ಭಾರತೀಯ ವಾಯುಪಡೆಯ ಅತ್ಯಾಧುನಿಕ ಸಿಎಚ್-47ಎಫ್ ಹೆವಿಲಿಫ್ಟ್ ಹೆಲಿಕಾಪ್ಟರ್‌ಗಳು ಈಗ ಕೋವಿಡ್ ವಿರುದ್ಧದ ಹೋರಾಟದ ಕಣಕ್ಕೆ ಇಳಿದಿವೆ.
ಅರುಣಾಚಲ ಪ್ರದೇಶದ ಎತ್ತರದ ಸ್ಥಳಗಳಲ್ಲಿರುವ ಸೌಲಭ್ಯ ವಂಚಿತ ಪ್ರದೇಶಗಳಿಗೆ ವಿವಿಧ ಜೀವನಾವಶ್ಯಕ ವಸ್ತುಗಳನ್ನು ಈ ಕಾಪ್ಟರ್‌ಗಳು ಹೊತ್ತೂಯ್ಯುತ್ತಿವೆ.
ಅಮೆರಿಕ ನಿರ್ಮಿತವಾಗಿರುವ ಬೋಯಿಂಗ್ ಚಿನೂಕ್ ಹೆಲಿಕಾಪ್ಟರ್‌ಗಳನ್ನು ಕಳೆದ ವರ್ಷ ಎಚ್-64 ಅಪಾಚೆ ಟ್ಯಾಂಕ್ ಬಸ್ಟರ್‌ಗಳ ಜೊತೆ ಖರೀದಿಸಲಾಗಿತ್ತು.
ಅರುಣಾಚಲದ ಗಡಿ ಪ್ರದೇಶದಿಂದ 25 ಕಿ.ಮೀ ದೂರದಲ್ಲಿರುವ ಮಿಯಾವೊ ಜಿಲ್ಲೆಯಲ್ಲಿನ ಏರ್‌ಫೀಲ್ಡ್‌ನಿಂದ ಅಗತ್ಯ ಸಾಮಗ್ರಿಗಳನ್ನು ಹೊತ್ತ ಚಿನೂಕ್ ಹೆಲಿ ಕಾಪ್ಟರ್ ಟೇಕ್‌ಆಫ್ ಆಗುತ್ತಿರುವ ವಿಡಿಯೋವನ್ನು ಅಲ್ಲಿನ ಮುಖ್ಯಮಂತ್ರಿ ಪೆಮ ಖಂಡು ಟ್ವೀಟ್ ಮಾಡಿದ್ದಾರೆ.
ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ 83 ಕ್ವಿಂಟಾಲ್ ಅಗತ್ಯ ವಸ್ತುಗಳನ್ನು ಹೊತ್ತು ಮಿಯಾವೋದಿಂದ ಚಾಂಗ್ಲಾಂಗ್ ಜಿಲ್ಲೆಯ ವಿಜೋಯ್ ನಗರದತ್ತ ಹೊರಟಿದೆ. ದೇವರ ದಯೆಯಿಂದ ವಾತಾವರಣ ತಿಳಿಯಾಗಿದೆ. ಹೀಗಾಗಿ ಕೋವಿಡ್ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳನ್ನು ಗ್ರಾಮಗಳಿಗೆ ತಲುಪಿಸಲು ಸಾಧ್ಯವಾಗಿದೆ ಎಂದು ಖಂಡು ಟ್ವೀಟ್‌ನಲ್ಲಿ ಬರೆದಿದ್ದಾರೆ.
ವಿಶೇಷತೆಗಳು?
– ಸಿಎಚ್-47ಎಫ್ ಹೆವಿಲಿಫ್ಟ್ ಹೆಲಿಕಾಪ್ಟರ್ ಗರಿಷ್ಠ 11 ಟನ್ ಭಾರವನ್ನು ಹೊತ್ತಯ್ಯಬಲ್ಲದು
– ಯುದ್ಧಕ್ಕೆ ಸನ್ನದ್ಧ 54 ಶಸ್ತ್ರಸಜ್ಜಿತ ಯೋಧರು ಇದರೊಳಗೆ ಕುಳಿತುಕೊಳ್ಳಬಹುದು
– ದುರಂತ, ವಿಕೋಪಗಳ ವೇಳೆ ಒಮ್ಮೆಗೆ 24 ರೋಗಿಗಳ ಸ್ಟ್ರೆಚರ್ ಕೊಂಡೊಯ್ಯುವ ಸಾಮರ್ಥ್ಯ
– 2019ರ ಮಾರ್ಚ್ 25ರಂದು ನಾಲ್ಕು ಚಿನೂಕ್ ಕಾಪ್ಟರ್‌ಗಳು ಭಾರತಕ್ಕೆ ಬಂದಿದ್ದವು
– ಪರ್ವತ ಶ್ರೇಣಿ ಹೊಂದಿರುವ ಲಡಾಕ್, ಕಾಶ್ಮೀರ, ಈಶಾನ್ಯ ಭಾಗದಲ್ಲಿ ಇದು ಹೆಚ್ಚು ಉಪಯುಕ್ತ