Advertisement

ವಿಶ್ವಕಪ್‌: 15ನೇ ಆಟಗಾರನ ಆಯ್ಕೆಯೇ ಜಟಿಲ

09:19 AM Apr 15, 2019 | keerthan |

ಹೊಸದಿಲ್ಲಿ: ಪ್ರತಿಷ್ಠಿತ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಸೋಮವಾರ ಭಾರತ ತಂಡ ಪ್ರಕಟಗೊಳ್ಳಲಿದೆ. ಮುಂಬಯಿಯಲ್ಲಿ ಸಭೆ ಸೇರಲಿರುವ ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ 15 ಸದಸ್ಯರ ಸಶಕ್ತ ತಂಡವೊಂದನ್ನು ಕಟ್ಟುವ ಯೋಜನೆಯಲ್ಲಿದೆ.

Advertisement

ಈಗಿನ ಸಾಧ್ಯತೆ ಪ್ರಕಾರ 14 ಮಂದಿ ಆಟಗಾರರು ತನ್ನಿಂತಾನಾಗಿ ಈ ಕೂಟಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚು. ಕಳೆದ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿ ಮುಗಿದ ಬಳಿಕ ನಾಯಕ ವಿರಾಟ್‌ ಕೊಹ್ಲಿ ಇಂಥದೊಂದು ಸೂಚನೆ ನೀಡಿದ್ದರು. ಕೇವಲ ಒಂದು ಸ್ಥಾನದ ಆಯ್ಕೆಗೆ ತೀವ್ರ ಪೈಪೋಟಿ ಇದೆ ಎಂದೂ ಹೇಳಿದ್ದರು.

15ನೇ ಆಟಗಾರನ ಸ್ಥಾನವನ್ನು ಯಾವ ವಿಭಾಗಗಕ್ಕೆ ಮೀಸಲಿಡಬೇಕೆಂಬುದೇ ಸದ್ಯದ ಕುತೂಹಲ. ದ್ವಿತೀಯ ವಿಕೆಟ್‌ ಕೀಪರ್‌ ಬೇಕೋ, 4ನೇ ಕ್ರಮಾಂಕದ ಸ್ಪೆಷಲಿಸ್ಟ್‌ ಬ್ಯಾಟ್ಸ್‌ ಮನ್‌ ಬೇಕೋ ಅಥವಾ 4ನೇ ಪೇಸ್‌ ಬೌಲರ್‌ ಅಗತ್ಯವಿದೆಯೇ ಎಂಬುದು ಆಯ್ಕೆಗಾರರನ್ನು ಕಾಡುವ ಪ್ರಶ್ನೆಗಳಾಗಿವೆ.

ಪಂತ್‌, ಕಾರ್ತಿಕ್‌ ಪೈಪೋಟಿ
ದ್ವಿತೀಯ ಕೀಪರ್‌ ಸ್ಥಾನಕ್ಕೆ ಇಬ್ಬರ ಸ್ಪರ್ಧೆ ಇದೆ-ರಿಷಬ್‌ ಪಂತ್‌ ಮತ್ತು ದಿನೇಶ್‌ ಕಾರ್ತಿಕ್‌. ಆದರೆ ಇವರಲ್ಲಿ ಕಾರ್ತಿಕ್‌ ಅವರನ್ನು ಕಳೆದ ಆಸ್ಟ್ರೇಲಿಯ ವಿರುದ್ಧದ ಸರಣಿಯಿಂದ ಕೈಬಿಡಲಾಗಿತ್ತು. ಹೀಗಾಗಿ ಪಂತ್‌ಗೆ ಅವಕಾಶ ಹೆಚ್ಚು ಎನ್ನಲಡ್ಡಿಯಿಲ್ಲ. ಒಂದರಿಂದ 7ನೇ ಕ್ರಮಾಂಕದ ತನಕ ಎಲ್ಲಿಯೂ ಬ್ಯಾಟ್‌ ಬೀಸಲಬಲ್ಲ ಪಂತ್‌, ಪ್ರಸಕ್ತ ಐಪಿಎಲ್‌ನಲ್ಲಿ 222 ರನ್‌ ಹೊಡೆದಿದ್ದಾರೆ.

ಕಾರ್ತಿಕ್‌ ಗಳಿಕೆ 111 ರನ್‌ ಮಾತ್ರ. ಆದರೆ ಸ್ಪಿನ್ನರ್‌ಗಳ ವಿರುದ್ಧ ಪಂತ್‌ ಕೀಪಿಂಗ್‌ ತೀರಾ ಕಳಪೆ ಎಂಬ ಅಪವಾದವಿದೆ. ಆಲ್‌ರೌಂಡರ್‌ ವಿಜಯ್‌ ಶಂಕರ್‌ ಆಯ್ಕೆ ಬಹುತೇಕ ಖಚಿತ ಎಂಬಂತಿದೆ. ಇಂಗ್ಲೆಂಡಿನ ವಾತಾವರಣಕ್ಕೆ ಇವರ ಬೌಲಿಂಗ್‌ ಪ್ರಶಸ್ತವಾದೀತು ಎಂಬುದೊಂದು ಲೆಕ್ಕಾಚಾರ.

