Advertisement

India Women vs New Zealand Women; ಸೋಫಿ ಡಿವೈನ್‌ ಸಾಹಸ:ಸರಣಿ 1-1

12:56 AM Oct 28, 2024 | Team Udayavani |

ಅಹ್ಮದಾಬಾದ್‌: ದ್ವಿತೀಯ ಏಕದಿನ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ ಭಾರತವನ್ನು 76 ರನ್ನುಗಳಿಂದ ಮಣಿಸಿದ ನ್ಯೂಜಿಲ್ಯಾಂಡ್‌, ಸರಣಿಯನ್ನು 1-1 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ನಾಯಕಿ ಸೋಫಿ ಡಿವೈನ್‌ ಆಲ್‌ರೌಂಡ್‌ ಆಟದ ಮೂಲಕ ಗೆಲುವಿನ ರೂವಾರಿಯಾಗಿ ಮೂಡಿಬಂದರು.ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿ ಲ್ಯಾಂಡ್‌ 9 ವಿಕೆಟಿಗೆ 259 ರನ್‌ ಪೇರಿಸಿ ಸವಾಲೊಡ್ಡಿದರೆ, ಭಾರತ 47.1 ಓವರ್‌ಗಳಲ್ಲಿ 183ಕ್ಕೆ ಆಲೌಟ್‌ ಆಯಿತು.

Advertisement

ಭಾರತದ ಚೇಸಿಂಗ್‌ ಅತ್ಯಂತ ಆಘಾತಕಾರಿಯಾಗಿತ್ತು. ರನ್‌ ಖಾತೆ ತೆರೆಯದ ಸ್ಮತಿ ಮಂಧನಾ ಮೊದಲ ಓವರ್‌ನಲ್ಲೇ ಪೆವಿಲಿಯನ್‌ ಹಾದಿ ಹಿಡಿದರು. ಶಫಾಲಿ ವರ್ಮ (11) ಮತ್ತು ಯಾಸ್ತಿಕಾ ಭಾಟಿಯಾ (12) ಕೂಡ ತಂಡವನ್ನು ಆಧರಿಸಲಿಲ್ಲ. ನಾಯಕಿ ಕೌರ್‌ (24)-ಜೆಮಿಮಾ ರೋಡ್ರಿಗಸ್‌ (17) ಜೋಡಿಯಿಂದಲೂ ಒತ್ತಡ ನಿಭಾಯಿಸಲಾಗಲಿಲ್ಲ.

9ನೇ ವಿಕೆಟಿಗೆ ಜತೆಗೂಡಿದ ರಾಧಾ ಯಾದವ್‌ ಮತ್ತು ಸೈಮಾ ಠಾಕೂರ್‌ 70 ರನ್‌ ಜತೆಯಾಟದ ಮೂಲಕ ಹೋರಾಟ ವನ್ನೇನೋ ನಡೆಸಿದರು. ಆದರೆ ಆಗಲೇ ಪಂದ್ಯ ಭಾರತದ ಕೈಯಿಂದ ಜಾರಿತ್ತು. ರಾಧಾ ಯಾದವ್‌ ಸರ್ವಾಧಿಕ 48 ರನ್‌ ಮಾಡಿದರು (64 ಎಸೆತ, 5 ಬೌಂಡರಿ).

ಡಿವೈನ್‌ ಆಲ್‌ರೌಂಡ್‌ ಶೋ
ನ್ಯೂಜಿಲ್ಯಾಂಡ್‌ ಸ್ಕೋರ್‌ 250ರ ಗಡಿ ದಾಟಿಸುವಲ್ಲಿ ನಾಯಕಿ ಸೋಫಿ ಡಿವೈನ್‌ ಮತ್ತು ಓಪನರ್‌ ಸುಝೀ ಬೇಟ್ಸ್‌ ಅವರ ಅರ್ಧ ಶತಕದ ಕೊಡುಗೆ ಮಹತ್ವದ ಪಾತ್ರ ವಹಿಸಿತು. ಡಿವೈನ್‌ ಸರ್ವಾಧಿಕ 79 ರನ್‌ ಹೊಡೆದರೆ (86 ಎಸೆತ, 7 ಬೌಂಡರಿ, 1 ಸಿಕ್ಸರ್‌), ಬೇಟ್ಸ್‌ 70 ಎಸೆತಗಳಿಂದ 58 ರನ್‌ ಮಾಡಿದರು (8 ಬೌಂಡರಿ). ಬೌಲಿಂಗ್‌ನಲ್ಲೂ ಮಿಂಚಿದ ಡಿವೈನ್‌ 3 ವಿಕೆಟ್‌ ಉಡಾಯಿಸಿದರು.

