ಕೀವ್/ಹೊಸದಿಲ್ಲಿ: ರಷ್ಯಾದಿಂದ ಖರೀದಿಸುತ್ತಿರುವ ಕಚ್ಚಾ ತೈಲಕ್ಕೆ ಹೆಚ್ಚು ಡಿಸ್ಕೌಂಟ್ ಪಡೆಯಲು ಭಾರತ ಪ್ರಯತ್ನಿಸುತ್ತಿದೆ.
ಪ್ರತೀ ಬ್ಯಾರೆಲ್ ತೈಲವನ್ನು 70 ಡಾಲರ್‌ಗಿಂತಲೂ (5,338 ರೂ. ) ಕಡಿಮೆ ದರದಲ್ಲಿ ನೀಡುವಂತೆ ಭಾರತವು ರಷ್ಯಾಗೆ ಮನವಿ ಮಾಡಿದೆ.
ಈ ಕುರಿತು ಎರಡೂ ದೇಶಗಳ ನಡುವೆ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಪ್ರಸ್ತುತ ಜಾಗತಿಕವಾಗಿ ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರೆಲ್‌ಗೆ 105 ಡಾಲರ್(8,007 ರೂ.) ನಷ್ಟಿದೆ. ಒಂದು ಬ್ಯಾರೆಲ್‌ನಲ್ಲಿ ಸುಮಾರು 158 ಲೀಟರ್‌ನಷ್ಟು ತೈಲವಿರುತ್ತದೆ.
ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದಾಗಿನಿಂದಲೂ ಭಾರತದ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ರಿಫೈನರಿಗಳು ರಷ್ಯಾದಿಂದ 4 ಕೋಟಿ ಬ್ಯಾರೆಲ್‌ಗೂ ಹೆಚ್ಚು ತೈಲ ಖರೀದಿಸಿವೆ. ಒಂದು ವೇಳೆ ಭಾರತದ ಕೋರಿಕೆಯಂತೆ ರಿಯಾಯಿತಿ ದರದಲ್ಲಿ ತೈಲ ದೊರೆತರೆ, ಪ್ರತಿ ತಿಂಗಳು ರಷ್ಯಾದಿಂದ 1.50 ಕೋಟಿ ಬ್ಯಾರೆಲ್ ತೈಲವನ್ನು ಖರೀದಿಸಲು (ಒಟ್ಟಾರೆ ಆಮದಿನ ಶೇ.10ರಷ್ಟು) ಭಾರತ ಸಿದ್ಧವಿದೆ ಎಂದೂ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಆಮದು ನಿರ್ಬಂಧ ಪ್ರಸ್ತಾವ: ಇನ್ನೊಂದೆಡೆ, ಉಕ್ರೇನ್ ವಿರುದ್ಧದ ಆಕ್ರಮಣಕ್ಕೆ ತಕ್ಕ ಪಾಠ ಕಲಿಸಬೇಕೆಂದರೆ ಕ್ರಮೇಣ ರಷ್ಯಾದ ತೈಲ ಆಮದಿನ ಮೇಲೆ ನಿರ್ಬಂಧ ಹೇರಬೇಕು ಎಂದು ಐರೋಪ್ಯ ಆಯೋಗ ಹೇಳಿದೆ. ಆರ್ಥಿಕ ದಿಗ್ಬಂಧನದ ಭಾಗವಾಗಿ 27 ರಾಷ್ಟ್ರಗಳ ಒಕ್ಕೂಟವು ರಷ್ಯಾದಿಂದ ತೈಲ ಆಮದಿಗೆ ನಿಷೇಧ ಹೇರಬೇಕು. 6 ತಿಂಗಳ ಒಳಗಾಗಿ ರಷ್ಯಾ ತೈಲ ಹಾಗೂ ವರ್ಷಾಂತ್ಯದೊಳಗಾಗಿ ಸಂಸ್ಕರಿತ ಉತ್ಪನ್ನಗಳ ಆಮದು ಸ್ಥಗಿತಗೊಳಿಸಬೇಕು ಎಂದೂ ಹೇಳಿದೆ.
ಉಕ್ಕು ಸ್ಥಾವರದಲ್ಲಿ ಸಿಲುಕಿದ 30 ಮಕ್ಕಳು
ಉಕ್ರೇನ್‌ನ ಮರಿಯುಪೋಲ್‌ನಲ್ಲಿರುವ ಅಝೋವ್‌ಸ್ಟಾಲ್ ಎಂಬ ಉಕ್ಕಿನ ಸ್ಥಾವರದಲ್ಲಿ ರಷ್ಯಾ ಮತ್ತು ಉಕ್ರೇನ್ ಪಡೆಗಳ ನಡುವೆ ಭಾರೀ ಕಾಳಗ ಆರಂಭವಾಗಿದೆ. ಇಲ್ಲಿ ತಂಗಿರುವ ಜನರನ್ನು ಸ್ಥಳಾಂತ ರಿಸಲು ನಡೆಸಿರುವ ಎಲ್ಲ ಯತ್ನವೂ ವಿಫಲವಾಗಿದೆ. ಸ್ಥಾವರದಲ್ಲಿ 30ಕ್ಕೂ ಹೆಚ್ಚು ಮಕ್ಕಳು ಸಿಲುಕಿ ಕೊಂಡಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ. ಮಕ್ಕಳ ರಕ್ಷಣೆಯೇ ನಮ್ಮ ಆದ್ಯತೆ ಎಂದಿದ್ದಾರೆ. ಮಕ್ಕಳು ಮಾತ್ರ ವಲ್ಲದೇ ಮಹಿಳೆಯರು, ಹಿರಿಯ ನಾಗರಿಕರು, ಗಾಯಾಳು ಸೈನಿಕರು ಕೂಡ ಇಲ್ಲಿ ಆಶ್ರಯ ಪಡೆದಿದ್ದರು.
ಥಿಯೇಟರ್ ಸ್ಫೋಟದಲ್ಲಿ ಸತ್ತಿದ್ದು 600 ಮಂದಿ!
ಮಾ.16ರಂದು ಮರಿಯುಪೋಲ್‌ನ ಡಾನೆಸ್ಕ್ ಅಕಾಡೆಮಿಕ್ ರೀಜನಲ್ ಡ್ರಾಮಾ ಥಿಯೇಟರ್ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ಬರೋಬ್ಬರಿ 600 ಮಂದಿ ಅಸುನೀಗಿದ್ದಾರೆ. ಅಂದರೆ ವಾಸ್ತವದಲ್ಲಿ ಸರಕಾರ ಹೇಳಿರುವ ಸಾವಿನ ಸಂಖ್ಯೆಗಿಂತಲೂ ದುಪ್ಪಟ್ಟು ಮಂದಿ ಅಲ್ಲಿ ಮೃತಪಟ್ಟಿದ್ದಾರೆ ಎಂದು ಅಸೋಸಿಯೇಟೆಡ್ ಪ್ರಸ್ ನಡೆಸಿದ ತನಿಖಾ ವರದಿಯಿಂದ ತಿಳಿದುಬಂದಿದೆ.