ಹ್ಯಾಮಿಲ್ಟನ್: ವನಿತಾ ವಿಶ್ವಕಪ್ ಪಂದ್ಯಾವಳಿಯ “ಲಕ್ಕಿ ಟೀಮ್ ‘ ಆಗಿರುವ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಶನಿವಾರ ಹೋರಾಟಕ್ಕೆ ಇಳಿಯಲಿದೆ.
ಮಿಥಾಲಿ ಪಡೆ ಪಾಲಿಗೆ ಇದು ಮಹತ್ವದ ಪಂದ್ಯವಾಗಿದ್ದು, ಗೆಲುವು ಅನಿವಾರ್ಯ ಎಂಬ ಸ್ಥಿತಿ ಇದೆ.
ನ್ಯೂಜಿಲ್ಯಾಂಡ್‌ಗೆ ಒಂದು ತಿಂಗಳು ಮೊದಲೇ ಆಗಮಿಸಿದರೂ “ವೈಟ್ ಫೆದರ್’ ಭೀತಿಯಿಂದ ಮುಕ್ತವಾಗದ ಭಾರತ, ಗುರುವಾರದ ಪಂದ್ಯವನ್ನು ಹೀನಾಯವಾಗಿ ಸೋತಿತ್ತು. ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಹಾಗೂ ಆಮೆಗತಿಯ ಆಟದಿಂದ ಭಾರತ ಈ ಪಂದ್ಯವನ್ನು ಹೋರಾಟ ನೀಡದೆಯೇ ಕಳೆದುಕೊಂಡಿತ್ತು.
ಹರ್ಮನ್‌ಪ್ರೀತ್ ಕೌರ್ ಫಾರ್ಮ್ ಗೆ ಮರಳುವ ಹಂತದಲ್ಲಿ ಮಂಧನಾ, ಮಿಥಾಲಿ ರಾಜ್, ದೀಪ್ತಿ ಶರ್ಮ, ಯಾಸ್ತಿಕಾ ಭಾಟಿಯ ಸಿಡಿಯಲು ವಿಫಲರಾದುದೊಂದು ವಿಪರ್ಯಾಸ. ಟೆಸ್ಟ್ ಬ್ಯಾಟಿಂಗ್‌ಗಿಂತಲೂ ನಿಧಾನವಾಗಿತ್ತು ಭಾರತದ ಆಟ. ನಮ್ಮವರು 26 ಓವರ್‌ಗಳಷ್ಟು ಡಾಟ್ ಬಾಲ್‌ಗಳನ್ನು ಆಡಿದದರೆಂಬುದೇ ಪರಿಸ್ಥಿತಿಯನ್ನು ಬಿಚ್ಚಿಡುತ್ತದೆ. ವಿಂಡೀಸ್ ವಿರುದ್ಧ ಗೆಲ್ಲಬೇಕಾದರೆ ಇವರೆಲ್ಲ ಮತ್ತೆ ಲಯಕ್ಕೆ ಮರಳಿ, ಬಿರುಸಿನ ಆಟದ ಮೂಲಕ ದೊಡ್ಡ ಜತೆಯಾಟ ನಡೆಸಬೇಕಾದುದು ಅನಿವಾರ್ಯ. ಕೋಚ್ ರಮೇಶ್ ಪೊವಾರ್ ಹೇಳಿದಂತೆ, ತಂಡದ ಸೀನಿಯರ್ ಹೆಚ್ಚಿನ ಜವಾಬ್ದಾರಿಯುತ ಆಟವಾಡಬೇಕಿದೆ.
ಇದನ್ನೂ ಓದಿ:ಇಂಡಿಯನ್ ವೆಲ್ಸ್ : ಮುನ್ನಡೆದ ಸಾನಿಯಾ ಜೋಡಿ
ವಿಂಡೀಸ್ ಕರಿಗುದುರೆ
ವೆಸ್ಟ್ ಇಂಡೀಸ್ ಈ ಕೂಟದ ಕರಿಗು ದುರೆಯೇ ಸರಿ. ಸಾಧನೆಗೂ ಮಿಗಿಲಾದ ಅದೃಷ್ಟ ಹೊಂದಿದೆ. ಇದಕ್ಕೆ ಕಳೆದೆರಡು ಪಂದ್ಯಗಳ ಗೆಲುವಿನ ಅಂತರವೇ ಸಾಕ್ಷಿ. ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 3 ರನ್, ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 7 ರನ್… ಈ ರೀತಿಯಾಗಿ ವಿಂಡೀಸ್ ಅಚ್ಚರಿಯ ಗೆಲುವಿನೊಂದಿಗೆ ಓಟ ಬೆಳೆಸಿದೆ. ಈ ಅದೃಷ್ಟ ಶನಿವಾರವೂ ವಿಸ್ತರಿಸಲ್ಪಟ್ಟರೆ ಭಾರತಕ್ಕೆ ಗಂಡಾಂತರ ತಪ್ಪಿದ್ದಲ್ಲ. ಈಗಾಗಲೇ 5ನೇ ಸ್ಥಾನಕ್ಕೆ ಇಳಿದಿರುವ ಮಿಥಾಲಿ ಟೀಮ್ ಇನ್ನಷ್ಟು ಕುಸಿದರೆ ಟಾಪ್-ಫೋರ್‌ಗೆ ಏರುವುದು ಸುಲಭವಲ್ಲ.