Advertisement

ಶಂಕರ್‌ ಮತ್ತು ಪಾಂಡ್ಯ 4ನೇ ಸೀಮ್‌ ಬೌಲಿಂಗ್‌ ಜವಾಬ್ದಾರಿ ಹೊರಬಲ್ಲರು ಎಂಬ ನಂಬಿಕೆ ಇದೆ. ಅಕಸ್ಮಾತ್‌ ಇಲ್ಲಿ ಸ್ಪೆಷಲಿಸ್ಟ್‌ ಬೌಲರೇ ಬೇಕು ಎಂದಾದರೆ ಆಗ ಪೈಪೋಟಿ ತೀವ್ರಗೊಳ್ಳಲಿದೆ. ಯಾದವ್‌, ಇಶಾಂತ್‌, ಖಲೀಲ್‌ ಹೊರತು ಪಡಿಸಿ ಪ್ರತಿಭಾನ್ವಿತ ಯುವ ಬೌಲರ್‌ಗಳಾದ ನವದೀಪ್‌ ಸೈನಿ ಮತ್ತು ದೀಪಕ್‌ ಚಹರ್‌ ಪರಿಗಣನೆಗೆ ಬರಲೂಬಹುದು.

ಕೆ.ಎಲ್‌. ರಾಹುಲ್‌ಗೆ ಹೆಚ್ಚುವರಿ ಜವಾಬ್ದಾರಿ?
ಐಪಿಎಲ್‌ನಲ್ಲಿ 335 ರನ್‌ ಬಾರಿಸಿ ಉತ್ತಮ ಫಾರ್ಮ್ ಪ್ರದರ್ಶಿಸಿರುವ ಕೆ.ಎಲ್‌.
ರಾಹುಲ್‌ಗೆ ವಿಶ್ವಕಪ್‌ ಬಾಗಿಲು ತೆರೆಯುವ ಅವಕಾಶ ಹೆಚ್ಚಿದೆ. ರಾಹುಲ್‌ ಕೀಪಿಂಗ್‌ ಕೂಡ ಮಾಡಬಲ್ಲರು. ಹೀಗಾಗಿ ಅವರನ್ನು ತೃತೀಯ ಓಪನರ್‌ ಹಾಗೂ ದ್ವಿತೀಯ ಕೀಪರ್‌ ಆಗಿ ಆರಿಸುವ ಸಾಧ್ಯತೆಯೂ ಇದೆ. “ಧೋನಿ ಗಾಯಾಳಾದರಷ್ಟೇ ದ್ವಿತೀಯ ಕೀಪರ್‌ ಅಗತ್ಯವಿರುತ್ತದೆ. ಪಂತ್‌ ಪ್ರತಿಭಾನ್ವಿತ ಆಟಗಾರ ನಿಜ. ಆದರೆ ಸ್ಥಿರವಾದ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ…’ ಎಂಬ ರೀತಿಯಲ್ಲಿ ಭಾರತದ ಮಾಜಿ ಆಟಗಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸಂಭಾವ್ಯ 14ರ ಬಳಗ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಮಹೇಂದ್ರ ಸಿಂಗ್‌ ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ರವೀಂದ್ರ ಜಡೇಜ.

15ನೇ ಆಟಗಾರನ ಸ್ಥಾನಕ್ಕೆ 3 ಸಾಧ್ಯತೆ
2ನೇ ಕೀಪರ್‌: ದಿನೇಶ್‌ ಕಾರ್ತಿಕ್‌/ರಿಷಬ್‌ ಪಂತ್‌.
4ನೇ ಕ್ರಮಾಂಕದ ಸ್ಪೆಷಲಿಸ್ಟ್‌: ಅಂಬಾಟಿ ರಾಯುಡು/ಶ್ರೇಯಸ್‌ ಅಯ್ಯರ್‌.
4ನೇ ಪೇಸ್‌ ಬೌಲರ್‌: ಉಮೇಶ್‌ ಯಾದವ್‌/ಖಲೀಲ್‌ ಅಹ್ಮದ್‌/ಇಶಾಂತ್‌ ಶರ್ಮ/ನವದೀಪ್‌ ಸೈನಿ/ದೀಪಕ್‌ ಚಹರ್‌.

Advertisement

Udayavani is now on Telegram. Click here to join our channel and stay updated with the latest news.

Next