ಸೆಂಚೂರಿಯನ್, ದಕ್ಷಿಣ ಆಫ್ರಿಕ : ಆತಿಥೇಯ ದಕ್ಷಿಣ ಆಫ್ರಿಕ ಎದುರಿನ ಎರಡನೇ ಟಸ್ಟ್ ಪಂದ್ಯದ ಸೋಮವಾರದ ಮೂರನೇ ದಿನದಾಟದಂದು ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ, ಅಂಪಾಯರ್ ವಿರುದ್ಧ ತೋರಿದ ಅಸಮಾಧಾನದ ವರ್ತನೆಗೆ ಪಂದ್ಯ ಶುಲ್ಕದ ಶೇ.25ರಷ್ಟನ್ನು ದಂಡವಾಗಿ ಹೇರಲಾಗಿದೆ.
ವಿರಾಟ್ ಕೊಹ್ಲಿ ಐಸಿಸಿ ನೀತಿ ಸಂಹಿತೆಯ ಒಂದನೇ ಮಟ್ಟದ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಅವರಿಗೆ ಈ ದಂಡ ಮತ್ತು ಒಂದು ಡೀಮೆರಿಟ್ ಪಾಯಿಂಟ್ ವಿಧಿಸಲಾಗಿದೆ ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರ ದಕ್ಷಿಣ ಆಫ್ರಿಕದ ಎರಡನೇ ಇನ್ನಿಂಗ್ಸ್ ಆಟದ 25ನೇ ಓವರ್ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದ. ಮಳೆಯಿಂದಾಗಿ ಆಟದ ಮೈದಾನ ಒದ್ದೆಯಾಗಿರುವುದು ಚೆಂಡಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೊಹ್ಲಿ ಅಂಪಾಯರ್ ಮೈಕೆಲ್ ಗಫ್ ಅವರಲ್ಲಿ ಪದೇ ಪದೇ ದೂರುತ್ತಿದ್ದರು. ಒಂದು ಹಂತದಲ್ಲಿ ಕೊಹ್ಲಿ ಸಿಟ್ಟಿನಿಂದ ಚೆಂಡನ್ನು ನೆಲಕ್ಕೆ ಒಗೆದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ವರ್ತನೆ ಆಟದ ಸ್ಫೂರ್ತಿಗೆ ವಿರುದ್ಧ ವಾಗಿತ್ತು.
ಕೊಹ್ಲಿ ತೋರಿದ್ದ ಈ ವರ್ತನೆಯು ಐಸಿಸಿ ನೀತಿ ಸಂಹಿತೆಯ 2.1.1. ವಿಧಿಯ ಉಲ್ಲಂಘನೆಯಾಗಿದೆ ಎಂದು ಅಂಪಾಯರ್‌ಗಳಾದ ಗಫ್ ಮತ್ತು ಪೌಲ್ ರೀಫೆಲ್, ಥರ್ಡ್ ಅಂಪಾಯರ್ ರಿಚರ್ಡ್ ಕೆಟಲ್‌ಬರೋ ಮತ್ತು ನಾಲ್ಕನೇ ಅಂಪಾಯರ್ ಅಲ್ಲಾಹುದ್ದೀನ್ ಪ್ಯಾಲೇಕರ್ ದೋಷಾರೋಪ ಮಾಡಿದ್ದರು.
ಪಂದ್ಯದ ಬಳಿಕ ಕೊಹ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು ದಂಡ ಪಾವತಿಗೆ ಸಮ್ಮತಿಸಿದರು. ಪರಿಣಾಮವಾಗಿ ವಿಚಾರಣೆಯನ್ನು ಅವರು ತಪ್ಪಿಸಿಕೊಂಡರು.