ಜೊಹಾನ್ಸ್‌ಬರ್ಗ್: ಪ್ರವಾಸಿ ಭಾರತವನ್ನು ಎದುರಿಸಲು ದಕ್ಷಿಣ ಆಫ್ರಿಕಾ ಅತ್ಯಂತ ಬಲಿಷ್ಠವಾದ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ತಂಡದ ಒಟ್ಟು ಸಾಮರ್ಥ್ಯವನ್ನು ಅಳೆಯುವಾಗ “ಕ್ರಿಕೆಟ್ ಸೌತ್ ಆಫ್ರಿಕಾ’ ಇಷ್ಟೊಂದು ಬಲಾಡ್ಯ ಟೆಸ್ಟ್ ಬಳಗವನ್ನು ಆರಿಸಿದ್ದು 2015ರ ಬಳಿಕ ಇದೇ ಮೊದಲು!
ಗಾಯಾಳಾಗಿ ಜಿಂಬಾಬ್ವೆ ವಿರುದ್ಧದ ಚತುರ್ದಿನ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಫಾ ಡು ಪ್ಲೆಸಿಸ್, ಆಲ್‌ರೌಂಡರ್ ಕ್ರಿಸ್ ಮಾರಿಸ್ ಭಾರತದೆದುರಿನ ಸರಣಿಗೆ ಮರಳಿದ್ದಾರೆ. ಹಿರಿಯ ವೇಗಿ ಡೇಲ್ ಸ್ಟೇನ್ ಕೂಡ ಅವಕಾಶ ಪಡೆದಿದ್ದಾರೆ. ಮಾರಿಸ್ ತಂಡದ ಆಯ್ಕೆಗೂ ಸ್ವಲ್ಪ ಮೊದಲು ತಮ್ಮ ಫಿಟ್‌ನೆಸ್ ಸರ್ಟಿಫಿಕೆಟ್ ನೀಡಿದ್ದರು.
ಕಳೆದ ಒಂದು-ಒಂದೂವರೆ ವರ್ಷದಿಂದಲೂ ಗಾಯಾಳಾಗಿದ್ದ ಸ್ಟೇನ್, ಮಾರ್ಕೆಲ್, ಡಿ ವಿಲಿಯರ್ ಅವರೆಲ್ಲ ಒಟ್ಟಾಗಿ ಟೆಸ್ಟ್ ಆಡಿದ್ದು ಅಪರೂಪವಾಗಿತ್ತು. ಹೀಗಾಗಿ 2015ರ ಬಳಿಕ ಮೊದಲ ಬಾರಿಗೆ ಅತ್ಯಂತ ಸಶಕ್ತ ಹಾಗೂ ಪರಿಪೂರ್ಣ ತಂಡವೊಂದನ್ನು ದಕ್ಷಿಣ ಆಫ್ರಿಕಾ ಅಂತಿಮಗೊಳಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ತಂಡದಲ್ಲಿ ಒಟ್ಟು 7 ಮಂದಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳು, 5 ಮಂದಿ ವೇಗಿಗಳು, ಓರ್ವ ಸ್ಪಿನ್ನರ್, ಒಬ್ಬ ಆಲ್‌ರೌಂಡರ್ ಇದ್ದಾರೆ. ಕೀಪರ್ ಕ್ವಿಂಟನ್ ಡಿ ಕಾಕ್ ನೆರವಿಗೆ ಮೀಸಲು ಕೀಪರ್‌ನನ್ನು ಆರಿಸಲಾಗಿಲ್ಲ.
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಈಗಾಗಲೇ ದಕ್ಷಿಣ ಆಫ್ರಿಕಾಕ್ಕೆ ಬಂದಿಳಿದಿದೆ. ಸರಣಿಯ 3 ಟೆಸ್ಟ್ ಪಂದ್ಯಗಳು ಕೇಪ್‌ಟೌನ್ (ಜ. 5-9), ಸೆಂಚುರಿಯನ್ (ಜ. 13-17) ಮತ್ತು ಜೊಹಾನ್ಸ್‌ಬರ್ಗ್‌ನಲ್ಲಿ (ಜ. 24-28) ನಡೆಯಲಿವೆ.
ದಕ್ಷಿಣ ಆಫ್ರಿಕಾ ತಂಡ: ಫಾ ಡು ಪ್ಲೆಸಿಸ್ (ನಾಯಕ), ಹಾಶಿಮ್ ಆಮ್ಲ, ಟೆಂಬ ಬವುಮ, ಕ್ವಿಂಟನ್ ಡಿ ಕಾಕ್, ಥಿಯುನಿಸ್ ಡಿ ಬ್ರುಯಿನ್, ಎಬಿ ಡಿ ವಿಲಿಯರ್, ಡೀನ್ ಎಲ್ಗರ್, ಕೇಶವ್ ಮಹಾರಾಜ್. ಐಡನ್ ಮಾರ್ಕ್‌ರಮ್, ಮಾರ್ನೆ ಮಾರ್ಕೆಲ್, ಕ್ರಿಸ್ ಮಾರಿಸ್, ಆ್ಯಂಡಿಲ್ ಫೆಲುಕ್ವಾಯೊ, ವೆರ್ನನ್ ಫಿಲಾಂಡರ್, ಕಾಗಿಸೊ ರಬಾಡ, ಡೇಲ್ ಸ್ಟೇನ್.