Advertisement

ಹಿರಿಯ ಮ್ಯಾಥ್ಯೂಸ್‌ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ: ಚಂಡಿಮಾಲ್‌

07:00 AM Nov 16, 2017 | Team Udayavani |

ಕೋಲ್ಕತಾ:  ಭಾರತ ತಂಡದೆದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ತಂಡದ ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್‌ ಪ್ರಾಮುಖ್ಯವಾದ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಶ್ರೀಲಂಕಾ ನಾಯಕ ದಿನೇಶ್‌ ಚಂಡಿಮಾಲ್‌ ದೃಢಪಡಿಸಿದ್ದಾರೆ.

Advertisement

ಬ್ಯಾಟಿಂಗ್‌ ಶಕ್ತಿಯಾಗಿ ಅವರು ನಮಗೆ ಆತ್ಮವಿಶ್ವಾಸ ತುಂಬುತ್ತಾರೆ. ಹಾಗಾಗಿ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಅವರಿಗೆ ಅಪಾರ ಅನುಭವವಿದೆ. ಅಗ್ರ ಕ್ರಮಾಂಕದಲ್ಲಿ ಆಡುವ ಮೂಲಕ ಅವರು ಗರಿಷ್ಠ ಲಾಭ ಪಡೆಯಲಿದ್ದರೆ ಎಂದು ಚಂಡಿಮಾಲ್‌ ಹೇಳಿದರು.

2015ರ ಆಗಸ್ಟ್‌ ಬಳಿಕ ಮ್ಯಾಥ್ಯೂಸ್‌ ಒಮ್ಮೆಯೂ ಟೆಸ್ಟ್‌ನಲ್ಲಿ ಶತಕ ಸಿಡಿಸಿಲ್ಲ. ಈ ಹಂತದಲ್ಲಿ ಅವರು 32 ಇನ್ನಿಂಗ್ಸ್‌ ಆಡಿದ್ದು 28.65 ಸರಾಸರಿಯಂತೆ 917 ರನ್‌ ಗಳಿಸಿದ್ದಾರೆ. ಆಶ್ಚರ್ಯವೆಂಬಂತೆ ಅವರ ಈ ಹಿಂದಿನ ಶತಕ ಭಾರತ ವಿರುದ್ಧ ದಾಖಲಾಗಿತ್ತು. ಆಗಸ್ಟ್‌ನಲ್ಲಿ ಕೊಲಂಬೋದಲ್ಲಿ ನಡೆದ ಟೆಸ್ಟ್‌ನಲ್ಲಿ ಅವರು 102 ರನ್‌ ಗಳಿಸಿದ್ದರು.

ಅವರ ಅನುಭವವನ್ನು ನಾವು ಎದುರು ನೋಡುತ್ತಿದ್ದೇವೆ. 2013-14ರ ಋತುವಿನಲ್ಲಿ ಅವರು ಅಸಾಮಾನ್ಯ ನಿರ್ವಹಣೆ ನೀಡಿದ್ದರು. ಈ ಸರಣಿಯಲ್ಲಿ ಅವರಿಂದ ಉತ್ತಮ ಆಟ ನಿರೀಕ್ಷಿಸುತ್ತಿದ್ದೇವೆ ಎಂದು ಚಂಡಿಮಾಲ್‌ ತಿಳಿಸಿದರು. ಗಾಯದ ಸಮಸ್ಯೆಯಿಂದ ಅವರು ಪಾಕಿಸ್ಥಾನ ಸರಣಿಯಿಂದ ದೂರ ಉಳಿದಿದ್ದರು. ಇದೀಗ ಚೇತರಿಸಿಕೊಂಡಿರುವ ಅವರು ಕೇವಲ ಬ್ಯಾಟ್ಸ್‌ಮನ್‌ ಆಗಿ ತಂಡದಲ್ಲಿದ್ದಾರೆ.

ಬೌಲರ್‌ ಆಗಿ ನಾವು ಮ್ಯಾಥ್ಯೂಸ್‌ ಅವರ ಸೇವೆಯಿಂದ ವಂಚಿತರಾಗಿದ್ದೇವೆ. ಬೌಲಿಂಗ್‌ ನಡೆಸುತ್ತಿದ್ದರೆ ನಮಗೆ ನಿಜವಾಗಿಯೂ ಒಳ್ಳೆಯದಾಗುತ್ತಿತ್ತು. ದುರದೃಷ್ಟವಶಾತ್‌ ಗಾಯದ ಸಮಸ್ಯೆಯಿಂದಾಗಿ ಅವರು ಟೆಸ್ಟ್‌ನಲ್ಲಿ ಬೌಲಿಂಗ್‌ ಮಾಡುವಂತಿಲ್ಲ ಎಂದವರು ವಿವರಿಸಿದರು.

Advertisement

2009ರ ಬಳಿಕ ಶ್ರೀಲಂಕಾ ಭಾರತ ನೆಲದಲ್ಲಿ ಮೊದಲ ಟೆಸ್ಟ್‌ ಆಡುತ್ತಿದ್ದು ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಶ್ರೀಲಂಕಾ ತಂಡವು 10 ಪಂದ್ಯಗಳಲ್ಲಿ ಸೋತಿದ್ದು ಆರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

ಈಡನ್‌ ಗಾರ್ಡನ್ಸ್‌ನ ಪಿಚ್‌ ಹುಲ್ಲಿನಿಂದ ಆವೃತ್ತವಾಗಿದೆ. ಹೀಗಾಗಿ ಇದರ ಸದುಪಯೋಗವನ್ನು ಬ್ಯಾಟ್ಸ್‌ಮನ್‌ ಮತ್ತು ಬೌಲರ್ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಚಂಡಿಮಾಲ್‌ ತಿಳಿಸಿದರು. ಇಲ್ಲಿ ನಾವು ಆಡಿದ ಈ ಹಿಂದಿನ ಸರಣಿಯಲ್ಲಿ ನಿಜವಾಗಿಯೂ ಚೆನ್ನಾಗಿ ಆಡಿದ್ದೆವು. ಬೌನ್ಸಿ ಪಿಚ್‌ ಮತ್ತು ಹುಲ್ಲಿನಿಂದ ಆವೃತವಾದ ಪಿಚ್‌ನಲ್ಲಿ ನಾವು ಚೆನ್ನಾಗಿ ಆಡುವ ವಿಶ್ವಾಸ ನನಗಿದೆ ಎಂದು ಚಂಡಿಮಾಲ್‌ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next