ಪೋರ್ಟ್ ಆಫ್ ಸ್ಪೇನ್: ಶಿಖರ್ ಧವನ್, ಶುಭ್ಮನ್ ಗಿಲ್ ಬೊಂಬಾಟ್ ಬ್ಯಾಟಿಂಗ್, ಕೊನೆಯ ಓವರ್ ನಲ್ಲಿ ಮೊಹಮ್ಮದ್ ಸಿರಾಜ್ ಬಿಗು ಬೌಲಿಂಗ್ ಕಾರಣದಿಂದ ವೆಸ್ಟ್ ಇಂಡೀಸ್ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಮೂರು ರನ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿದರೆ, ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿಂಡೀಸ್ ಆರು ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತಕ್ಕೆ ಆರಂಭಿಕರಾದ ನಾಯಕ ಧವನ್ ಮತ್ತು ಗಿಲ್ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್ ಗೆ 17.4 ಓವರ್ ಗಳಲ್ಲಿ 119 ರನ್ ಕಲೆಹಾಕಿದರು. ಗಿಲ್ 64 ರನ್ ಗಳಿಸಿ ರನೌಟಾದರೆ, ಧವನ್ 97 ರನ್ ಮಾಡಿದ್ದ ವೇಳೆ ಕ್ಯಾಚಿತ್ತು ಶತಕ ವಂಚಿತರಾದರು. ಬಳಿಕ ಶ್ರೇಯಸ್ ಅಯ್ಯರ್ 54 ರನ್ ಕಲೆಹಾಕಿದರು. ಆದರೆ ನಂತರದ ಬ್ಯಾಟರ್ ಗಳು ವಿಫಲರಾದರು. ಕೊನೆಯಲ್ಲಿ ದೀಪಕ್ ಹೂಡಾ ಮತ್ತು ಅಕ್ಸರ್ ಪಟೇಲ್ ನಿಧಾನವಾಗಿ ಬ್ಯಾಟ್ ಬೀಸಿ ತಂಡದ ಮೊತ್ತವನ್ನು 300 ರ ಗಡಿ ದಾಟಿಸಿದರು.
ಇದನ್ನೂ ಓದಿ:ಕೆಂಪು ಸಮುದ್ರದ ಆಳದಲ್ಲಿ ವಿಷಕಾರಿ ಕೊಳಗಳು
ಭಾರತ ನೀಡಿದ 309 ರನ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮ ಜೊತೆಯಾಟಗೊಂದಿಗೆ ಆಡಿತು. ಕೈಲ್ ಮೇಯರ್ಸ್ 75 ರನ್, ಶಮ್ರಾಹ್ ಬ್ರೂಕ್ಸ್ 46 ರನ್ ಮತ್ತು ಬ್ಯಾಂಡನ್ ಕಿಂಗ್ 54 ರನ್ ಗಳಿಸಿದರು. ಏಳನೇ ವಿಕೆಟ್ ಗೆ ಜೊತೆಯಾದ ಅಕೈಲ್ ಹೊಸೈನ್ ಮತ್ತು ರೊಮಾರಿಯೊ ಶೆಫರ್ಡ್ ಅಜೇಯ 53 ರನ್ ಜೊತೆಯಾಟವಾಡಿದರು. ಶೆಫರ್ಡ್ 25 ಎಸೆತಗಳಲ್ಲಿ 39 ರನ್ ಬಾರಿಸಿದರು.
ಕೊನೆಯ ಓವರ್ ನಲ್ಲಿ ಪಂದ್ಯ ಟೈ ಆಗಲು 14 ರನ್ ಬೇಕಿತ್ತು. ಕೊನೆಯ ಓವರ್ ಎಸೆದ ಸಿರಾಜ್ ಮೂರನೇ ಎಸೆತದಲ್ಲಿ ಬೌಂಡರಿ ಕೊಟ್ಟರು, ನಂತರ ಬಿಗು ದಾಳಿ ಸಂಘಟಿಸಿದರು. ಕೊನೆಯಲ್ಲಿ ಭಾರತ ಮೂರು ರನ್ ಅಂತರದ ಗೆಲುವು ಸಾಧಿಸಿತು. ಭಾರತ ಪರ ಸಿರಾಜ್, ಚಾಹಲ್ ಮತ್ತು ಠಾಕೂರ್ ತಲಾ ಎರಡು ವಿಕೆಟ್ ಕಿತ್ತರು.