Advertisement

“20-20 ಇಯರ್‌’ಗೆ ಭಾರತ-ಲಂಕಾ ನಾಂದಿ

09:59 AM Jan 06, 2020 | Sriram |

ಗುವಾಹಾಟಿ: ಭಾರತ ಮತ್ತು ಶ್ರೀಲಂಕಾ ತಂಡಗಳು ರವಿವಾರ ಗುವಾಹಾಟಿಯ “ಬರ್ಸಾಪಾರ ಸ್ಟೇಡಿಯಂ’ನಲ್ಲಿ “ಟ್ವೆಂಟಿ-ಟ್ವೆಂಟಿ ಇಯರ್‌’ಗೆ ನಾಂದಿ ಹಾಡಲಿವೆ. ಇದು ಟಿ20 ವಿಶ್ವಕಪ್‌ ವರ್ಷವಾಗಿದ್ದು, 2020ರ ಮೊದಲ ಚುಟುಕು ಕ್ರಿಕೆಟ್‌ ಪಂದ್ಯಕ್ಕೆ ಈ ಎರಡು ತಂಡಗಳು ಸಾಕ್ಷಿಯಾಗಲಿವೆ.

Advertisement

ಇತ್ತೀಚೆಗೆ ಅಸ್ಸಾಮ್‌ನಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಹಾಗೂ ಕರ್ಫ್ಯೂ ಹಿನ್ನೆಲೆಯಲ್ಲಿ ಈ ಪಂದ್ಯ ನಡೆದೀತೇ ಅಥವಾ ಸ್ಥಳಾಂತರಗೊಂಡೀತೇ ಎಂಬ ಪ್ರಶ್ನೆಗಳು ಹುಟ್ಟಿ ಕೊಂಡಿದ್ದವು. ಆದರೆ ಬಿಸಿಸಿಐ ಮತ್ತು ಅಸ್ಸಾಮ್‌ ಕ್ರಿಕೆಟ್‌ ಮಂಡಳಿ (ಎಸಿಎ) ವೇಳಾಪಟ್ಟಿಯಂತೆ ಪಂದ್ಯವನ್ನು ಆಯೋಜಿಸಲು ಪಣ ತೊಟ್ಟವು. ಹೀಗಾಗಿ ಖಾಕಿ ಸರ್ಪಗಾವಲಿನಲ್ಲಿ ಈ ಮುಖಾಮುಖೀ ಸಾಗಲಿದೆ.

ವಿಶ್ವಕಪ್‌ಗೆ ಕಠಿನ ಅಭ್ಯಾಸ
ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿ ಏರ್ಪಡಲಿದ್ದು, ಎಲ್ಲ ತಂಡಗಳು ಈ ಪ್ರತಿಷ್ಠಿತ ಕೂಟಕ್ಕೆ ಹುರಿಗೊಳ್ಳುವ ಯೋಜನೆಯಲ್ಲಿವೆ. ಹೀಗಾಗಿ ಯಾವ ಪಂದ್ಯವನ್ನೂ ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಎಲ್ಲವನ್ನೂ ವಿಶ್ವಕಪ್‌ ಅಭ್ಯಾಸವೆಂದೇ ಪರಿಗಣಿಸಿ ಹೋರಾಟಕ್ಕೆ ಇಳಿಯ ಬೇಕಾಗುತ್ತದೆ. ಸೂಕ್ತ ಸಂಯೋಜನೆಯೊಂದಿಗೆ ವರ್ಲ್ಡ್ ಕಪ್‌ಗೆ ಸಜ್ಜಾಗುವುದು ಪ್ರತಿಯೊಂದು ತಂಡದ ಗುರಿ. ಚೊಚ್ಚಲ ಟಿ20 ಚಾಂಪಿಯನ್‌ ಖ್ಯಾತಿಯ ಭಾರತ, ವಿಶ್ವಕಪ್‌ ಅವಧಿ ಯೊಳಗೆ ಸುಮಾರು 15 ಟಿ20 ಪಂದ್ಯಗಳನ್ನು ಆಡಲಿದೆ.

