Advertisement
ಮೂರು ತಿಂಗಳ ಹಿಂದೆ ಭಾರತ ತಂಡ ಶ್ರೀಲಂಕಾ ತಂಡವನ್ನು ಅವರದೇ ನೆಲದಲ್ಲಿ ಟೆಸ್ಟ್, ಏಕದಿನ, ಟಿ20 ಮೂರೂ ಮಾದರಿಯ ಒಂಬತ್ತು ಪಂದ್ಯಗಳಲ್ಲಿಯೂ ಮಣಿಸಿ ಪಾರಮ್ಯ ಮೆರೆದಿತ್ತು. ಇದೀಗ ಲಂಕಾ ತಂಡ ಭಾರತದ ಪ್ರವಾಸ ಕೈಗೊಂಡಿದ್ದು, ಗೆಲುವಿನ ಕನಸು ಕಾಣುತ್ತಿದೆ. ಆದರೆ ಪ್ರವಾಸಿಗರಿಗೆ ಮತ್ತೂಮ್ಮೆ ಸೋಲುಣಿಸುವ ಮೂಲಕ ತಮ್ಮ ಪರಾಕ್ರಮ ತೋರಲು ಕೊಹ್ಲಿ ಪಡೆ ಸಜ್ಜಾಗಿದೆ.
Related Articles
Advertisement
ಖಾತೆ ತೆರೆಯುವ ತವಕಭಾರತ ಮತ್ತು ಲಂಕಾ ನಡುವೆ 1982-83ರಲ್ಲಿ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ಆರಂಭವಾಗಿವೆ. ಆದರೆ, ಈವರೆಗೆ ಭಾರತದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯದಲ್ಲೂ ಗೆಲ್ಲಲು ಲಂಕಾಗೆ ಸಾಧ್ಯವಾಗಿಲ್ಲ. 1982-2017ರವರೆಗೆ ತವರಿನಲ್ಲಿ ಲಂಕಾದೊಂದಿಗೆ ಭಾರತ 17 ಬಾರಿ ಮುಖಾಮುಖೀಯಾಗಿದೆ. 10 ಪಂದ್ಯಗಳಲ್ಲಿ ಜಯಗಳಿಸಿದೆ. 7 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು, 35 ವರ್ಷಗಳಲ್ಲಿ ಒಮ್ಮೆಯೂ ಗೆಲುವು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಮೊದಲ ಜಯದ ನಿರೀಕ್ಷೆಯಲ್ಲಿ ಲಂಕಾ ಇದ್ದರೆ, ದಾಖಲೆಯನ್ನು ಹಾಗೇ ಮುಂದುವರಿಸಿಕೊಂಡು ಹೋಗುವುದು ಭಾರತದ ಗುರಿಯಾಗಿದೆ. ಅನುಭವಿಗಳ ಕೊರತೆ
ಭಾರತಕ್ಕೆ ಬಂದಿಳಿದಿರುವ ಲಂಕಾ ತಂಡ ಸಂರ್ಪೂಣವಾಗಿ ಯುವ ಪ್ರತಿಭೆಗಳಿಂದ ಕೂಡಿದೆ. ನಾಯಕ ದಿನೇಶ್ ಚಾಂಡಿಮಲ್, ಆಲ್‌ರೌಂಡರ್ ಏಂಜೆಲೋ ಮ್ಯಾಥ್ಯೂಸ್, ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ಹಾಗೂ ವೇಗದ ಬೌಲರ್ ಸುರಂಗ ಹೊರತುಪಡಿಸಿ ಉಳಿದವರು ಬಹುತೇಕ ಹೊಸಮುಖಗಳೇ. ಇದು ಯುವ ಆಟಗಾರರಿಗೆ ಮೊದಲ ಭಾರತದ ಪ್ರವಾಸವಾಗಿದ್ದು, ಎದುರಾಳಿ ಬೌಲರ್‌ಗಳನ್ನು ಎದುರಿಸುವುದು ಸವಾಲಾಗಲಿದೆ. ಭರವಸೆ ಮೂಡಿಸಿದ ಯುವಕರು
ಇತ್ತೀಚೆಗೆ ಭಾರತ ಅಧ್ಯಕ್ಷ ಇಲೆವೆನ್‌ನೊಂದಿಗೆ ನಡೆದ ಅಭ್ಯಾಸ ಪಂದ್ಯದಲ್ಲಿ ಲಂಕಾ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು ಲಂಕಾ ಕ್ರಿಕೆಟ್ ಮಂಡಳಿಗೆ ಹಾಗೂ ಆಟಗಾರರಿಗೆ ಭಾರತದಲ್ಲಿ ಚೆನ್ನಾಗಿ ಆಡಬಹುದು ಎಂಬ ವಿಶ್ವಾಸ ಮೂಡಿಸಿದೆ. ಅಧ್ಯಕ್ಷರ ಇಲೆವೆನ್ ವಿರುದ್ಧ ಸಮರವಿಕ್ರಮ 77 ಎಸೆತಗಳಲ್ಲಿ 74 ರನ್‌ಗಳಿಸಿದರೆ, ಹಿರಿಯ ಆಟಗಾರ ಏಂಜೆಲೋ ಮ್ಯಾಥ್ಯೂಸ್ 54, ಡಿಕ್ವೆಲ್ಲಾ 73 ರನ್‌ಗಳಿಸಿದ್ದು, ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ. ಕೊಹ್ಲಿ ಪಡೆ ಎದುರಿಸುವುದು ಸುಲಭವಲ್ಲ
