Advertisement

ಅಗ್ರ ಕ್ರಮಾಂಕ ಮಿಂಚಿದರೆ ಸರಣಿ ಒಲಿದೀತು

12:15 AM Feb 01, 2023 | Team Udayavani |

ಅಹ್ಮದಾಬಾದ್‌: ಲಕ್ನೋದ “ಆಘಾತಕಾರಿ ಪಿಚ್‌’ ಮೇಲೆ ಹಾಗೂ-ಹೀಗೂ ಒದ್ದಾಡಿ ನ್ಯೂಜಿಲ್ಯಾಂಡ್‌ ಎದುರಿನ ಟಿ20 ಸರಣಿ ಯನ್ನು ಸಮಬಲಕ್ಕೆ ತಂದ ಭಾರತಕ್ಕೆ ಬುಧವಾರ ಅಹ್ಮದಾಬಾದ್‌ನಲ್ಲಿ ಅಗ್ನಿ ಪರೀಕ್ಷೆ ಎದು
ರಾಗಲಿದೆ. ಸರಣಿ ವಶಪಡಿಸಿಕೊಳ್ಳ ಬೇಕಾದರೆ ಟೀಮ್‌ ಇಂಡಿಯಾದ ಅಗ್ರ ಸರದಿಯ ಯುವ ಬ್ಯಾಟರ್ ಮಿಂಚ ಬೇಕಾದುದು ಅನಿವಾರ್ಯ ಎಂಬುದು ಈ ಪಂದ್ಯದ “ವನ್‌ ಲೈನ್‌ ಸ್ಟೋರಿ’.

Advertisement

ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌. ರಾಹುಲ್‌ ಸ್ಥಾನಕ್ಕೆ ಬಂದಿರುವ ಶುಭಮನ್‌ ಗಿಲ್‌, ಇಶಾನ್‌ ಕಿಶನ್‌ ಮತ್ತು ರಾಹುಲ್‌ ತ್ರಿಪಾಠಿ ಇನ್ನೂ ರನ್‌ ಬರಗಾಲದಿಂದ ಮುಕ್ತರಾಗಿಲ್ಲ. ತಮಗೆ ಲಭಿಸಿದ ಅವ ಕಾಶವನ್ನು ಬಳಸಿಕೊಳ್ಳಲು ಸಂಪೂರ್ಣ ವಿಫ‌ಲರಾಗಿದ್ದಾರೆ. ಹೀಗಾಗಿ ಈ ಅಂತಿಮ ಅವಕಾಶವನ್ನಾದರೂ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಅಂತಿಮ ಅವಕಾಶ ಏಕೆಂದರೆ, ಅಹ್ಮದಾಬಾದ್‌ ಮುಖಾ ಮುಖೀ ಬಳಿಕ ಸದ್ಯ ಭಾರತದ ಮುಂದೆ ಯಾವುದೇ ಟಿ20 ಪಂದ್ಯಗಳಿಲ್ಲ.

ಬಾಂಗ್ಲಾದೇಶ ವಿರುದ್ಧ ದ್ವಿಶತಕ ಬಾರಿಸಿದ ಬಳಿಕ ಇಶಾನ್‌ ಕಿಶನ್‌ ಸಂಪೂರ್ಣ ಮಂಕಾಗಿದ್ದಾರೆ. ಹಾಗೆಯೇ ಶುಭಮನ್‌ ಗಿಲ್‌ ಏಕದಿನ ಫಾರ್ಮ್ ಅನ್ನು ಇಲ್ಲಿ ಮುಂದುವರಿಸಲಾಗದೆ ಪರದಾಡುತ್ತಿದ್ದಾರೆ. ರಾಹುಲ್‌ ತ್ರಿಪಾಠಿ ಅವರಂತೂ ಲಭಿಸಿದ ಯಾವ ಅವಕಾಶವನ್ನೂ ಈವರೆಗೆ ಸೂಕ್ತವಾಗಿ ಬಳಸಿಕೊಂಡಿಲ್ಲ. ಹೀಗೆ ಅಗ್ರ ಕ್ರಮಾಂಕ ಸತತ ವೈಫ‌ಲ್ಯ ಕಾಣುತ್ತ ಹೋದರೆ ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಸಶಕ್ತ ತಂಡವೊಂದನ್ನು ಕಟ್ಟು ವುದು ಹೇಗೆ? ಇದು ಟೀಮ್‌ ಇಂಡಿಯಾ ಮುಂದಿರುವ ಪ್ರಶ್ನೆ.

