Advertisement

ಆಸೀಸ್‌ಗೆ ಆಘಾತ; ಭಾರತ ಅಜೇಯ

10:33 AM Nov 19, 2018 | Team Udayavani |

ಪ್ರೊವಿಡೆನ್ಸ್‌ (ಗಯಾನಾ): ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ಅಮೋಘ ಬ್ಯಾಟಿಂಗ್‌, ಸ್ಪಿನ್ನರ್‌ಗಳ ಘಾತಕ ದಾಳಿಯ ನೆರವಿನಿಂದ ಆಸ್ಟ್ರೇಲಿಯವನ್ನು 48 ರನ್ನುಗಳಿಂದ ಮಣಿಸಿದ ಭಾರತ, ವನಿತಾ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಜೇಯವಾಗಿ ಲೀಗ್‌ ಅಭಿಯಾನ ಮುಗಿಸಿದೆ. 

Advertisement

“ಬಿ’ ವಿಭಾಗದ ಎಲ್ಲ 4 ಪಂದ್ಯಗಳನ್ನು ಗೆದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ ಸೆಮಿಫೈನಲ್‌ನಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌-ಇಂಗ್ಲೆಂಡ್‌ ಪಂದ್ಯದ ಪರಾಜಿತ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಆಸ್ಟ್ರೇಲಿಯ ವಿರುದ್ಧ ಸೆಮಿಫೈನಲ್‌ ಆಡಲಿದೆ. ಭಾರತದ ಸೆಮಿಫೈನಲ್‌ ಪಂದ್ಯ ಶುಕ್ರವಾರ ಬೆಳಗಿನ ಜಾವ ನಡೆಯಲಿದೆ.

ಶನಿವಾರ ರಾತ್ರಿಯ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 8 ವಿಕೆಟಿಗೆ 167 ರನ್‌ ಪೇರಿಸಿ ಸವಾಲೊಡ್ಡಿತು. ಇದು ಆಸ್ಟ್ರೇಲಿಯ ವಿರುದ್ಧ ಭಾರತ ದಾಖಲಿಸಿದ ಅತ್ಯಧಿಕ ಮೊತ್ತವಾಗಿದೆ. ಜವಾಬಿತ್ತ ಆಸೀಸ್‌ ಪಡೆ 19.4 ಓವರ್‌ಗಳಲ್ಲಿ 119 ರನ್ನಿಗೆ ಸರ್ವಪತನ ಕಂಡಿತು. 

ಬ್ಯಾಟಿಂಗಿಗೆ ಇಳಿಯದ ಹೀಲಿ
ಹಿಂದಿನ ಮೂರೂ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಅಲಿಸ್ಸಾ ಹೀಲಿ ಗಾಯಾಳಾಗಿ ಬ್ಯಾಟಿಂಗಿಗೆ ಇಳಿಯದಿದ್ದುದು ಭಾರತಕ್ಕೆ ಲಾಭವಾಗಿ ಪರಿಣಮಿಸಿತು. ಭಾರತೀಯ ಇನ್ನಿಂಗ್ಸಿನ 19ನೇ ಓವರ್‌ ವೇಳೆ ಕ್ಯಾಚ್‌ ಪಡೆಯುವ ಪ್ರಯತ್ನದಲ್ಲಿ ವಿಕೆಟ್‌ ಕೀಪರ್‌ ಹೀಲಿ ಮತ್ತು ಬೌಲರ್‌ ಮೆಗಾನ್‌ ಶಟ್‌ ಪರಸ್ಪರ ಢಿಕ್ಕಿ ಹೊಡೆದುಕೊಂಡಿದ್ದರು. ತೀವ್ರ ಪೆಟ್ಟು ಅನುಭವಿಸಿದ ಹೀಲಿ ಬಳಿಕ ಪಂದ್ಯದಿಂದ ಹೊರಗುಳಿಯಬೇಕಾಯಿತು. ಉಳಿದ ಅವಧಿಯಲ್ಲಿ ಬೆತ್‌ ಮೂನಿ ಕೀಪಿಂಗ್‌ ನಡೆಸಿದ್ದರು. 

