Advertisement

ಭಾರತ-ದ.ಆಫ್ರಿಕಾ ಟೆಸ್ಟ್: ಮೊದಲ ದಿನದಾಟಕ್ಕೆ ಮಳೆ ಅಡ್ಡಿ ; ರೋಹಿತ್ ಶತಕ, ಮಾಯಾಂಕ್ ಮಿಂಚು

09:48 AM Oct 03, 2019 | Hari Prasad |

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ನಡುವೆ ಇಂದು ಆರಂಭಗೊಂಡ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಭಡ್ತಿಪಡೆದ ರೋಹಿತ್ ಶರ್ಮಾ ಅವರು ಭರ್ಜರಿ ಶತಕ ಬಾರಿಸಿದ್ದಾರೆ. ಮಳೆಯಿಂದಾಗಿ ಆಟ ಸ್ಥಗಿತಗೊಂಡಾಗ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೇ 202 ರನ್ನುಗಳನ್ನು ದಾಖಲಿಸಿ ಸುಸ್ಥಿತಿಯಲ್ಲಿದೆ.

Advertisement

ಪ್ರಥಮ ದಿನದಾಟಕ್ಕೆ ಮಳೆ ಅಡ್ಡಿಯಾಗಿದೆ. 59.1 ಓವರ್ ಗಳ ಆಟ ಮಾತ್ರವೇ ಈ ದಿನ ಸಾಧ್ಯವಾಗಿದ್ದು ಮಳೆಯೊಂದಾಗಿ ದಿನದ ಆಟವನ್ನು ಇಲ್ಲಿಗೇ ನಿಲ್ಲಿಸಲಾಗಿದೆ. ರೋಹಿತ್ ಮತ್ತು ಮಾಯಾಂಕ್ ಅವರು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ಆಯ್ದುಕೊಂಡರು. ಭಾರತದ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್ ಅವರು ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಅದರಲ್ಲೂ ಆರಂಭಿಕನ ಸ್ಥಾನಕ್ಕೆ ಭಡ್ತಿ ಪಡೆದ ರೋಹಿತ್ ಶರ್ಮಾ ಅವರು ಉತ್ತಮ ಆಟವಾಡಿ ಭರ್ಜರಿ ಶತಕ ಬಾರಿಸಿದರು.

60ನೇ ಓವರ್ ನ ಆಟ ಪ್ರಗತಿಯಲ್ಲಿದ್ದಾಗ ಮಳೆ ಬಂದು ಪಂದ್ಯ ಸ್ಥಗಿತಗೊಂಡಿತು. ಬಳಿಕ ಮಳೆ ನಿಲ್ಲುವ ಸೂಚನೆ ಇಲ್ಲದೇ ಇದ್ದಾಗ ದಿನದಾಟವನ್ನು ಅಲ್ಲಿಗೇ ನಿಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರು 115 ರನ್ನು ಮತ್ತು ಮಾಯಾಂಕ್ ಅಗರ್ವಾಲ್ ಅವರು 84 ರನ್ನುಗಳನ್ನು ಮಾಡಿ ಆಟ ಕಾಯ್ದುಕೊಂಡಿದ್ದಾರೆ. ಇವರಿಬ್ಬರ ನಡುವೆ ಈಗಾಗಲೇ 202 ರನ್ನುಗಳ ಜೊತೆಯಾಟ ಸಾಗಿದೆ.

ರೋಹಿತ್ ಶರ್ಮಾ ಅವರು ಸುದೀರ್ಘ ಸಮಯದ ಬಳಿಕ ತಮ್ಮ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಶತಕವನ್ನು ದಾಖಲಿಸಿದರು. ಈ ಹಿಂದೆ 2016ರ ನವಂಬರ್ ತಿಂಗಳಿನಲ್ಲಿ ರೋಹಿತ್ ಅವರು ಶ್ರೀಲಂಕಾ ವಿರುದ್ಧ ನಾಗ್ಪುರದಲ್ಲಿ ಕೊನೆಯ ಶತಕವನ್ನು ಬಾರಿಸಿದ್ದರು.

Advertisement

ಏಕದಿನ ಮತ್ತು ಟಿ20 ಮಾದರಿಯಲ್ಲಿ ರೋಹಿತ್ ಅವರು ಭರ್ಜರಿ ದಾಖಲೆಗಳನ್ನು ಹೊಂದಿದ್ದರೂ ಆರು ವರ್ಷಗಳ ಹಿಂದೆಯೇ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರೂ ಈ ಮಾದರಿಯ ಕ್ರಿಕೆಟ್ ನಲ್ಲಿ ಸ್ಥಿರ ಪ್ರದರ್ಶನ ನೀಡಲು ರೋಹಿತ್ ಅವರಿಗೆ ಸಾಧ್ಯವಾಗಿರಲಿಲ್ಲ. ತನ್ನ ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ಶತಕ ದಾಖಲಿಸಿರುವ ಹೆಗ್ಗಳಿಕೆಯೂ ರೋಹಿತ್ ಅವರದ್ದಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next