ಕಳೆದ ಲಕ್ನೋ ಪಂದ್ಯದ ಉದಾಹರಣೆ ಯನ್ನೇ ತೆಗೆದುಕೊಳ್ಳೋಣ. ಪಿಚ್‌ ಹೇಗೇ ಇರಲಿ, ಎಷ್ಟೇ ತಿರುವು ಪಡೆಯು ತ್ತಿರಲಿ… ಇದನ್ನೇ ಒಂದು ಚಾಲೆಂಜ್‌ ಆಗಿ ತೆಗೆದುಕೊಂಡು ಬ್ಯಾಟ್‌ ಬೀಸುವ ಜಾಣ್ಮೆ ಕ್ರಿಕೆಟಿಗರಲ್ಲಿ ಇರಬೇಕಾಗುತ್ತದೆ. ಕೇವಲ ಬ್ಯಾಟಿಂಗ್‌ ಟ್ರ್ಯಾಕ್‌ ಮೇಲಷ್ಟೇ ಪರಾಕ್ರಮ ಮೆರೆಯುವುದು ಕ್ರಿಕೆಟ್‌ ಅಲ್ಲ. ಬಹುಶಃ ಲಕ್ನೋದಲ್ಲಿ ಅಗ್ರ ಕ್ರಮಾಂಕ ಕ್ಲಿಕ್‌ ಆಗಿದ್ದೇ ಆದರೆ 100 ರನ್‌ ಚೇಸ್‌ ಮಾಡಲು ಸೂರ್ಯ ಕುಮಾರ್‌, ಪಾಂಡ್ಯ ಕೂಡ ಒದ್ದಾಟ ನಡೆಸ
ಬೇಕಿರಲಿಲ್ಲ. ಪಂದ್ಯ 20ನೇ ಓವರ್‌ ತನಕ ಬೆಳೆಯುತ್ತಲೂ ಇರಲಿಲ್ಲ.

ಆದರೂ ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಕಡಿಮೆ. ಹೀಗಾಗಿ ತಂಡಕ್ಕೆ ಮರಳಿದ ಓಪನರ್‌ ಪೃಥ್ವಿ ಶಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನು ಮಾನ. ಹಾರ್ದಿಕ್‌ ಪಾಂಡ್ಯ ನಾಯ ಕತ್ವದಲ್ಲೇ ಗುಜರಾತ್‌ ಟೈಟಾನ್ಸ್‌ ಮೊದಲ ಪ್ರವೇಶದಲ್ಲೇ ಐಪಿಎಲ್‌ ಎತ್ತಿದ ತಾಣದಲ್ಲಿ ಈ ಪಂದ್ಯ ನಡೆ ಯಲಿದೆ. ಪಾಂಡ್ಯ ಅವರಿಗೆ ಸರಣಿ ಗೆಲುವಿನ ಅದೃಷ್ಟ ಕೂಡ ಇಲ್ಲಿ ಒಲಿದೀತೆಂಬುದು ನಿರೀಕ್ಷೆ.

Advertisement

ಬ್ಯಾಟಿಂಗ್‌ ಟ್ರ್ಯಾಕ್‌?
ಲಕ್ನೋದ ಬೌಲಿಂಗ್‌, ಅದರಲ್ಲೂ ಸ್ಪಿನ್ನರ್‌ಗಳ ಯಶಸ್ಸು ಅಹ್ಮದಾಬಾದ್‌ ಪಂದ್ಯದ ಮೇಲುಗೈಗೆ ಮಾನದಂಡ ಎಂದು ಭಾವಿಸುವಂತಿಲ್ಲ. ಅದು ವಿಪರೀತ ತಿರುವು ಪಡೆಯುತ್ತಿದ್ದ ಅಪ್ಪಟ ಸ್ಪಿನ್‌ ಪಿಚ್‌ ಆಗಿತ್ತು. ಇಲ್ಲಿ ಎರಡೂ ಕಡೆಯ ಸ್ಪಿನ್ನರ್‌ಗಳು ಯಶಸ್ಸು ಸಾಧಿಸಿದ್ದರು. ಅರ್ಷದೀಪ್‌ ಸಿಂಗ್‌ ಬೌಲಿಂಗ್‌ ಕೂಡ ಶಿಸ್ತಿನಿಂದ ಕೂಡಿತ್ತು.

ಆದರೆ ಅಹ್ಮದಾಬಾದ್‌ ಟ್ರ್ಯಾಕ್‌ ಬ್ಯಾಟಿಂಗ್‌ಗೆ ನೆರವಾಗುವ ಸಾಧ್ಯತೆ ಹೆಚ್ಚು. ಮತ್ತೆ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯನ್ನು ನಿರೀಕ್ಷಿಸಲಾಗಿದೆ.