ಬುಮ್ರಾ ಆಗಮನ
ಘಾತಕ ವೇಗಿ, ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಸುಮಾರು 4 ತಿಂಗಳ ಬಳಿಕ ಟೀಮ್‌ ಇಂಡಿಯಾವನ್ನು ಪ್ರತಿನಿಧಿಸುತ್ತಿರುವುದು ಈ ಪಂದ್ಯದ ವಿಶೇಷ. ಆದರೆ ಅನುಭವಿಗಳಾದ ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌ ಮತ್ತು ಯುವ ಬೌಲರ್‌ ದೀಪಕ್‌ ಚಹರ್‌ ಈ ಸರಣಿಯಿಂದ ಹೊರಗುಳಿದಿರುವುದರಿಂದ ಬುಮ್ರಾ ಮೇಲೆ ಹೆಚ್ಚಿನ ಭಾರ ಬೀಳುವ ಸಂಭವ ಇದ್ದೇ ಇದೆ. ಇವರಿಗೆ ಶಿವಂ ದುಬೆ, ನವದೀಪ್‌ ಸೈನಿ, ಶಾದೂìಲ್‌ ಠಾಕೂರ್‌ ಎಷ್ಟರ ಮಟ್ಟಿಗೆ ಬೆಂಬಲ ನೀಡುತ್ತಾರೆ ಎಂಬುದು ಮುಖ್ಯ. ಆದರೆ ಚಹಲ್‌, ಕುಲದೀಪ್‌ ಮತ್ತು ಜಡೇಜ ಅವರನ್ನೊಳಗೊಂಡ ಭಾರತದ ಸ್ಪಿನ್‌ ವಿಭಾಗ ಹೆಚ್ಚು ಬಲಶಾಲಿಯಾಗಿದೆ.

ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡಿರುವುದರಿಂದ ಭಾರತದ ಅಗ್ರ ಕ್ರಮಾಂಕಕ್ಕೆ ತುಸು ಹೊಡೆತ ಬೀಳಲೂಬಹುದು. ಹೀಗಾಗಿ ಧವನ್‌, ರಾಹುಲ್‌, ಕೊಹ್ಲಿ ಹೆಚ್ಚು ಜವಾಬ್ದಾರಿಯಿಂದ ಬ್ಯಾಟ್‌ ಬೀಸಬೇಕಾಗುತ್ತದೆ. ರಾಹುಲ್‌, ಕೊಹ್ಲಿ ಫಾರ್ಮ್ ಬಗ್ಗೆ ಆತಂಕವೇನಿಲ್ಲ. ಕ್ರೀಸ್‌ ಆಕ್ರಮಿಸಿಕೊಂಡರೆ ಇವರನ್ನು ತಡೆಯುವುದು ಯಾವುದೇ ಎದುರಾಳಿಗೂ ದೊಡ್ಡ ಸವಾಲು.

Advertisement

ದಿಲ್ಲಿಯ ಎಡಗೈ ಆರಂಭಕಾರ ಶಿಖರ್‌ ಧವನ್‌ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೈದರಾಬಾದ್‌ ವಿರುದ್ಧ 140 ರನ್‌ ಬಾರಿಸಿ ಫಾರ್ಮ್ ಪ್ರದರ್ಶಿಸಿದ್ದಾರೆ. ಬಳಿಕ ಅಯ್ಯರ್‌, ಪಂತ್‌, ಪಾಂಡೆ ಬ್ಯಾಟಿಂಗ್‌ ಸರದಿಗೆ ಆಧಾರವಾಗಬೇಕಿದೆ. ಸಂಜು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಲಂಕಾ ಮಿಶ್ರ ಫ‌ಲಿತಾಂಶ
ಶ್ರೀಲಂಕಾ ಕಳೆದ ವರ್ಷ ಟಿ20 ಸರಣಿಯಲ್ಲಿ ಮಿಶ್ರ ಫ‌ಲ ಅನು ಭವಿಸಿದ ತಂಡ. ಪಾಕ್‌ಗೆ ತೆರಳಿ ಸರಣಿಯನ್ನು 3-0 ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡು ಬಂದರೂ ವರ್ಷಾಂತ್ಯ ಆಸ್ಟ್ರೇಲಿಯದಲ್ಲಿ ಇಷ್ಟೇ ಅಂತರದಿಂದ ವೈಟ್‌ವಾಶ್‌ ಅನುಭವಿಸಿತು. ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್‌ ಮರಳಿದರೂ ತಂಡದ ಬ್ಯಾಟಿಂಗ್‌ ಕುಸಲ್‌ ಪೆರೆರ ಅವರನ್ನು ಹೆಚ್ಚು ಅವಲಂಬಿಸಿದೆ. ಪಾಕಿಸ್ಥಾನವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜಪಕ್ಸ, ಒಶಾದ ಫೆರ್ನಾಂಡೊ ಮತ್ತು ಗುಣತಿಲಕ ಮಿಂಚಿದರೆ ಲಂಕಾ ಬ್ಯಾಟಿಂಗ್‌ ಕ್ಲಿಕ್‌ ಆಗುವುದರಲ್ಲಿ ಅನುಮಾನವಿಲ್ಲ.

