ಧರ್ಮಶಾಲಾ: ಇಲ್ಲಿ ಪ್ರವಾಸಿ ಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಭಾನುವಾರ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ನಿರ್ವಹಣೆ ತೋರಿದ್ದು 112 ರನ್‌ಗಳಿಗೆ ಆಲೌಟಾಗಿದೆ. ತಂಡ ಭಾರಿ ಒತ್ತಡಕ್ಕೆ ಸಿಲುಕಿದ್ದ ವೇಳೆ ಸಮಯೋಚಿತ ಆಟವಾಡಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅರ್ಧ ಶತಕ ಸಿಡಿಸುವ ಮೂಲಕ ತಂಡ 100 ರ ಗಡಿ ದಾಟುವಂತೆ ಮಾಡಿ ತಂಡದ ಹೆಸರಿನಲ್ಲಾಗುತ್ತಿದ್ದ ಹೀನಾಯ ದಾಖಲೆಯೊಂದನ್ನು ದೂರ ಮಾಡಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಲಂಕಾ ಒಬ್ಬರಾದರಂತೆ ಒಬ್ಬರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿತು.
29 ಕ್ಕೆ7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಮಾಜಿ ನಾಯಕ ಧೋನಿ ತಂಡದ ಮಾನ ಉಳಿಸಲು ಪಣ ತೊಟ್ಟರು. ಅವರಿಗೆ ಕುಲ್‌ದೀಪ್ ಯಾದವ್ ಸಾಥ್ ನೀಡಿದರು. 19 ರನ್‌ಗಳಿಸಿದ್ದ ಕುಲ್‌ದೀಪ್ ಯಾದವ್ ಅವರು ಧನಂಜಯ್ ಎಸೆದ ಚೆಂಡನ್ನು ಡಿಕ್‌ವೆಲ್ಲಾ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು.
ತಂಡ 38.2 ಓವರ್‌ಗಳಲ್ಲಿ 112 ರನ್ ಗಳಿಗೆ ಆಲೌಟಾಗಿದ್ದು, ಲಂಕಾ ಗೆಲ್ಲಲು 113 ರನ್‌ಗಳ ಸುಲಭ ಗುರಿ ಮುಂದಿಟ್ಟಿದೆ.
ತಾಳ್ಮೆಯ ಆಟವಾಡಿದ ಅನುಭವಿ ಆಟಗಾರ ಧೋನಿ 87 ಎಸೆತಗಳಲ್ಲಿ 2 ಸಿಕ್ಸ್‌ರ್ ಮತ್ತು 10 ಬೌಂಡರಿಗಳನ್ನೊಳಗೊಂಡು 65 ರನ್‌ಗಳಿಸಿದರು. ಕೊನೆಯಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ನಿರ್ಗಮಿಸಿದರು.
ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ರೋಹಿತ್ ಶರ್ಮಾ ಮುನ್ನೆಡೆಸುತ್ತಿದ್ದಾರೆ.
ಖಾತೆ ತೆರೆಯುವ ಮುನ್ನವೇ ಶಿಖರ್ ಧವನ್ ನಿರ್ಗಮಿಸಿದರು. ಆ ಬಳಿಕ ರೋಹಿತ್ ಶರ್ಮಾ 2 , ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ 9 ರನ್‌ಗೆ ಔಟಾದರು. ದಿನೇಶ್ ಕಾರ್ತಿಕ್ 0 , ಮನೀಷ್ ಪಾಂಡೆ 2 , ಹಾರ್ದಿಕ್ ಪಾಂಡ್ಯಾ10, ಭುವನೇಶ್ವರ್ ಕುಮಾರ್ 0 ಗೆ ಔಟಾದರು.
ಪ್ರಕೃತಿ ಮನೋ ಹರ ತಾಣವಾದ ಧರ್ಮಶಾಲಾದಲ್ಲಿ ಇಬ್ಬನಿ, ಮಂಜು, ತೇವ, ಚಳಿಗಾಳಿ ಮೊದಲಾದ ಕಾರಣಗಳಿಂದ ಡೇ-ನೈಟ್ ಪಂದ್ಯ ಮಧ್ಯಾಹ್ನ 11.30ಕ್ಕೆ ಆರಂಭವಾಗಿದೆ. ಭಾರತದಲ್ಲಿ ಏಕದಿನ ಪಂದ್ಯವೊಂದು ಈ ವೇಳೆಗೆ ಶುರು ವಾಗುವುದು ಇದೇ ಮೊದಲಾಗಿದೆ.