Advertisement
ಬಹುತೇಕ ಇದು ಮೊದಲ ಪಂದ್ಯದ ಪುನರಾವರ್ತನೆಯಾಗಿತ್ತು. ಅಲ್ಲಿಯೂ ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ಸಣ್ಣ ಮೊತ್ತಕ್ಕೆ ಕುಸಿದಿತ್ತು. ಬಳಿಕ ಭಾರತ ನೋಲಾಸ್ ಜಯ ಭೇರಿ ಮೊಳಗಿಸಿತ್ತು. ಇಲ್ಲಿಯೂ ಜಿಂಬಾಬ್ವೆ 161 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಸರ್ವಪತನ ಕಂಡಿತು (38.1 ಓವರ್). ಆದರೆ ಪ್ರವಾಸಿಗರ 5 ವಿಕೆಟ್ ಹಾರಿಸುವಲ್ಲಿ ಯಶಸ್ವಿಯಾದದ್ದು ಜಿಂಬಾಬ್ವೆ ಪಾಲಿನ ಸಮಾಧಾನಕರ ಸಂಗತಿ. ಭಾರತ 25.4 ಓವರ್‌ಗಳಲ್ಲಿ 5 ವಿಕೆಟಿಗೆ 167 ರನ್ ಬಾರಿಸಿತು.
“ಫಾರ್ ಎ ಚೇಂಜ್’ ಎಂಬಂತೆ ದ್ವಿತೀಯ ಪಂದ್ಯದಲ್ಲಿ ಶಿಖರ್ ಧವನ್ ಜತೆ ನಾಯಕ ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸಲಿಳಿದರು. ಅವರ ಬ್ಯಾಟಿಂಗ್ ಫಾರ್ಮ್ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿತ್ತು. ಆದರೆ ರಾಹುಲ್ 5 ಎಸೆತ ಎದುರಿಸಿ ಕೇವಲ ಒಂದು ರನ್ ಮಾಡಿ ವಾಪಸಾದರು. ವೆಸ್ಟ್ ಇಂಡೀಸ್ ಎದುರಿನ ಫೆ. 9ರ ಅಹ್ಮದಾಬಾದ್ ಪಂದ್ಯದ ಬಳಿಕ ರಾಹುಲ್ ಬ್ಯಾಟಿಂಗ್ ನಡೆಸಿದ್ದು ಇದೇ ಮೊದಲು. ಕಳೆದ ಪಂದ್ಯದ ಹೀರೋಗಳಾದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ತಲಾ 33 ರನ್ ಬಾರಿಸಿದರು. ಗಿಲ್ ಇಲ್ಲಿ ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದರು.
Related Articles
Advertisement
ಮಧ್ಯಮ ಕ್ರಮಾಂಕದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಎಂದಿನ ಲಯದಲ್ಲಿ ಸಾಗಿ ಪರಿಸ್ಥಿತಿಯನ್ನು ನಿಭಾಯಿಸಿದರು. ಹೂಡಾ ತುಸು ಎಚ್ಚರಿಕೆಯಿಂದ ಆಡಿದರೆ, ಸ್ಯಾಮ್ಸನ್ ಮುನ್ನುಗ್ಗಿ ಬಾರಿಸತೊಡಗಿದರು. 39 ಎಸೆತಗಳಿಂದ 43 ರನ್ ಬಾರಿಸಿದ ಸ್ಯಾಮ್ಸನ್ ಈ ಪಂದ್ಯದ ಟಾಪ್ ಸ್ಕೋರರ್. ಸಿಡಿಸಿದ್ದು 4 ಸಿಕ್ಸರ್ ಹಾಗೂ 3 ಬೌಂಡರಿ. ಸಿಕ್ಸರ್ ಬಾರಿಸುವ ಮೂಲಕ ಅವರು ಭಾರತದ ಗೆಲುವು ಸಾರಿದರು.
ಪಂದ್ಯಶ್ರೇಷ್ಠ ಗೌರವವೂ ಒಲಿದು ಬಂತು. ದೀಪಕ್ ಹೂಡಾ ಗಳಿಕೆ 36 ಎಸೆತಗಳಿಂದ 25 ರನ್ (3 ಬೌಂಡರಿ).
ಮಿಂಚಿದ ಶಾರ್ದೂಲ್ಭಾರತದ ಬೌಲಿಂಗ್ ದಾಳಿಗೆ ಜಿಂಬಾಬ್ವೆ ಮತ್ತೊಮ್ಮೆ ತತ್ತರಿಸಿತು. ಈ ಬಾರಿ ಭಾರತದ ಬೌಲಿಂಗ್ ಹೀರೋ ಆಗಿ ಮೂಡಿಬಂದವರು ಶಾರ್ದೂಲ್ ಠಾಕೂರ್. ಅವರು ದೀಪಕ್ ಚಹರ್ ಬದಲು ಆಡುವ ಬಳಗದಲ್ಲಿ ಕಾಣಿಸಿಕೊಂಡು 3 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ದೀಪಕ್ ಹೂಡಾ ಒಂದೊಂದು ವಿಕೆಟ್ ಕಿತ್ತರು. ಬೌಲಿಂಗ್ ದಾಳಿಗಿಳಿದ ಆರೂ ಮಂದಿ ವಿಕೆಟ್ ಉರುಳಿಸಿದ್ದೊಂದು ವಿಶೇಷ. ಜಿಂಬಾಬ್ವೆ ಅಗ್ರ ಕ್ರಮಾಂಕದಲ್ಲಿ ತೀವ್ರ ಕುಸಿತ ಅನುಭವಿಸಿತು. 31 ರನ್ನಿಗೆ 4 ವಿಕೆಟ್ ಬಿತ್ತು. ಅನುಭವಿ ಸೀನ್ ವಿಲಿಯಮ್ಸ್ 42 ಮತ್ತು ರಿಯಾನ್ ಬರ್ಲ್ ಅಜೇಯ 39 ರನ್ ಮಾಡಿದರು.
ಸರಣಿಯ ಅಂತಿಮ ಪಂದ್ಯ ಸೋಮವಾರ ನಡೆಯಲಿದೆ. ಸಂಕ್ಷಿಪ್ತ ಸ್ಕೋರ್
ಜಿಂಬಾಬ್ವೆ-38.1 ಓವರ್‌ಗಳಲ್ಲಿ 161 (ಸೀನ್ ವಿಲಿಯಮ್ಸ್ 42, ರಿಯಾನ್ ಬರ್ಲ್ 39, ಇನೊಸೆಂಟ್ ಕಯ 16, ಸಿಕಂದರ್ ರಾಜ 16, ಠಾಕೂರ್ 38ಕ್ಕೆ 3). ಭಾರತ-25.4 ಓವರ್‌ಗಳಲ್ಲಿ 5 ವಿಕೆಟಿಗೆ 167 (ಧವನ್ 33, ರಾಹುಲ್ 1, ಗಿಲ್ 33, ಇಶಾನ್ 6, ಹೂಡಾ 25, ಸ್ಯಾಮ್ಸನ್ ಔಟಾಗದೆ 43, ಅಕ್ಷರ್ ಔಟಾಗದೆ 6, ಇತರ 20, ಲ್ಯೂಕ್ ಜೊಂಗ್ವೆ 33ಕ್ಕೆ 2). ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್.