ಬಹುಶಃ ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿ ಯಾರು ಎಂಬ ಪ್ರಶ್ನೆ ಉದ್ಭವವಾದರೆ ಮೊದಲು ಸಿಗುವ ಉತ್ತರವೇ ರಚಿತಾ ರಾಮ್. ರಚಿತಾ ರಾಮ್ ಸದ್ಯಕ್ಕೆ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳೆಲ್ಲಾ ಈ ವರ್ಷ ಒಂದರ ಹಿಂದೊಂದು ಬಿಡುಗಡೆಯಾಗಲಿದೆ. ಸದ್ಯಕ್ಕೆ ಬಿಝಿಯಾಗಿರುವ ರಚಿತಾ, ಒಪ್ಪಿಕೊಂಡಿರುವ ಎಲ್ಲ ಚಿತ್ರಗಳನ್ನು ಮುಗಿಸಿ, ಮುಂದಿನ ಚಿತ್ರಗಳಿಗೆ ಡೇಟ್ಸ್ ಹೊಂದಿಸಬೇಕಿದೆ.
ಬರೀ ಬಿಝಿಯಾಗಿರುವುದಷ್ಟೇ ಅಲ್ಲ, ನಾಲ್ಕೂ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ನಾಲ್ಕರಲ್ಲೂ ವಿಭಿನ್ನವಾದ ಪಾತ್ರಗಳು ಅವರಿಗೆ ಸಿಕ್ಕಿದೆಯಂತೆ. ಈ ಪೈಕಿ ಬಿಡುಗಡೆಗೆ ಸಿದ್ಧವಾಗುತ್ತಿರುವ ಅಯೋಗ್ಯ ಚಿತ್ರದಲ್ಲಿ ಮಂಡ್ಯ ಹುಡುಗಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪಕ್ಕಾ ಮಂಡ್ಯ ಕನ್ನಡ ಸಂಭಾಷಣೆಯನ್ನೂ ಅವರು ಹೇಳುತ್ತಾರಂತೆ. ಸೀತಾರಾಂ ಕಲ್ಯಾಣ ಔಟ್ ಅಂಡ್ ಔಟ್ ಫ್ಯಾಮಿಲಿ ಸ್ಟೋರಿಯಾದರೆ, ನಟ ಸಾರ್ವಭೌಮದಲ್ಲಿ ಸ್ಟೈಲಿಶ್ ಹುಡುಗಿಯಂತೆ. ಐ ಲವ್ ಯೂ ಚಿತ್ರದಲ್ಲಿ ಸಖತ್ ಬೋಲ್ಡ್ ಆದಂತಹ ಪಾತ್ರ ಅವರದ್ದಾಗಿದೆ. ರಚಿತಾ ಹೇಳುವಂತೆ, “ಇಷ್ಟು ದಿನ ಮಾಡಿದ ಪಾತ್ರ ಒಂದು ಕಡೆಯಾದರೆ, ಆ ಸಿನೆಮಾದ ಪಾತ್ರವೇ ಬೇರೆಯದ್ದಾಗಿ ನಿಲ್ಲುತ್ತದೆ. ಸೆಟ್‌ಗೆ ಬ್ಲ್ಯಾಕ್ ಆಗಿ ಬರ್ತೀನಿ. ಆ ನಂತರ ನಿಮಗೆ ಯಾವ ತರಹದ ಅಭಿನಯ ಬೇಕೋ ಅದನ್ನು ತೆಗೀರಿ ಎಂದು ನಿರ್ದೇಶಕ ಆರ್.ಚಂದ್ರು ಅವರಿಗೆ ಹೇಳಿದ್ದೇನೆ’ ಎನ್ನುತ್ತಾರೆ ರಚಿತಾ.
