ಕೋಲ್ಕತಾ :ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಜಯಭೇರಿ ಬಾರಿಸಿರುವ ಭಾರತ ತಂಡ ಸರಣಿಯನ್ನು(2-0) ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 39.4 ಓವರ್ ಗಳಲ್ಲಿ 215 ರನ್ ಗಳಿಗೆ ಸರ್ವಪತನ ಕಂಡಿತು. ಅವಿಷ್ಕಾ ಫೆರ್ನಾಂಡೊ 20,ನುವನಿಡು ಫೆರ್ನಾಂಡೊ 50, ಕುಸಾಲ್ ಮೆಂಡಿಸ್ 34 , ಧನಂಜಯ ಡಿ ಸಿಲ್ವಾ 0, ನಾಯಕ ಶನಕ 2 ,ಅಸಲಂಕಾ15 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ಬಂದ ಹಸರಂಗ 21, ಕರುಣಾರತ್ನ ವೆಲ್ಲಲಾಗೆ 32 ,ರಜಿತಾ ಔಟಾಗದೆ 17 ರನ್ ಗಳಿಸಿ ತಂಡ 200 ರನ್ ಗಳ ಗಡಿ ದಾಟಲು ನೆರವಾದರು.
ಭಾರತದ ಪರ ಬೌಲಿಂಗ್ ನಲ್ಲಿ ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ 3 ವಿಕೆಟ್ ಪಡೆದು ಗಮನ ಸೆಳೆದರು. ಉಮ್ರಾನ್ ಮಲಿಕ್ 2 ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಭಾರತ 43.1 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 215 ರನ್ ಗಳಿಸಿ ಜಯಭೇರಿ ಬಾರಿಸಿತು. 33 ಆಗುವಷ್ಟರಲ್ಲಿ 17 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. 41 ರನ್ ಆಗಿದ್ದಾಗ 21 ರನ್ ಗಳಿಸಿದ್ದ ಶುಭ್ ಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು.ವಿರಾಟ್ ಕೊಹ್ಲಿ 4 ರನ್ ಗಳಿಗೆ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ 28 ರನ್ ಗಳಿಸಿದ್ದಾಗ ರಜಿತಾ ಎಲ್ಬಿಡಬ್ಲ್ಯು ಮಾಡಿದರು. ಹಾರ್ದಿಕ್ ಪಾಂಡ್ಯ 36 ರನ್ ಕೊಡುಗೆ ಸಲ್ಲಿಸಿದರು. ಅಕ್ಷರ್ ಪಟೇಲ್ 21 ರನ್ ಗಳಿಸಿ ಔಟಾದರು.
ತಾಳ್ಮೆಯ ಆಟವಾಡಿದ ಕೆ.ಎಲ್. ರಾಹುಲ್ ಅರ್ಧ ಶತಕ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 103 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿದರು. ಕುಲದೀಪ್ ಯಾದವ್ ಔಟಾಗದೆ 10 ರನ್ ಕೊಡುಗೆ ಸಲ್ಲಿಸಿದರು.