ಹೊಸದಿಲ್ಲಿ : ದಿಲ್ಲಿಯಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ 3ನೇ ತಥಾ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಲಂಕಾ ನಾಯಕ ದಿನೇಶ್ ಚಂಡಿಮಾಲ್ ಅವರ ಉಜ್ವಲ ಶತಕವೊಂದನ್ನು ಬಾರಿಸಿರುವ ಹೊರತಾಗಿಯೂ ಅವರಿಗೆ ಭಾರತದೆದುರು ಏಕದಿನ ಸರಣಿ ಆಡುವ ಲಂಕೆಯ ತಂಡದಲ್ಲಿ ಸ್ಥಾನವೇ ಸಿಕ್ಕಿಲ್ಲ !
ಲಂಕೆಯ ಟೆಸ್ಟ್ ನಾಯಕನನ್ನು ಲಂಕಾ ಆಯ್ಕೆಗಾರರು ಏಕದಿನ ತಂಡದಿಂದ ಹೊರಗಿಟ್ಟಿದ್ದಾರೆ. ಸವ್ಯಸಾಚಿಗಳಾದ ಅಸೇಲಾ ಗುಣರತ್ನೆ ಮತ್ತು ಆರಂಭಿಕ ದಾಂಡಿಗ ದನುಷ್ಕ ಗುಣತಿಲಕ ಅವರನ್ನು ತಂಡಕ್ಕೆ ಸೇರಿಸಿದ್ದಾರೆ.
ದಿಲ್ಲಿಯಲ್ಲಿ ಭಾರತದ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್ ಗಳಿಸಿದ್ದ ಚಂಡಿಮಾಲ್ ಅವರು ಲಂಕೆಯ ಆಯ್ಕೆಗಾರರು ಏಕದಿನ ತಂಡಕ್ಕೆ ಪಡೆದಿರುವ ಪ್ರಮುಖ ತಲೆದಂಡವಾಗಿದ್ದಾರೆ. 28ರ ಹರೆಯದ ಚಂಡಿಮಾಲ್ 143 ಏಕದಿನ ಪಂದ್ಯಗಳನ್ನು ಆಡಿ 3,288 ರನ್‌ಗಳನ್ನು 32.23ರ ಸರಾಸರಿಯಲ್ಲಿ ಬಾರಿಸಿದ್ದಾರೆ. ನಾಲ್ಕು ಸೆಂಚುರಿ ಮತ್ತು 21 ಅರ್ಧ ಶತಕಗಳು ಅವರ ಖಾತೆಯಲ್ಲಿವೆ.
ಕಳೆದ ವಾರವಷ್ಟೇ ಲಂಕಾ ಆಯ್ಕೆಗಾರರು ಉಪುಲ್ ತರಂಗ ಅವರ ಸ್ಥಾನದಲ್ಲಿ ತಿಸ್ಸರ ಪಿರೇರ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ಹೆಸರಿಸಿದ್ದಾರೆ.
ಭಾರತದ ಎದುರಿನ ಲಂಕೆಯ ಮೊದಲ ಏಕದಿನ ಪಂದ್ಯ ಡಿ.10ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಉಳಿದೆರಡು ಪಂದ್ಯಗಳು ಮೊಹಾಲಿ ಮತ್ತು ವಿಶಾಖಪಟ್ಟದಲ್ಲಿ ಅನುಕ್ರಮವಾಗಿ ನಡೆಯಲಿವೆ.
ಲಂಕಾ ಏಕದಿನ ತಂಡ ಹೀಗಿದೆ : ತಿಸಾರ ಪಿರೇರ (ನಾಯಕ), ಉಪುಲ್ ತರಂಗ, ದನುಷ್ಕ ಗುಣತಿಲಕ, ನಿರೋಶನ ಡಿಕ್‌ವೆಲಾ, ಸದೀರ ಸಮರವಿಕ್ರಮ, ಲಾಹಿರು ತಿರಿಮನ್ನೆ, ಏಂಜಲೋ ಮ್ಯಾಥ್ಯೂಸ್, ಅಸೇಲ ಗುಣರತ್ನೆ, ಚದುರಗ ಡಿ’ಸಿಲ್ವ, ಸಚಿತ್ ಪತಿರಣ, ಅಖೀಲ ಧನಂಜಯ, ಜೆಫ್ರಿ ವ್ಯಾಂಡರ್‌ಸೇ, ದುಶ್‌ಮಂತ ಶಮೀರ, ಸುರಂಗ ಲಕ್ಮಲ್, ನುವಾನ್ ಪ್ರದೀಪ್.