Advertisement

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

01:54 AM Oct 19, 2024 | Team Udayavani |

ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಪ್ರಥಮ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್ನಿಗೆ ಕುಸಿದಿದ್ದ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಚೇತರಿಕೆಯ ಪ್ರದರ್ಶನ ನೀಡಿದೆ.

Advertisement

ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮತ್ತು ಸರ್ಫರಾಜ್‌ ಖಾನ್‌ ಅವರ ಅರ್ಧ ಶತಕದ ನೆರವಿನೊಂದಿಗೆ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟಿಗೆ 231 ರನ್‌ ಬಾರಿಸಿ ತಿರುಗೇಡು ನೀಡಲು ಪ್ರಯತ್ನಿಸುತ್ತಿದೆ. ಸದ್ಯ ಭಾರತ ತಂಡ 125 ರನ್‌ ಹಿನ್ನಡೆಯಲ್ಲಿದೆ. ಈ ಮೊದಲು ರಚಿನ್‌ ರವೀಂದ್ರ ಅವರ ಆಕರ್ಷಕ ಶತಕದಿಂದಾಗಿ ನ್ಯೂಜಿಲ್ಯಾಂಡ್‌ ತಂಡವು ಮೊದಲ ಇನ್ನಿಂಗ್ಸ್‌ ನಲ್ಲಿ 402 ರನ್‌ ಬಾರಿಸಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 356 ರನ್‌ ಭರ್ಜರಿ ಮುನ್ನಡೆ ಗಳಿಸಿತ್ತು.

ರಚಿನ್‌ ಅಮೋಘ ಶತಕ
ಮೂರು ವಿಕೆಟಿಗೆ 180 ರನ್ನಿನಿಂದ ದಿನ ದಾಟ ಆರಂಭಿಸಿದ ನ್ಯೂಜಿಲ್ಯಾಂಡಿಗೆ ರಚಿನ್‌ ರವೀಂದ್ರ ಅವರ ಅಮೋಘ ಬ್ಯಾಟಿಂಗ್‌ ನೆರವು ಲಭಿಸಿತು. ರಚಿನ್‌ ಅವರು ಭಾರತೀಯ ದಾಳಿಯನ್ನು ಸಮರ್ಥವಾಗಿ ಎದುರಿಸಿ 134 ರನ್‌ ಬಾರಿಸಿ ತಂಡಕ್ಕೆ ಬಲ ತುಂಬಿದರು. ಅವರೊಂದಿಗೆ ಟಿಮ್‌ ಸೌಥಿ 65 ರನ್‌ ಸಿಡಿಸಿ ತಂಡದ ದೊಡ್ಡ ಮೊತ್ತಕ್ಕೆ ಕೊಡುಗೆ ಸಲ್ಲಿಸಿದರು.

ಅವರಿಬ್ಬರು 8ನೇ ವಿಕೆಟಿಗೆ 137 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಸೌಥಿ 73 ಎಸೆತಗಳಿಂದ 65 ರನ್‌ ಗಳಿಸಿದರು. 5 ಬೌಂಡರಿ ಮತ್ತು 4 ಸಿಕ್ಸರ್‌ ಬಾರಿಸಿದರು. ರಚಿನ್‌ ಕೊನೆಯವರಾಗಿ ಔಟಾಗುವ ಮೊದಲು 157 ಎಸೆತಗಳಿಂದ 134 ರನ್‌ ಹೊಡೆದರು. 13 ಬೌಂಡರಿ ಮತ್ತು 4 ಸಿಕ್ಸರ್‌ ಹೊಡೆದಿದ್ದರು.

