ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಪಡೆ ಪಾಕಿಸ್ಥಾನದ ವಾಯುಪ್ರದೇಶಕ್ಕೆ ನುಗ್ಗಿ ಅಲ್ಲಿ ಕಡಿದಾದ ಬೆಟ್ಟಗಳ ನಡುವೆ ದಟ್ಟ ಕಾಡಿನ ಮಧ್ಯದಲ್ಲಿದ್ದ ಜೈಶ್ ಸಂಘಟನೆಯ ಉಗ್ರ ಶಿಬಿರವನ್ನು ಉಡಾಯಿಸಿದ್ದ ಕಾರ್ಯಾಚರಣೆಗೆ ‘ಅಪರೇಷನ್ ಬಂದರ್’ ಎಂದು ನಾಮಕರಣ ಮಾಡಿತ್ತು ಎಂಬ ವಿಷಯ ನಮಗೆ ತಿಳಿದೇ ಇದೆ. ಇದೀಗ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮತ್ತು ಉಗ್ರ ಶಿಬಿರಗಳ ಮೆಲೆ ನಿಖರವಾಗಿ ಬಾಂಬ್ ಗಳನ್ನು ಸುರಿದು ಬಂದಿದ್ದ 12 ಮಿರಾಜ್ 2000 ಯುದ್ಧ ವಿಮಾನಗಳಿಗೆ ಇರಿಸಲಾಗಿದ್ದ ರಹಸ್ಯ ಹೆಸರೇನು (ಕೋಡ್ ನೇಮ್) ಗೊತ್ತೇ?
ಮಿರಾಜ್ 2000 ಯುದ್ಧ ವಿಮಾನಗಳಿಗೆ ಈ ಕಾರ್ಯಾಚರಣೆಗೆ ಇರಿಸಲಾಗಿದ್ದ ಕೋಡ್ ನೇಮ್ ‘ಸ್ಪೈಸ್’ ಎಂದಾಗಿತ್ತು. ಈ ಯುದ್ಧ ವಿಮಾನಗಳು ಸ್ಪೈಸ್ ಹೆಸರಿನ ಕ್ಷಿಪಣಿಗಳನ್ನು ಹೊತ್ತೊಯ್ದಿದ್ದ ಕಾರಣ ಇವುಗಳಿಗೆ ‘ಸ್ಪೈಸ್’ ಎಂಬ ಕೋಡ್ ನೇಮ್ ಇರಿಸಲಾಗಿತ್ತು.
ಭಾರತದ ವಿವಿಧ ವಾಯುನೆಲೆಗಳಿಂದ ಫೆಬ್ರವರಿ 26ರಂದು ಹಾರಿದ್ದ 12 ಮಿರಾಜ್ ಯುದ್ಧ ವಿಮಾನಗಳು ಪಾಕಿಸ್ಥಾನದ ವಾಯುನೆಲೆಯನ್ನು ದಾಟಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿದ್ದ ಜೈಶ್ ಸಂಘಟನೆಯ ರಹಸ್ಯ ಉಗ್ರ ಶಿಬಿರಗಳ ಮೇಲೆ ಯಶಸ್ವಿಯಾಗಿ ಕ್ಷಿಪಣಿ ದಾಳಿಯನ್ನು ನಡೆಸಿ ಸುರಕ್ಷಿತವಾಗಿ ತಮ್ಮ ತಮ್ಮ ತಾಣಗಳಿಗೆ ಮರಳಿದ್ದವು.
ಫೆಬ್ರವರಿ 26ರ 3.30ರ ಸುಮಾರಿಗೆ ಭಾರತೀಯ ವಾಯುಪಡೆ ನಡೆಸಿದ್ದ ಈ ದಾಳಿಯಲ್ಲಿ ಮಿರಾಜ್ ಯುದ್ಧ ವಿಮಾನದ ಪೈಲಟ್ ಗಳು ಒಟ್ಟು 5 ಸ್ಪೈಸ್ 2000 ಬಾಂಬುಗಳನ್ನು ಉಗ್ರಶಿಬಿರಗಳ ಮೇಲೆ ಹಾಕಿದ್ದರು, ಇವುಗಳಲ್ಲಿ ನಾಲ್ಕು ಬಾಂಬುಗಳು ಉಗ್ರಗಾಮಿಗಳು ನಿದ್ರಿಸುತ್ತಿದ್ದ ಆ ಕಟ್ಟಡದ ಛಾವಣಿಯ ಮೆಲೆ ಅಪ್ಪಳಿಸಿದ್ದವು.
ದಾಳಿಯಲ್ಲಿ ಪಾಲ್ಗೊಂಡಿದ್ದ ಯುದ್ಧವಿಮಾನಗಳು ವಾಯುಪಡೆಯ 7 ಮತ್ತು 9ನೇ ಸ್ಕ್ವಾರ್ಡನ್ ಗೆ ಸೇರಿದ್ದವಾಗಿತ್ತು. ಇನ್ನು ಕೆಲವು ವಿರಾಜ್ ಯುದ್ಧ ವಿಮಾನಗಳು ಮತ್ತು ಎಸ್.ಯು. – 30 ಎಂ.ಕೆ.ಐ. ಯುದ್ಧ ವಿಮಾನಗಳನ್ನು ಈ ದಾಳಿ ಸಂದರ್ಭದಲ್ಲಿ ಪಾಕಿಸ್ಥಾನ ಯುದ್ಧ ವಿಮಾನಗಳ ಸಂಭವನೀಯ ಪ್ರತಿರೋಧವನ್ನು ನಿರೋಧಿಸಲು ನಿಯೋಜಿಸಲಾಗಿತ್ತು.