ಆರಂಭಿಕ ಆಟಗಾರ ಮುರಳಿ ವಿಜಯ್ ತಂಡಕ್ಕೆ ಮರಳಿರುವುದು ಭಾರತದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿದೆ. ಶಿಖರ್ ಧವನ್, ಚೆತೇಶ್ವರ ಪೂಜಾರ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ವೃದ್ಧಿಮಾನ್ ಸಹಾ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. ಇನ್ನು ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್, ವೇಗಿ ಇಶಾಂತ್ ಶರ್ಮಾ ಮತ್ತೆ ತಂಡಕ್ಕೆ ಮರಳಿರುವುದು ಬೌಲಿಂಗ್ ಬಲ ಹೆಚ್ಚಿಸಿದೆ. ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ, ಉಮೇಶ್ ಯಾದವ್ ಹಾಗೂ ಲೆಗ್‌ಸ್ಪಿನ್ನರ್ ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಜಾದೂ ಮಾಡಲಿದ್ದಾರೆ. ಆರಂಭಿಕ ಸ್ಥಾನಕ್ಕೆ ಪೈಪೋಟಿ
ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಯಾರನ್ನು ಕಣಕ್ಕಿಳಿಸಬೇಕೆಂಬುದು ನಾಯಕ ವಿರಾಟ್ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಿದೆ. ಈವರೆಗೆ ಶಿಖರ್ ಧವನ್ ಹಾಗೂ ಮುರುಳಿ ವಿಜಯ್ ಇನಿಂಗ್ಸ್ ಆರಂಭಿಸುತ್ತಿದ್ದರು. ಆದರೆ, ಮೂರು ತಿಂಗಳ ಹಿಂದೆ ನಡೆದ ಲಂಕಾ ಸರಣಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಇನಿಂಗ್ಸ್ ಆರಂಭಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಸಹ ಆರಂಭಿಕ ಆಟಗಾರನಾಗಿದ್ದು, ಉತ್ತಮ ಫಾರ್ಮ್ನಲ್ಲಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಸಹ ಉತ್ತಮ ಫಾರ್ಮ್ನಲ್ಲಿರುವುದು ನಾಯಕ ಕೊಹ್ಲಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗಂಭೀರ್ ಏಕೆ ಆಯ್ಕೆಯಾಗಿಲ್ಲ
ಪ್ರಸಕ್ತ ಋತುವಿನ ರಣಜಿ ಪಂದ್ಯಾವಳಿಯಲ್ಲಿ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಮೂರು ಸೆಂಚುರಿಗಳಿಸಿದರೂ, ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡದಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಗಂಭೀರ್ ಸಹ ಆರಂಭಿಕ ಆಟಗಾರರಾಗಿದ್ದು, ಈಗಾಗಲೇ ತಂಡದಲ್ಲಿ ಆರು ಮಂದಿ ಆರಂಭಿಕ ಆಟಗಾರರು ಇರುವುದೇ
ಅವರಿಗೆ ತಂಡದಲ್ಲಿ ಅವಕಾಶ ನೀಡದಿರಲು ಕಾರಣವಿರಬಹುದು ಎನ್ನಲಾಗಿದೆ. ಇನ್ನೊಂದು ಸುದ್ದಿ ಅಂದರೇ ಅದು ಗಂಭೀರ್ ಮತ್ತು ಕೊಹ್ಲಿ ನಡುವೆ ಇರುವ ಮುನಿಸಿನ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಲ್ಲ ಎನ್ನಲಾಗುತ್ತಿದೆ. ವೆಂ. ಸುನೀಲ್ ಕುಮಾರ್