ಬೆಂಗಳೂರು: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ದ ಮೊದಲ ಪಂದ್ಯದ ಮೊದಲ ದಿನ ಮಳೆ ಕಾಟ ನೀಡಿದರೆ ಎರಡನೇ ದಿನದಾಟದಲ್ಲಿ ಬ್ಯಾಟರ್ ಗಳು ಕ್ರೀಸ್ ನಲ್ಲಿ ನಿಲ್ಲಲೂ ಪರದಾಡಿದರು. ನ್ಯೂಜಿಲ್ಯಾಂಡ್ ವೇಗಿಗಳ ಬಿಗು ದಾಳಿಗೆ ಸಿಲುಕಿದ ಟೀಂ ಇಂಡಿಯಾ ಕೇವಲ 46 ರನ್ ಗೆ ಆಲೌಟಾಗಿ ಅವಮಾನ ಅನುಭವಿಸಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ಆಯ್ಕೆ ಮಾಡಿ ಕೈಸುಟ್ಟುಕೊಂಡರು. ಕಿವೀಸ್ ವೇಗಿಗಳ ದಾಳಿಗೆ ಟೀಂ ಇಂಡಿಯಾ ಬ್ಯಾಟರ್ ಗಳು ಪತರುಗಟ್ಟಿದರು. ರನ್ ಮಾಡುವುದು ಬಿಡಿ, ಕ್ರೀಸ್ ನಲ್ಲಿ ನಿಲ್ಲಲೂ ಕಷ್ಟಪಡುವಂತಾಯಿತು.
ವಿಕೆಟ್ ಕೀಪರ್ ರಿಷಭ್ ಪಂತ್ 20 ರನ್ ಮಾಡಿದರೆ, ಯಶಸ್ವಿ ಜೈಸ್ವಾಲ್ 13 ರನ್ ಮಾಡಿದರು. ಐದು ಮಂದಿ ಬ್ಯಾಟರ್ ಗಳು ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದರು.
ಕಿವೀಸ್ ಬೌಲಿಂಗ್ ದಾಳಿ ಹೇಗಿತ್ತೆಂದರೆ ಹತ್ತಕ್ಕಿಂತ ಹೆಚ್ಚು ಎಸೆತ ಎದುರಿಸಿದ್ದು ಕೇವಲ ಐವರು ಬ್ಯಾಟರ್ ಗಳು ಮಾತ್ರ. ಪಂತ್, ಜೈಸ್ವಾಲ್, ರೋಹಿತ್ ಶರ್ಮಾ ಬಳಿಕ ಕೊನೆಯ ವಿಕೆಟ್ ಗೆ ಒಂದಾದ ಸಿರಾಜ್ ಮತ್ತು ಕುಲದೀಪ್ ಯಾದವ್ ಹತ್ತಕ್ಕಿಂತ ಹೆಚ್ಚು ಎಸೆತ ಎದುರಿಸುವ ಧೈರ್ಯ ತೋರಿದರು.
ಕಿವೀಸ್ ಪರ ಕೇವಲ ಮೂವರು ಮಾತ್ರ ಬೌಲಿಂಗ್ ಮಾಡಿದರು. ಅಲ್ಲರೂ ವೇಗಿಗಳು. ಮ್ಯಾಟ್ ಹೆನ್ರಿ ಐದು ವಿಕೆಟ್ ಪಡೆದರೆ, ವಿಲಿಯಂ ಓʼರೂರ್ಕ್ ನಾಲ್ಕು ವಿಕೆಟ್ ಮತ್ತು ಟಿಮ್ ಸೌಥಿ ಒಂದು ವಿಕೆಟ್ ಪಡೆದರು.
ಮೂರನೇ ಅತಿ ಕಡಿಮೆ ಮೊತ್ತ
46 ರನ್ ಭಾರತದ ಟೆಸ್ಟ್ ಇತಿಹಾಸದಲ್ಲಿ ಮೂರನೇ ಅತಿ ಕಡಿಮೆ ರನ್ ಆಗಿದೆ. ಆಸೀಸ್ ವಿರುದ್ದ 36 ರನ್ ಗೆ ಆಲೌಟಾಗಿದ್ದು ದಾಖಲೆಯಾಗಿದೆ.