ವಾಷಿಂಗ್ಟನ್: ಕೋವಿಡ್ ಸೋಂಕು ಇಡೀ ಜಗತ್ತಿನ ಆರ್ಥಿಕತೆಯನ್ನು ಬುಡಮೇಲು ಮಾಡಿದ್ದರೂ, ಅಮೆರಿಕ, ಚೀನ ಹಾಗೂ ಭಾರತದಿಂದಾಗಿ ಈಗ ಜಾಗತಿಕ ಆರ್ಥಿಕ ಪ್ರಗತಿಯು ವೇಗ ಪಡೆದುಕೊಂಡಿದೆ. ಹೀಗೆಂದು ಹೇಳಿರುವುದು ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಡೇವಿಟ್ ಮಾಲ್ಪಾಸ್. ಭಾರತ ಸೇರಿದಂತೆ ಈ ಮೂರು ದೇಶಗಳು ಕ್ಷಿಪ್ರಗತಿಯಲ್ಲಿ ಚೇತರಿಸಿಕೊಳ್ಳುತ್ತಿರುವುದು ಜಾಗತಿಕ ಆರ್ಥಿಕತೆಗೆ ಸಿಹಿಸುದ್ದಿ ನೀಡಿದೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ವಿಶ್ವಾದ್ಯಂತ ಕೋವಿಡ್ ಗೆ ಸಂಬಂಧಿಸಿ ಹೆಚ್ಚುತ್ತಿರುವ ಅಸಮಾನತೆ ಬಗ್ಗೆಯೂ ಕಳವಳ ವ್ಯಕ್ತ ಪಡಿಸಿದ್ದಾರೆ. ಲಸಿಕೆ ವಿತರಣೆ, ಸರಾಸರಿ ಆದಾಯ, ಬಡ್ಡಿ ದರದ ವಿಚಾರದಲ್ಲಿ ಹಲವು ಬಡ ರಾಷ್ಟ್ರಗಳು ತೀವ್ರ ಅಸಮಾನತೆಯನ್ನು ಎದುರಿಸುತ್ತಿರುವುದು ನೋವಿನ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಲ-ಜಿಡಿಪಿ ಅನುಪಾತ ಹೆಚ್ಚಳ: ಇದೇ ವೇಳೆ, ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಭಾರತ ಸರಕಾರದ ಸಾಲ ಮತ್ತು ದೇಶದ ಜಿಡಿಪಿ ನಡುವಿನ ಅನುಪಾತವು ಶೇ.74ರಿಂದ ಶೇ.90ಕ್ಕೇರಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಾಹಿತಿ ನೀಡಿದೆ. ಜತೆಗೆ ಈಗ ಆರ್ಥಿಕ ಚೇತರಿಕೆ ಆಗುತ್ತಿರುವ ಕಾರಣ ಈ ಪ್ರಮಾಣ ಶೇ.80ಕ್ಕೆ ಇಳಿಯಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದೂ ಐಎಂಎಫ್ ಹೇಳಿದೆ.
ಚೇತರಿಕೆಯ ಹಾದಿಯಲ್ಲಿದ್ದೇವೆ: ಎರಡನೇ ವಿಶ್ವಯುದ್ಧದ ಬಳಿಕ ನಾವು ಕೋವಿಡ್ ಸಮಯದಲ್ಲಿ ಅತ್ಯಂತ ಭೀಕರ ಜಾಗತಿಕ ಹಿಂಜರಿತವನ್ನು ಅನುಭವಿಸಿದ್ದು, ಈಗ ಜಗತ್ತಿನ ಆರ್ಥಿಕತೆಯು ಚೇತರಿಕೆಯ ಹಾದಿ ಯಲ್ಲಿದೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಿನ್ ಜಾರ್ಜೀವಾ ಹೇಳಿದ್ದಾರೆ. ಪ್ರಸಕ್ತ ವರ್ಷ ಜಾಗತಿಕ ಆರ್ಥಿಕ ಪ್ರಗತಿಯು ಶೇ.6ರಷ್ಟಿರಲಿದೆ ಎಂದು ಭವಿಷ್ಯ ನುಡಿದ ಮಾರನೇ ದಿನವೇ ಕ್ರಿಸ್ಟಿನ್ ಈ ಮಾತು ಗಳನ್ನಾಡಿದ್ದಾರೆ.