ಸುಕೃತ ವಾಗ್ಲೆ ಅಂದಾಕ್ಷಣ ನೆನಪಿಗೆ ಬರೋದೇ “ಜಟ್ಟ’ ಹಾಗೂ “ಕಿರಗೂರಿನ ಗಯ್ನಾಳಿಗಳು’ ಚಿತ್ರಗಳು. ಈ ಚಿತ್ರಗಳಲ್ಲಿ ಪಕ್ಕಾ ರಫ್ ಅಂಡ್ ಟಫ್ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಸುಕೃತ ವಾಗ್ಲೆ ಅವರನ್ನು ಈಗಲೂ ಜನರ ಗುರುತಿಸೋದು ಆ “ಗಯ್ನಾಳಿ’ ಪಾತ್ರದ ಮೂಲಕವೇ. ಸುಕೃತಾಗೆ ಹೀಗೆ ಗುರುತಿಸಿ ಕರೆದರೆ ಯಾವುದೇ ಬೇಸರವೂ ಇಲ್ಲ. ಒಂದು ಪಾತ್ರ ಜನರ ಮನಸ್ಸಲ್ಲಿ ಆಳವಾಗಿ ಬೇರೂರಿದಾಗ ಮಾತ್ರ, ಆ ಪಾತ್ರದ ಮೂಲಕ ಆ ಕಲಾವಿದರನ್ನೂ ಗುರುತಿಸೋದು ವಾಡಿಕೆ. ಈಗ ಸುಕೃತ ವಾಗ್ಲೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮತ್ತೂಂದು ಅಂಥದ್ದೇ ರಗಡ್ ಆಗಿರುವ ಪಾತ್ರ ಮಾಡಿದ್ದಾರೆ. ಆ ಮೂಲಕ ಮತ್ತಷ್ಟು ಗುರುತಿಸಿಕೊಳ್ಳುವ ವಿಶ್ವಾಸ ಸುಕೃತ ವಾಗ್ಲೆ ಅವರಿಗಿದೆ.
ಈಗಾಗಲೇ “ಮೇಘ ಅಲಿಯಾಸ್ ಮ್ಯಾಗಿ’ ಎಂಬ ಹೊಸ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲೂ ಸುಕೃತ ವಾಗ್ಲೆ ಅವರಿಗೆ ಮತ್ತದೇ ಪಕ್ಕಾ ರಗಡ್ ಆಗಿರುವ ಪಾತ್ರ ಸಿಕ್ಕಿದೆ. ಹೌದು, ಸುಕೃತ ವಾಗ್ಲೆ ಅವರಿಗೆ ಅದೇನೋ ಗೊತ್ತಿಲ್ಲ, “ಜಟ್ಟ’ ಚಿತ್ರದ ನಂತರ ಸಿಕ್ಕಂತಹ ಪಾತ್ರಗಳೆಲ್ಲವೂ ಹಾಗೇ ಇವೆ. ಆದರೆ, ಸುಕೃತ ಮಾತ್ರ, ಒಂದಷ್ಟೂ ಬೇಸರಿಸಿಕೊಳ್ಳದೆ, ತಮ್ಮ ಪಾಲಿಗೆ ಬಂದ ಪಾತ್ರವನ್ನು ಕಣ್ಣಿಗೊತ್ತಿಕೊಂಡು ನಿರ್ವಹಿಸುತ್ತಿದ್ದಾರೆ. ಒಬ್ಬ ನಟಿಗೆ ತನ್ನೊಳಗಿನ ಪ್ರತಿಭೆಯನ್ನು ಸಾಬೀತುಪಡಿಸಿಕೊಳ್ಳಬೇಕಾದರೆ, ಇಂತಹ ಚಾಲೆಂಜಿಂಗ್ ಪಾತ್ರಗಳನ್ನೆಲ್ಲಾ ನಿಭಾಯಿಸಲೇಬೇಕು. ಹಾಗಾಗಿ ಸುಕೃತ ಕೂಡ ತನ್ನನ್ನು ಹುಡುಕಿ ಬಂದ ಪಾತ್ರಗಳನ್ನು ಒಪ್ಪಿ, ಅಪ್ಪಿಕೊಳ್ಳುತ್ತಿದ್ದಾರೆ.