ಸುಝೀ ಬೇಟ್ಸ್‌ ಮತ್ತು ಜಾರ್ಜಿಯಾ ಪ್ಲಿಮ್ಮರ್‌ (41) 15.3 ಓವರ್‌ಗಳಿಂದ 87 ರನ್‌ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಈ ಜೋಡಿಯನ್ನು ದೀಪ್ತಿ ಶರ್ಮ ಬೇರ್ಪಡಿಸಿದ ಬಳಿಕ ಭಾರತ ಮೇಲುಗೈ ಸಾಧಿಸಿತು. ಕ್ಷಿಪ್ರಗತಿಯಲ್ಲಿ 3 ವಿಕೆಟ್‌ ಬಿತ್ತು. ಲಾರೆನ್‌ ಡೌನ್‌ (3) ರನೌಟಾದರೆ, ಸುಝೀ ಬೇಟ್ಸ್‌, ರಾಧಾ ಯಾದವ್‌ಗೆ ರಿಟರ್ನ್ ಕ್ಯಾಚ್‌ ನೀಡಿದರು. ಬ್ರೂಕ್‌ ಹಾಲಿಡೇ (8) ಮೊದಲ ಪಂದ್ಯವಾಡಲಿಳಿದ ಲೆಗ್‌ಸ್ಪಿನ್ನರ್‌ ಪ್ರಿಯಾ ಮಿಶ್ರಾಗೆ ವಿಕೆಟ್‌ ಒಪ್ಪಿಸಿದರು. ಸೋಫಿ ಡಿವೈನ್‌-ಮ್ಯಾಡಿ ಗ್ರೀನ್‌ (42) 5ನೇ ವಿಕೆಟಿಗೆ 82 ರನ್‌ ಪೇರಿಸಿ ತಂಡವನ್ನು ಮತ್ತೆ ಹೋರಾಟಕ್ಕೆ ಸಜ್ಜುಗೊಳಿಸಿದರು.

Advertisement

4 ವಿಕೆಟ್‌ ಉರುಳಿಸಿದ ಎಡಗೈ ಸ್ಪಿನ್ನರ್‌ ರಾಧಾ ಯಾದವ್‌ ಭಾರತದ ಅತ್ಯಂತ ಯಶಸ್ವಿ ಬೌಲರ್‌. ಆಫ್ಸ್ಪಿನ್ನರ್‌ ದೀಪ್ತಿ ಶರ್ಮ ಸಾಧನೆ 30ಕ್ಕೆ 2. ಅವರು 3 ಮೇಡನ್‌ ಓವರ್‌ ಮೂಲಕ ಗಮನ ಸೆಳೆದರು.

ಗಾಯಾಳಾಗಿ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಹರ್ಮನ್‌ಪ್ರೀತ್‌ ಕೌರ್‌ ಮರಳಿ ತಂಡದ ನೇತೃತ್ವ ವಹಿಸಿದರು. 3ನೇ ಪಂದ್ಯ ಮಂಗಳವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-9 ವಿಕೆಟಿಗೆ 259 (ಡಿವೈನ್‌ 79, ಬೇಟ್ಸ್‌ 58, ಗ್ರೀನ್‌ 42, ಪ್ಲಿಮ್ಮರ್‌ 41, ರಾಧಾ 69ಕ್ಕೆ 4, ದೀಪ್ತಿ 30ಕ್ಕೆ 2). ಭಾರತ-47.1 ಓವರ್‌ಗಳಲ್ಲಿ 183 (ರಾಧಾ 48, ಸೈಮಾ 29, ಕೌರ್‌ 24, ಡಿವೈನ್‌ 27ಕ್ಕೆ 3, ಟಹುಹು 42ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next