ಮೂವರಿಂದ ಅರ್ಧಶತಕ
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಉತ್ತಮ ಆಟದ ಪ್ರದರ್ಶನ ನೀಡಿ ತಿರುಗೇಟು ನೀಡಲು ಪ್ರಯತ್ನಿಸುತ್ತಿದೆ. ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮತ್ತು ಸರ್ಫರಾಜ್‌ ಅರ್ಧಶತಕ ಹೊಡೆದು ಆಧರಿಸಿದ್ದಾರೆ. ಇನ್ನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಮತ್ತು ರೋಹಿತ್‌ ಶರ್ಮ ಮೊದಲ ವಿಕೆಟಿಗೆ 72 ರನ್‌ ಪೇರಿಸಿದರು. ಈಹಂತದಲ್ಲಿ ತಂಡ ಜೈಸ್ವಾಲ್‌ ಅವರ ವಿಕೆಟನ್ನು ಕಳೆದುಕೊಂಡಿತು. 52 ರನ್‌ ಗಳಿಸಿದ ವೇಳೆ ರೋಹಿತ್‌ ಭಾರತೀಯ ಮೂಲದ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಅವರಿಗೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ಅವರ ಮುಖದಲ್ಲಿ ಮೂಡಿದ ಆಘಾತ ಭಾವದ ಚಿತ್ರಗಳು ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಕೊನೆ ಹಂತದಲ್ಲಿ ತಂಡವನ್ನು ಆಧರಿಸಿದ ವಿರಾಟ್‌ ಕೊಹ್ಲಿ ಮತ್ತು ಸರ್ಫರಾಜ್‌ ಖಾನ್‌ ಮೂರನೇ ವಿಕೆಟಿಗೆ 136 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ದಿನದಾಟ ಅಂತ್ಯಗೊಳ್ಳಲು ಸ್ವಲ್ಪವೇ ಸಮಯವಿರುಗಾಗ 70 ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಔಟಾಗಿ ನಿರಾಸೆ ಅನುಭವಿಸಿದರು. ಅಲ್ಲಿಗೆ ದಿನದಾಟ ಅಂತ್ಯಗೊಳಿಸಲಾಯಿತು. 70 ರನ್‌ ಬಾರಿಸಿದ ಸರ್ಫರಾಜ್‌ ಕ್ರೀಸ್‌ನಲ್ಲಿ ಉಳಿದಿದ್ದಾರೆ.

ಟೆಸ್ಟ್‌ನಲ್ಲಿ 9000 ರನ್‌ ಕ್ಲಬ್‌ಗ ವಿರಾಟ್‌ ಕೊಹ್ಲಿ
ನ್ಯೂಜಿಲ್ಯಾಂಡ್‌ ವಿರುದ್ಧ 70 ರನ್‌ ಬಾರಿಸುವ ಮೂಲಕ ವಿರಾಟ್‌ ಕೊಹ್ಲಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ 9000 ರನ್‌ ಪೂರೈಸಿದ್ದಾರೆ. ಅವರು ಈ ಸಾಧನೆ ಮಾಡಿದ ಭಾರತದ 4ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಸಚಿನ್‌ ತೆಂಡುಲ್ಕರ್‌ (15,921), ರಾಹುಲ್‌ ದ್ರಾವಿಡ್‌ (13,265), ಸುನೀಲ್‌ ಗಾವಸ್ಕರ್‌ (10,122) ಈ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನದಲ್ಲಿದ್ದಾರೆ.

ಟೆಸ್ಟ್‌ ನಲ್ಲಿ 102 ಸಿಕ್ಸರ್‌: ಭಾರತ ಗರಿಷ್ಠ ದಾಖಲೆ
ಕಿವೀಸ್‌ ವಿರುದ್ಧ 5 ಸಿಕ್ಸರ್‌ ಬಾರಿಸಿರುವ ಭಾರತ, ಪ್ರಸಕ್ತ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ 100+ ಸಿಕ್ಸರ್‌ ಪೂರೈಸಿದ ಮೊದಲ ತಂಡವೆನಿಸಿದೆ. ಇಂಗ್ಲೆಂಡ್‌ 2022ರಲ್ಲಿ 89 ಸಿಕ್ಸರ್‌ ಬಾರಿಸಿದ್ದು ಹಿಂದಿನ ದಾಖಲೆ.

ಮೊಣಕಾಲು ಗಾಯ: ಕೀಪಿಂಗ್‌ ಮಾಡದ ಪಂತ್‌
ಇನ್ನಿಂಗ್ಸ್‌ ಸೋಲಿನ ಭೀತಿಯಲ್ಲಿರುವ ಭಾರತಕ್ಕೆ ಮತ್ತೂಂದು ಹಿನ್ನಡೆಯಾಗಿದೆ. ಎರಡನೇ ದಿನ ಕಿವೀಸ್‌ ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದ ರಿಷಭ್‌ ಪಂತ್‌ 3ನೇ ದಿನವೂ ಮೈದಾನಕ್ಕಿಳಿಯಲಿಲ್ಲ. ಹೀಗಾಗಿ ಪಂತ್‌ ಬದಲು ಧೃವ್‌ ಜುರೆಲ್‌ ವಿಕೆಟ್‌ ಕೀಪಿಂಗ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next