Advertisement

ಕೊಹ್ಲಿ ಶತಕ.. ಭಾರತಕ್ಕೆ ಗೆಲುವಿನ ಪುಳಕ

10:08 AM Aug 13, 2019 | keerthan |

ಪೋರ್ಟ್‌ ಆಫ್‌ ಸ್ಪೇನ್:‌ ರನ್‌ ಮಶಿನ್‌ ವಿರಾಟ್‌ ಕೊಹ್ಲಿಯ ಭರ್ಜರಿ ಶತಕ, ಶ್ರೇಯಸ್‌ ಅಯ್ಯರ್‌ ಜವಾಬ್ಧಾರುಯುತ ಅರ್ಧ ಶತಕ, ಭುವನೇಶ್ವರ್‌ ಕುಮಾರ್‌ ಮಿಂಚಿನ ಬೌಲಿಂಗ್‌ ಸಾಧನೆಯಿಂದ ವಿಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ 59 ರನ್‌ ಅಂತರದಿಂದ ಗೆದ್ದುಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ನಿಗಧಿತ 50 ಓವ್‌ ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 279 ರನ್‌ ಗಳಿಸಿದರೆ, ಮಳೆಯ ಕಾರಣದಿಂದ 46 ಓವರ್‌ ಗೆ 270 ರನ್‌ ಗಳಿಸುವ ಗುರಿ ಪಡೆದ ವಿಂಡೀಸ್‌ 210 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಪಂದ್ಯ ಕೈಚೆಲ್ಲಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದ ಭಾರತಕ್ಕೆ ಮತ್ತೆ ಆರಂಭಿಕರು ಕೈಕೊಟ್ಟರು. ಕೇವಲ ಎರಡು ರನ್‌ ಗಳಿಸಿದ ಶಿಖರ್‌ ಧವನ್‌ ಮೊದಲ ಓವರ್‌ ನಲ್ಲೇ ಪೆವಿಲಿಯನ್‌ ಗೆ ಮರಳಿದರು. ಕ್ವೀನ್ಸ್‌ ಪಾರ್ಕ್‌ ಓವಲ್‌ ನಲ್ಲಿ ಬ್ಯಾಟಿಂಗ್‌ ನಡೆಸಲು ಪರದಾಡಿದ ರೋಹಿತ್‌ 34 ಎಸೆತ ಎದುರಿಸಿ 18 ರನ್‌ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ಪೂರನ್‌ ಗೆ ಕ್ಯಾಚ್‌ ನೀಡಿ ಔಟಾದರು. ನಂತರ ಬಂದ ಪಂತ್‌ ಕೂಡಾ 20 ರನ್‌ ಗೆ ವಿಕೆಟ್‌ ಒಪ್ಪಿಸಿದರು.

ಆದರೆ ನಾಲ್ಕನೇ ವಿಕೆಟ್‌ ಗೆ ಕೊಹ್ಲಿ ಜೊತೆಯಾದ ಶ್ರೇಯಸ್‌ ಅಯ್ಯರ್‌ ನಿಧಾನವಾಗಿ ತಂಡದ ಮೊತ್ತ ಹೆಚ್ಚಿಸಿದರು. ಕೊಹ್ಲಿ- ಅಯ್ಯರ್‌ ಜೋಡಿ 125 ರನ್‌ ಜೊತೆಯಾಟ ನಡೆಸಿದರು. ನಾಯಕ ವಿರಾಟ್‌ ತಾಳ್ಮೆಯಿಂದ ಇನ್ನಿಂಗ್ಸ್‌ ಕಟ್ಟಿ ತಮ್ಮ ಏಕದಿನ ಬಾಳ್ವೆಯ 42ನೇ ಶತಕ ಬಾರಿಸಿದರು. 125 ಎಸೆತ ಎದುರಿಸಿದ ವಿರಾಟ್ 14 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 120 ರನ್‌ ಗಳಿಸಿ ಬ್ರಾಥ್‌ ವೇಟ್‌ ಗೆ ವಿಕೆಟ್‌ ಒಪ್ಪಿಸಿದರು.

ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡ ಅಯ್ಯರ್‌ 71 ರನ್‌ ಮಾಡಿ ಔಟಾದರೆ, ಜಾಧವ್‌, ಜಡೇಜಾ ತಲಾ 16 ರನ್‌ ಗಳಿಸಿದರು. ವಿಂಡೀಸ್‌ ಪರ ಬ್ರಾಥ್ ವೇಟ್‌ ಮೂರು ವಿಕೆಟ್‌ ಪಡೆದು ಮಿಂಚಿದರು.

Advertisement

280 ರನ್‌ ಗುರಿ ಬೆನ್ನಟ್ಟಿದ ವೆಸ್ಟ್‌ ಇಂಡೀಸ್‌ ಗೆ ಉತ್ತಮ ಆರಂಭ ಸಿಗಲಿಲ್ಲ. 300ನೇ ಏಕದಿನ ಪಂದ್ಯ ಆಡಲಿಳಿದ ಗೇಲ್‌ 11 ರನ್‌ ಗಳಿಸಿ ಭುವನೇಶ್ವರ್‌ ಕುಮಾರ್‌ ಗೆ ವಿಕೆಟ್‌ ಒಪ್ಪಿಸಿದರು. ವಿಕೆಟ್‌ ಕೀಪರ್‌ ಶಾಯ್‌ ಹೋಪ್‌ ಕೂಡಾ 5 ರನ್‌ ಗೆ ಔಟಾದರು. ಆರಂಭಿಕ ಆಟಗಾರ ಇವಿನ್‌ ಲೂಯಿಸ್‌ 65 ರನ್‌ ಗಳಿಸಿದರು. ಮಧ್ಯದಲ್ಲಿ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಗಿ ಡಕ್ ವರ್ತ್‌ ಲೂಯಿಸ್‌ ನಿಯಮದಡಿ ವಿಂಡೀಸ್‌ ಗೆ  46 ಓವರ್‌ ನಲ್ಲಿ 270 ರನ್‌ ಗಳಿಸುವ ಹೊಸ ಗುರಿ ನೀಡಲಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಪೂರನ್‌ ಬಿಟ್ಟರೆ ಬೇರಾವ ಆಟಗಾರನೂ ತಂಡದ ಕೈ ಹಿಡಿಯಲಿಲ್ಲ.

ಪೂರನ್‌ 42 ರನ್‌ ಗಳಸಿದರು ಅಂತಿಮವಾಗಿ 210 ರನ್‌ ಗೆ ತನ್ನೆಲ್ಲಾ ವಿಕೆಟ್‌ ಕಲೆದುಕೊಂಡ ಹೋಲ್ಡರ್‌ ಪಡೆ 59 ರನ್‌ ಗಳಿಂದ ಶರಣಾಯಿತು.  ಭಾರತದ ಪರ ಭುವಿ ನಾಲ್ಕು ವಿಕೆಟ್‌, ಶಮಿ ಮತ್ತು ಕುಲದೀಪ್‌ ತಲಾ ಎರಡು ವಿಕೆಟ್‌ ಪಡೆದರು. ಭರ್ಜರಿ ಶತಕ ಬಾರಿಸಿದ ವಿರಾಟ್‌ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next