ದರ್ಶನ್ ಅಭಿನಯದ ಬುಲ್‌ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ರಚಿತಾ, ಈ ಐದು ವರ್ಷಗಳಲ್ಲಿ ಒಂಬತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ಇದರಲ್ಲಿ ಹಲವು ಹಿಟ್‌ಗಳು ಸಿಗುವುದರ ಜೊತೆಗೆ, ಕನ್ನಡದ ಬಹುತೇಕ ಸ್ಟಾರ್ ಕಲಾವಿದರ ಜೊತೆಗೆ ನಟಿಸಿರುವ ಹೆಗ್ಗಳಿಕೆ ರಚಿತಾಗಿದೆ. “ಈ ಐದು ವರ್ಷದಲ್ಲಿ ನಾನು ಮಾಡಿರುವ ಅಷ್ಟೂ ಸಿನೆಮಾಗಳ ಹೆಸರುಗಳು ಜನರಲ್ಲಿ ಬಾಯಲ್ಲಿದೆ. ಜನ ಹೆಸರು ಹೇಳುತ್ತಾರೆಂದರೆ ಅದಕ್ಕೆ ಕಾರಣ ನನ್ನ ಸಿನೆಮಾ ಆಯ್ಕೆ. ನಾನು ಗುಣಮಟ್ಟಕ್ಕೆ ಹೆಚ್ಚು ಪ್ರಾಮುಖ್ಯ ಕೊಡುತ್ತೇನೆ. 100 ಸಿನೆಮಾ ಮಾಡುವ ಬದಲು 10 ಸಿನೆಮಾ ಮಾಡಿದರೂ ಜನ ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇ ನಿಟ್ಟಿನಲ್ಲಿ ನಾನು ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ರಚಿತಾ.
ಬುಲ್‌ಬುಲ್ ಮೂಲಕ ಸ್ಟಾರ್ ಸಿನೆಮಾದಿಂದ ತನ್ನ ಸಿನೆಮಾ ಯಾನ ಆರಂಭವಾಗಿದ್ದು, ಇವತ್ತಿಗೂ ಅದೇ ತರಹ ನಡೆದುಕೊಂಡು ಬಂದಿದೆ ಎನ್ನುವ ರಚಿತಾ, “ಐದು ವರ್ಷದ ಹಿಂದೆ ಜರ್ನಿ ಆರಂಭಿಸಿದಾಗ ಹೇಗಿದ್ದೇನೋ ಇವತ್ತಿಗೂ ಅದೇ ರೀತಿ ಸಾಗಿದೆ. ಎಲ್ಲೂ ಡೌನ್‌ಫಾಲ್ ಆಗಿಲ್ಲ. ಆವತ್ತಿನಿಂದ ಇವತ್ತಿನವರೆಗೂ ದೊಡ್ಡ ಸಿನಿಮಾ, ದೊಡ್ಡ ತಂಡದ ಜೊತೆಗೆ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಅದೆಲ್ಲಕ್ಕೂ ಹೆಚ್ಚಾಗಿ ಈ ಐದು ವರ್ಷಗಳಲ್ಲಿ ಚಿತ್ರರಂಗ ಹೊಸ ಅನುಭವ, ಪಾಠಗಳನ್ನು ನೀಡಿತು. ಯಾರಲ್ಲಿ ಹೇಗೆ ವರ್ತಿಸಬೇಕು, ಒಂದು ತಂಡವಾಗಿ ಹೇಗಿರಬೇಕು ಎಂಬುದನ್ನು ಕಲಿತೆ’ ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ರಚಿತಾ.
ಮೂಲತಃ ಕಿರುತೆರೆಯಿಂದ ಬಂದ ರಚಿತಾ, ಈಗಲೂ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಮುಂಚಿನಂತೆ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಸಾಧ್ಯವಾಗದಿದ್ದರೂ, ರಿಯಾಲಿಟಿ ಶೋಗಳಲ್ಲಿ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಅದನ್ನು ಮುಂದುವರೆಸುವುದಾಗಿ ಹೇಳುವ ರಚಿತಾ, “ನಾನು ಕಿರುತೆರೆಯಿಂದ ಬಂದವಳು. ನಾನು ಅದನ್ನು ಯಾವತ್ತೂ ಮರೆಯೋದಿಲ್ಲ. ಸಿನೆಮಾಕ್ಕಿಂತ ಹೆಚ್ಚಾಗಿ ಮನೆ ಮನೆಗೆ ತಲುಪೋದು ಕಿರುತೆರೆ. ಜನರಿಗೆ ನಾವು ಏನು, ಹೇಗೆ, ನಮ್ಮ ವರ್ತನೆ ಹೇಗಿರುತ್ತದೆ ಎಂಬುದು ಜನರಿಗೆ ಗೊತ್ತಾಗೋದು ಕಿರುತೆರೆಯಿಂದ. ಜೊತೆಗೆ ನಾನು ಕಿರುತೆರೆಯ ಕಾರ್ಯಕ್ರಮ ತುಂಬಾ ಎಂಜಾಯ್ ಮಾಡುತ್ತೇನೆ’ ಎನ್ನುತ್ತಾರೆ ರಚಿತಾ.