ಅನುಜಾ. ದೀಪ್ತಿ ಅಮೋಘ ಬೌಲಿಂಗ್‌
ಸವಾಲಿನ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಆಸೀಸ್‌ ಆಟಗಾರ್ತಿಯರು ಭಾರತದ ಸ್ಪಿನ್‌ ಬಲೆಗೆ ಬಿದ್ದರು. ಆಫ್ಸ್ಪಿನ್ನರ್‌ ಅನುಜಾ ಪಾಟೀಲ್‌ 15ಕ್ಕೆ 3 ವಿಕೆಟ್‌ ಕಿತ್ತು ಅಧಿಕ ಯಶಸ್ಸು ಸಾಧಿಸಿದರು. ಉಳಿದ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮ, ರಾಧಾ ಯಾದವ್‌ ಮತ್ತು ಪೂನಂ ಯಾದವ್‌ ತಲಾ 2 ವಿಕೆಟ್‌ ಹಾರಿಸಿದರು. ಆಸ್ಟ್ರೇಲಿಯದ 9 ವಿಕೆಟ್‌ಗಳೂ ಸ್ಪಿನ್ನಿಗೆ ಉದುರಿದವು. ಮಧ್ಯಮ ಕ್ರಮಾಂಕದ ಎಲಿಸ್‌ ಪೆರ್ರಿ 39 ರನ್‌ ಹೊಡೆದದ್ದು ಆಸೀಸ್‌ ಸರದಿಯ ಸರ್ವಾಧಿಕ ಗಳಿಕೆಯಾಗಿದೆ. ಆ್ಯಶ್ಲಿ ಗಾರ್ಡನರ್‌ 20, ಬೆತ್‌ ಮೂನಿ 19 ರನ್‌ ಮಾಡಿದರು.

Advertisement

ಮಿಂಚಿದ ಮಂಧನಾ-ಕೌರ್‌
ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ್ದು ಸ್ಮತಿ ಮಂಧನಾ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಮಾತ್ರ. ಮಂಧನಾ 55 ಎಸೆತಗಳಿಂದ 83 ರನ್‌, ಕೌರ್‌ 27 ಎಸೆತಗಳಿಂದ 43 ರನ್‌ ಬಾರಿಸಿದರು. ಉಳಿದವರ್ಯಾರೂ ಎರಡಂಕೆಯ ಗಡಿ ತಲುಪಲಿಲ್ಲ. ಮಿಥಾಲಿ ರಾಜ್‌ ವಿಶ್ರಾಂತಿ ಪಡೆದಿದ್ದರು. ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದ ಮಂಧನಾ ಈ ಬಾರಿ ಅಮೋಘ ಬ್ಯಾಟಿಂಗ್‌ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಮಂಧನಾ ಸಾವಿರ ರನ್‌
ಆಸ್ಟ್ರೇಲಿಯ ವಿರುದ್ಧ ಮಿಂಚಿನ ಬ್ಯಾಟಿಂಗ್‌ ಪ್ರದರ್ಶಿಸಿ ಭಾರತದ ಜಯದಲ್ಲಿ ಪ್ರಧಾನ ಪಾತ್ರ ವಹಿಸಿದ ಸ್ಮತಿ ಮಂಧನಾ, ತಮ್ಮ ಅಮೋಘ ಪ್ರದರ್ಶನದ ವೇಳೆ ನೂತನ ಮೈಲುಗಲ್ಲೊಂದನ್ನು  ನೆಟ್ಟರು.  ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಭಾರತದ 3ನೇ ಆಟಗಾರ್ತಿ ಎನಿಸಿದರು. ಇದು ಮಂಧನಾ ಅವರ 49ನೇ ಇನ್ನಿಂಗ್ಸ್‌ ಆಗಿದ್ದು, ಒಟ್ಟು  1,012 ರನ್‌ ಗಳಿಸಿದ್ದಾರೆ. ಭಾರತದ ಉಳಿದಿಬ್ಬರು ಸಾವಿರ ರನ್‌ ಸಾಧಕಿಯರೆಂದರೆ ಮಿಥಾಲಿ ರಾಜ್‌ (80 ಇನ್ನಿಂಗ್ಸ್‌, 2,283 ರನ್‌) ಮತ್ತು ಹರ್ಮನ್‌ಪ್ರೀತ್‌ ಕೌರ್‌ (81 ಇನ್ನಿಂಗ್ಸ್‌, 1,870 ರನ್‌). ಮಂಧನಾ ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್‌ ಪೂರೈಸಿದ ಭಾರತದ 2ನೇ ಆಟಗಾರ್ತಿಯಾಗಿದ್ದಾರೆ.

ವಿಶ್ವದ ಬಲಿಷ್ಠ ತಂಡದ ವಿರುದ್ಧ ಈ ಉತ್ತಮ ಸಾಧನೆ ಮೂಡಿಬಂತು. ಹರ್ರಿ (ಕೌರ್‌) ಜತೆ ಆಡುವುದನ್ನು ನಾನು ಯಾವತ್ತೂ ಆನಂದಿಸುತ್ತೇನೆ. ಆದರೆ ಔಟಾದ ರೀತಿ ಮಾತ್ರ ಬೇಸರ ತಂದಿತು. 
ಸ್ಮತಿ ಮಂಧನಾ

Advertisement

Udayavani is now on Telegram. Click here to join our channel and stay updated with the latest news.

Next