ ಕುಟುಂಬದವರು ವಿನಂತಿಸಿರುವುದಾಗಿ ಮೂಲಗಳು ತಿಳಿಸಿವೆ.