ನಾಯಕ ಲಸಿತ ಮಾಲಿಂಗ, ಸ್ಪಿನ್ನರ್‌ಗಳಾದ ಹಸರಂಗ, ಧನಂಜಯ ಡಿ’ ಸಿಲ್ವ ದಾಳಿ ಬಗ್ಗೆ ಭಾರತ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಒಂದೇ ಪಂದ್ಯ, ಭಾರತಕ್ಕೆ ಸೋಲು
ಗುವಾಹಾಟಿಯ “ಬರ್ಸಾಪಾರ ಸ್ಟೇಡಿಯಂ’ನಲ್ಲಿ ಈವರೆಗೆ ನಡೆದದ್ದು ಒಂದೇ ಟಿ20 ಅಂತಾರಾಷ್ಟ್ರೀಯ ಪಂದ್ಯ. ಇದು ಭಾರತ ಮತ್ತು ಆಸ್ಟ್ರೇಲಿಯ ನಡುವೆ 2017ರ ಅಕ್ಟೋಬರ್‌ನಲ್ಲಿ ಸಾಗಿತ್ತು. ಇದರಲ್ಲಿ ಕೊಹ್ಲಿ ಪಡೆ ಶೋಚನೀಯ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ 8 ವಿಕೆಟ್‌ಗಳ ಸೋಲಿಗೆ ತುತ್ತಾಗಿತ್ತು.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಪ್ರವಾಸಿಗರ ಬೌಲಿಂಗ್‌ ದಾಳಿಗೆ ತತ್ತರಿಸಿ 118ಕ್ಕೆ ಕುಸಿದಿತ್ತು. ಆಸ್ಟ್ರೇಲಿಯ 13ಕ್ಕೆ 2 ವಿಕೆಟ್‌ ಕಳೆದುಕೊಂಡಿತಾದರೂ ಮೊಸಸ್‌ ಹೆನ್ರಿಕ್ಸ್‌ (62) ಮತ್ತು ಟ್ರ್ಯಾವಿಸ್‌ ಹೆಡ್‌ (48) ಸೇರಿಕೊಂಡು ತಂಡಕ್ಕೆ ಯಾವುದೇ ಆಘಾತ ಆಗದಂತೆ ನೋಡಿಕೊಂಡರು. 15.2 ಓವರ್‌ಗಳಲ್ಲಿ 2 ವಿಕೆಟಿಗೆ 122 ರನ್‌ ಬಾರಿಸಿದ ವಾರ್ನರ್‌ ಪಡೆ ಸರಣಿಯನ್ನು ಸಮಬಲಕ್ಕೆ ತಂದಿತು. 21ಕ್ಕೆ 4 ವಿಕೆಟ್‌ ಉಡಾಯಿಸಿದ ಜಾಸನ್‌ ಬೆಹೆÅಂಡಾಫ್ì ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ತಂಡಗಳು
ಭಾರತ:
ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌, ಶಿವಂ ದುಬೆ, ಯಜುವೇಂದ್ರ ಚಹಲ್‌, ಕುಲದೀಪ್‌ , ರವೀಂದ್ರ ಜಡೇಜ, ಜಸ್‌ಪ್ರೀತ್‌ ಬುಮ್ರಾ, ಶಾದೂìಲ್‌ ಠಾಕೂರ್‌, ನವದೀಪ್‌ ಸೈನಿ, ವಾಷಿಂಗ್ಟನ್‌ ಸುಂದರ್‌.

ಶ್ರೀಲಂಕಾ:
ಮಾಲಿಂಗ (ನಾಯಕ), ದನುಷ್ಕ ಗುಣತಿಲಕ, ಆವಿಷ್ಕ ಫೆರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್‌, ದಸುನ್‌ ಶಣಕ, ಕುಸಲ್‌ ಪೆರೆರ, ನಿರೋಷನ್‌ ಡಿಕ್ವೆಲ್ಲ, ಧನಂಜಯ ಡಿ’ ಸಿಲ್ವ,ಉದಾನ, ಭನುಕ ರಾಜಪಕ್ಸ, ಒಶಾದ ಫೆರ್ನಾಂಡೊ, ವನಿಂದು ಹಸರಂಗ, ಲಹಿರು ಕುಮಾರ, ಕುಸಲ್‌ ಮೆಂಡಿಸ್‌, ಲಕ್ಷಣ ಸಂದಕನ್‌, ಕಸುನ್‌ ರಜಿತ.

  ಜ. 5 ಮೊದಲ ಪಂದ್ಯ ಗುವಾಹಾಟಿ
 ಜ. 7 ಎರಡನೇ ಪಂದ್ಯ ಇಂದೋರ್‌
  ಜ. 10 ಮೂರನೇ ಪಂದ್ಯ ಪುಣೆ

ಆರಂಭ: ಸಂಜೆ 7.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next