ಅಂದಹಾಗೆ, “ಮೇಘ ಅಲಿಯಾಸ್ ಮ್ಯಾಗಿ’ ಚಿತ್ರದಲ್ಲಿ ಸುಕೃತಾ ವಾಗ್ಲೆ ಪಕ್ಕಾ “ಟಾಮ್‌ಬಾಯ್’ ಆಗಿ ಕಾಣಿಸಿಕೊಂಡಿದ್ದಾರೆ. “ಮೇಘ ಅಲಿಯಾಸ್ ಮ್ಯಾಗಿ’ ಸಿನಿಮಾ ನೋಡಿ ಹೊರ ಬಂದವರು, “ಗಯ್ನಾಳಿ’ ಸುಕೃತ ಅನ್ನುವ ಬದಲು ಟಾಮ್‌ಬಾಯ್ ಸುಕೃತ ಅಂತ ಕರೆದರೆ ಅಚ್ಚರಿ ಇಲ್ಲ. ಅಷ್ಟರಮಟ್ಟಿಗೆ ಟಾಮ್ ಬಾಯ್ ಆಗಿ ತರೆಯ ಮೇಲೆ ಮಿಂಚಿದ್ದಾರೆ. ಅಂದಹಾಗೆ, ಸುಕೃತ ವಾಗ್ಲೆ ಪಾತ್ರದ ಪೋಸ್ಟರ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಚಿತ್ರದಲ್ಲಿ ಅವರು ನಾಯಕಿಯೋ ಅಥವಾ ನಾಯಕನೋ ಎಂಬಷ್ಟರ ಮಟ್ಟಿಗೆ ಗೊಂದಲ ಆಗೋದು ಗ್ಯಾರಂಟಿ. ಅಷ್ಟೊಂದು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸುಕೃತ ವಾಗ್ಲೆ ಅವರ ಉದ್ದನೆಯ ಜಡೆಗೆ ಕತ್ತರಿ ಬಿದ್ದಿದೆ. “ಮೇಘ ಅಲಿಯಾಸ್ ಮ್ಯಾಗಿ’ ಚಿತ್ರದ ಅವರ ಪಾತ್ರ ರಫ್ ಅಂಡ್ ಟಫ್ ಆಗಿರುವ ಹಿನ್ನೆಲೆಯಲ್ಲಿ, ಅವರ ಲುಕ್ ಕೂಡ ಬದಲಾಗಿದೆ. ಅವರಿಲ್ಲಿ ಹೇರ್‌ಕಟ್ ಮಾಡಿಸಿಕೊಂಡು, ಲೋಕಲ್ ಡೈಲಾಗ್ ಹೇಳಿಕೊಂಡು, ಹುಡುಗನಂತೆಯೇ ವಿಭಿನ್ನ ಬಾಡಿ ಲಾಂಗ್ವೇಜ್‌ನಲ್ಲಿ ಡೈಲಾಗ್ ಹರಿಬಿಡುವ ಟ್ರೇಲರ್ ನೋಡಿದರೆ, ಪಕ್ಕಾ ಮಾಸ್ ಫೀಲ್ ಸಿನಿಮಾ ಅನಿಸದೇ ಇರದು. ಸುಕೃತ ಹೇಳಿಕೇಳಿ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರಿಗೆ ಪಾತ್ರ ಮತ್ತು ಸಂದರ್ಭ ಹೇಳಿದರೆ ಸಾಕು, ನಿರ್ದೇಶಕರ ಕಲ್ಪನೆಗೆ ತಕ್ಕಂತೆಯೇ ಕ್ಯಾಮೆರಾ ಎದುರು ತಮ್ಮ ಪ್ರತಿಭೆ ಅನಾವರಣ ಮಾಡುವ ಮೂಲಕ ಸೈ ಎನಿಸಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಇನ್ನೊಂದು ವಿಶೇಷವೂ ಇದೆ. ಅದೇನೆಂದರೆ, ಅವರಿಗೆ ಇದೇ ಮೊದಲ ಸಲ ಈ ಚಿತ್ರದಲ್ಲಿ ಸೋಲೋ ಹಾಡೊಂದರಲ್ಲಿ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ. ಅದು ಸುಕೃತ ಅವರಿಗೆ ಸಹಜವಾಗಿಯೇ ಖುಷಿಕೊಟ್ಟಿದೆ.
ಟಾಮ್‌ಬಾಯ್ ಪಾತ್ರ ಹೊಸ ಇಮೇಜ್ ತಂದುಕೊಡುತ್ತೆ ಎಂಬ ವಿಶ್ವಾಸ ಸುಕೃತಾಗೆ ಇದೆ. “ಅದೊಂದು ಪಕ್ಕಾ ಮಾಡ್ರನ್ ಗಂಡುಬೀರಿಯಂತಿರುವ ಪಾತ್ರ. “ಅಕ್ಕ ಮಾಲಾಶ್ರೀ, ಅಮ್ಮ ಮಂಜುಳನ್ನ ನೆನಸ್ಕೊಂಡು ಕೊಡ್ತಾ ಇದ್ರೆ, ಕೇಳ್ತಾ ಇರೋದ್ ವಾಪಸ್ ಬರ್ತಾ ಇರ್ಬೇಕು …’ ಎಂಬಂತಹ ಪಂಚಿಂಗ್ ಡೈಲಾಗ್‌ಗಳಿವೆ. ಇಲ್ಲಿ ನನ್ನ ಪಾತ್ರ ಏನು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ನನ್ನ ಪ್ರಕಾರ ಹೆಣ್ಣು ಮಕ್ಕಳು “ಮ್ಯಾಗಿ’ ಥರಾನೇ ಇದ್ದರೆ ಚೆಂದ’ ಎನ್ನುತ್ತಾರೆ ಸುಕೃತಾ. ಯಾಕೆ ಎಂಬ ಪ್ರಶ್ನೆ ಇಡುತ್ತಿದ್ದಂತೆಯೇ ಉತ್ತರ ಬರುತ್ತದೆ, “ಮೇಘ ಅಲಿಯಾಸ್ ಮ್ಯಾಗಿ’ ನೋಡಿ ಅಂತ …
ವಿಜಯ್ ಭರಮಸಾಗರ