Advertisement
ಶನಿವಾರದ ಮುಖಾಮುಖಿಯಲ್ಲಿ ಭಾರತದ ಬ್ಯಾಟಿಂಗ್ ಅಮೋಘ ಮಟ್ಟದಲ್ಲೇ ಇತ್ತು. 7ಕ್ಕೆ 277 ರನ್ ರಾಶಿ ಹಾಕಿತು. ಆದರೂ ಈ ಮೊತ್ತವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯ 49.3 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 280 ರನ್ ಪೇರಿಸಿ ಜಯಭೇರಿ ಮೊಳಗಿಸಿತು. 2017ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಸೋತು ಹೊರಬಿದ್ದಿದ್ದ ಆಸ್ಟ್ರೇಲಿಯ, ಈ ಬಾರಿ ಭಾರತವನ್ನು ಮಣಿಸುವ ಮೂಲಕ ತನ್ನ ಸೆಮಿಫೈನಲ್ ಪ್ರವೇಶವನ್ನು ಅಧಿಕೃತಗೊಳಿಸಿತು!
Related Articles
Advertisement
ಮಿಥಾಲಿ ರಾಜ್ ದಾಖಲೆ :
ಭಾರತದ ಸರದಿಯಲ್ಲಿ ಮೂವರಿಂದ ಅರ್ಧ ಶತಕ ದಾಖಲಾಯಿತು. ನಾಯಕಿ ಮಿಥಾಲಿ ರಾಜ್ ಸರ್ವಾಧಿಕ 68, ಯಾಸ್ತಿಕಾ ಭಾಟಿಯಾ 59 ಮತ್ತು ಹರ್ಮನ್‌ಪ್ರೀತ್ ಕೌರ್ 57 ರನ್ ಬಾರಿಸಿದರು. ಆದರೆ ಭಾರತದ ಓಪನಿಂಗ್ ಕ್ಲಿಕ್ ಆಗಲಿಲ್ಲ. ಸ್ಮತಿ ಮಂಧನಾ (10) ಮತ್ತು ಶಫಾಲಿ ವರ್ಮ (12) 6 ಓವರ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. 24 ವೈಡ್ ರನ್ ಕೂಡ ಭಾರತದ ಖಾತೆ ಸೇರಿತು.
ಮಿಥಾಲಿ ವಿಶ್ವಕಪ್‌ನಲ್ಲಿ ಅತ್ಯಧಿಕ 12 ಅರ್ಧ ಶತಕ ಹೊಡೆದ ನ್ಯೂಜಿ ಲ್ಯಾಂಡಿನ ಡೆಬ್ಲಿ ಹಾಕ್ಲಿ ಅವರ ದಾಖಲೆಯನ್ನು ಸರಿದೂಗಿಸಿದರು. ಒಟ್ಟಾರೆಯಾಗಿ ಇದು ಮಿಥಾಲಿ ಅವರ 63ನೇ ಏಕದಿನ ಅರ್ಧ ಶತಕ.
ಎರಡೂ ಪಂದ್ಯ ಗೆಲ್ಲಬೇಕಿದೆ ಭಾರತ :
ಭಾರತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಉಳಿದಿದೆ. ರನ್‌ರೇಟ್ ಕೂಡ ಪ್ಲಸ್‌ನಲ್ಲಿದೆ. ಆದರೆ ಮುಂದಿನ ಪಂದ್ಯಗಳ ಲೆಕ್ಕಾಚಾರ ಬಹಳ ಜಿಗುಟಾಗಿರುವುದರಿಂದ 3ನೇ ಹಾಗೂ 4ನೇ ಸ್ಥಾನಕ್ಕೆ ಕನಿಷ್ಠ 4 ತಂಡಗಳ ಪೈಪೋಟಿ ಇರುವುದರಲ್ಲಿ ಅನುಮಾನವಿಲ್ಲ. ಎಲ್ಲ 4 ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಸೆಮಿ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ. ಭಾರತ ಟಾಪ್-4 ತಂಡಗಳಲ್ಲಿ ಒಂದಾಗಬೇಕಿದ್ದರೆ ಉಳಿದ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲುವುದು ಅನಿವಾರ್ಯ.
ಭಾರತ ತನ್ನ ಮುಂದಿನ ಪಂದ್ಯವನ್ನು ಮಂಗಳವಾರ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಕಟ್ಟಕಡೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ-7 ವಿಕೆಟಿಗೆ 277 (ಮಿಥಾಲಿ 68, ಯಾಸ್ತಿಕಾ 59, ಕೌರ್ 57, ಬ್ರೌನ್ 30ಕ್ಕೆ 3, ಅಲಾನಾ 52ಕ್ಕೆ 2). ಆಸ್ಟ್ರೇಲಿಯ-49.3 ಓವರ್‌ಗಳಲ್ಲಿ 4 ವಿಕೆಟಿಗೆ 280 (ಲ್ಯಾನಿಂಗ್ 97, ಹೀಲಿ 72, ಹೇನ್ಸ್ 43, ಮೂನಿ ಔಟಾಗದೆ 30, ಪೂಜಾ 43ಕ್ಕೆ 2).
ಪಂದ್ಯಶ್ರೇಷ್ಠ: ಮೆಗ್ ಲ್ಯಾನಿಂಗ್.