Advertisement

ಟಿ20 ಸರಣಿ ವಿಕ್ರಮನಾರಿಯರ ನಲಿದಾಟ

06:00 AM Feb 25, 2018 | |

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ವನಿತಾ ಕ್ರಿಕೆಟಿಗರು ಅವಳಿ ಇತಿಹಾಸ ಬರೆದಿದ್ದಾರೆ. ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡ ಬಳಿಕ ಟಿ20 ಸರಣಿಯನ್ನೂ ತನ್ನದಾಗಿಸಿಕೊಂಡಿದ್ದಾರೆ. ಶನಿವಾರದ 5ನೇ ಹಾಗೂ ಅಂತಿಮ ಚುಟುಕು ಪಂದ್ಯವನ್ನು 54 ರನ್ನುಗಳಿಂದ ಗೆದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿತು. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 4 ವಿಕೆಟಿಗೆ 166 ರನ್‌ ಪೇರಿಸಿ ಸವಾಲೊಡ್ಡಿದರೆ, ದಕ್ಷಿಣ ಆಫ್ರಿಕಾ 18 ಓವರ್‌ಗಳಲ್ಲಿ 112 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಶಿಖಾ ಪಾಂಡೆ, ರುಮೇಲಿ ಧರ್‌ ಮತ್ತು ರಾಜೇಶ್ವರಿ ಗಾಯಕ್ವಾಡ್‌ ತಲಾ 3 ವಿಕೆಟ್‌ ಕಿತ್ತು ಹರಿಣಗಳನ್ನು ಬೇಟೆಯಾಡಿದರು. ಮಿಥಾಲಿ ರಾಜ್‌ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮಿಥಾಲಿ, ಜೆಮಿಮಾ ಭರ್ಜರಿ ಆಟ
ಮಿಥಾಲಿ ರಾಜ್‌ ಮತ್ತು ಯುವ ಆಟಗಾರ್ತಿ ಜೆಮಿನಾ ರೋಡ್ರಿಗಸ್‌ ಆತಿಥೇಯರ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ ಭಾರತದ ಇನ್ನಿಂಗ್ಸ್‌ ಬೆಳೆಸಿದರು. ಇವರಿಬ್ಬರ 2ನೇ ವಿಕೆಟ್‌ ಜತೆಯಾಟದಲ್ಲಿ 98 ರನ್‌ ಸಂಗ್ರಹಗೊಂಡಿತು. ಮಿಥಾಲಿ 50 ಎಸೆತಗಳಿಂದ ಸರ್ವಾಧಿಕ 62 ರನ್‌ ಬಾರಿಸಿದರು. ಅವರ ಬಿರುಸಿನ ಆಟದ ವೇಳೆ 3 ಸಿಕ್ಸರ್‌ ಹಾಗೂ 8 ಬೌಂಡರಿ ಸಿಡಿಯಿತು. ಜೆಮಿಮಾ ಕೊಡುಗೆ 44 ರನ್‌. 34 ಎಸೆತ ಎದುರಿಸಿದ ಜೆಮಿಮಾ 2 ಸಿಕ್ಸರ್‌ ಹಾಗೂ 3 ಬೌಂಡರಿ ಬಾರಿಸಿ ಮೆರೆದರು. ಇವರಿಬ್ಬರ ವಿಕೆಟ್‌ 4 ರನ್‌ ಅಂತರದಲ್ಲಿ ಉರುಳಿತು.

ಸ್ಮತಿ ಮಂಧನಾ 13 ರನ್‌ ಮಾಡಿ ಔಟಾದ ಬಳಿಕ ಮಿಥಾಲಿ-ಜೆಮಿಮಾ ಜತೆಗೂಡಿದ್ದರು. ಮಂಧನಾ-ಮಿಥಾಲಿ ಜೋಡಿಯ ಮೊದಲ ವಿಕೆಟ್‌ ಜತೆಯಾಟದಲ್ಲಿ 4.2 ಓವರ್‌ಗಳಿಂದ 32 ರನ್‌ ಬಂತು.

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡ ಬಿರುಸಿನ ಆಟಕ್ಕಿಳಿದು 17 ಎಸೆತಗಳಿಂದ ಅಜೇಯ 27 ರನ್‌ ಸಿಡಿಸಿದರು (1 ಬೌಂಡರಿ, 2 ಸಿಕ್ಸರ್‌). 8 ರನ್‌ ಮಾಡಿದ ವೇದಾ ಕೃಷ್ಣಮೂರ್ತಿ ಇನ್ನಿಂಗ್ಸಿನ ಅಂತಿಮ ಎಸೆತದಲ್ಲಿ ರನೌಟಾದರು.

Advertisement

ದಕ್ಷಿಣ ಆಫ್ರಿಕಾ ಕುಸಿತ
ಭಾರತದ ಘಾತಕ ಬೌಲಿಂಗ್‌ ದಾಳಿಯನ್ನು ನಿಭಾಯಿಸಲು ಆರಂಭದಿಂದಲೇ ಪರದಾಡಿದ ದಕ್ಷಿಣ ಆಫ್ರಿಕಾ, 9ನೇ ಓವರ್‌ ವೇಳೆ 44 ರನ್ನಿಗೆ 5 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಟ್ರಾಯಾನ್‌ ಮತ್ತು ಕಾಪ್‌ ನುಗ್ಗಿ ಬೀಸಲಾರಂಭಿಸಿದರೂ ಆಗಲೇ ಪಂದ್ಯ ಆತಿಥೇಯರ ಕೈಜಾರಿತ್ತು.

ಸಂಕ್ಷಿಪ್ತ ಸ್ಕೋರ್‌: ಭಾರತ-20 ಓವರ್‌ಗಳಲ್ಲಿ 4 ವಿಕೆಟಿಗೆ 166 (ಮಿಥಾಲಿ 62, ಜೆಮಿಮಾ 44, ಹರ್ಮನ್‌ಪ್ರೀತ್‌ ಔಟಾಗದೆ 27, ಮಂಧನಾ 13, ವೇದಾ 8, ಕಾಪ್‌ 22ಕ್ಕೆ 1, ಶಬಿ°ಂ 35ಕ್ಕೆ 1, ಖಾಕಾ 41ಕ್ಕೆ 1). ದಕ್ಷಿಣ ಆಫ್ರಿಕಾ-18 ಓವರ್‌ಗಳಲ್ಲಿ 112 (ಕಾಪ್‌ 27, ಟ್ರಯಾನ್‌ 25, ಡು ಪ್ರೀಝ್ 17, ಶಿಖಾ ಪಾಂಡೆ 16ಕ್ಕೆ 3, ರುಮೇಲಿ ಧರ್‌ 26ಕ್ಕೆ 3, ರಾಜೇಶ್ವರಿ ಗಾಯಕ್ವಾಡ್‌ 26ಕ್ಕೆ 3, ಪೂನಂ ಯಾದವ್‌ 25ಕ್ಕೆ 1). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಮಿಥಾಲಿ ರಾಜ್‌.

Advertisement

Udayavani is now on Telegram. Click here to join our channel and stay updated with the latest news.

Next