ಕಿವೀಸ್‌ಗೂ ಸಮಸ್ಯೆ…
ಭಾರತಕ್ಕೆ ಅಗ್ರ ಕ್ರಮಾಂಕದ ಚಿಂತೆ ಯಾದರೆ, ನ್ಯೂಜಿಲ್ಯಾಂಡ್‌ ಮಧ್ಯಮ ಕ್ರಮಾಂಕದ ಸಮಸ್ಯೆಯಲ್ಲಿದೆ. ಚಾಪ್‌ಮನ್‌, ಫಿಲಿಪ್ಸ್‌, ಮಿಚೆಲ್‌, ಬ್ರೇಸ್‌ವೆಲ್‌ “ಗೇಮ್‌ ಚೇಂಜರ್‌’ ಆಗುವುದನ್ನು ತಂಡ ಎದುರು ನೋಡುತ್ತಿದೆ.
ಬೌಲಿಂಗ್‌ ವಿಭಾಗದಲ್ಲಿ ಕಿವೀಸ್‌ಗೆ 8 ಆಯ್ಕೆಗಳಿವೆ ಎಂಬುದು ಲಕ್ನೋದಲ್ಲಿ ಸಾಬೀತಾಗಿದೆ. ಇದೊಂದು ಆಲ್‌ರೌಂಡರ್‌ಗಳ ಪಡೆ. ನಿರ್ಣಾಯಕ ಪಂದ್ಯವಾದ ಕಾರಣ ಲ್ಯಾಥಂ ಪಡೆ ತನ್ನೆಲ್ಲ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡುವ ಎಲ್ಲ ಸಾಧ್ಯತೆ ಇದೆ.

ಅಹ್ಮದಾಬಾದ್‌ನಲ್ಲಿ ಭಾರತ
ಅಹ್ಮದಾಬಾದ್‌ನಲ್ಲಿ ಈವರೆಗೆ 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದ್ದು, ಭಾರತ ಎಲ್ಲದರಲ್ಲೂ ಪಾಲ್ಗೊಂಡಿದೆ. ಮೊದಲ ಪಂದ್ಯ ನಡೆದದ್ದು 2012ರಲ್ಲಿ. ಎದುರಾಳಿ ಪಾಕಿಸ್ಥಾನ. ಬೃಹತ್‌ ಮೊತ್ತದ ಪಂದ್ಯವನ್ನು ಧೋನಿ ಪಡೆ 11 ರನ್ನುಗಳಿಂದ ಜಯಿಸಿತ್ತು. ಭಾರತ 5ಕ್ಕೆ 192, ಪಾಕಿಸ್ಥಾನ 7ಕ್ಕೆ 181 ರನ್‌ ಗಳಿಸಿತ್ತು. ಬ್ಯಾಟಿಂಗ್‌ನಲ್ಲಿ ಯುವರಾಜ್‌ ಸಿಂಗ್‌ (72), ಬೌಲಿಂಗ್‌ನಲ್ಲಿ ಅಶೋಕ್‌ ದಿಂಡಾ (36ಕ್ಕೆ 3) ಮಿಂಚಿದ್ದರು. ಯುವಿಗೆ ಪಂದ್ಯಶ್ರೇಷ್ಠ ಗೌರವ ಒಲಿದಿತ್ತು.

ಅನಂತರದ್ದು 2021ರ ಭಾರತ-ಇಂಗ್ಲೆಂಡ್‌ ನಡುವಿನ ಮುಖಾಮುಖೀ. ಸರಣಿಯ ಐದೂ ಪಂದ್ಯಗಳ ಆತಿಥ್ಯ ಅಹ್ಮದಾಬಾದ್‌ ಪಾಲಾಗಿತ್ತು. ಭಾರತ ಈ ಸರಣಿಯನ್ನು 3-2 ಅಂತರದಿಂದ ಜಯಿಸಿತ್ತು.

ವಿಶ್ವ ವಿಜೇತರಿಗೆ ಸಚಿನ್‌ ಸಮ್ಮಾನ
ಅಂಡರ್‌-19 ವಿಶ್ವಕಪ್‌ ವಿಜೇತ ಭಾರತೀಯ ವನಿತಾ ಕ್ರಿಕೆಟಿಗರನ್ನು “ಬ್ಯಾಟಿಂಗ್‌ ಐಕಾನ್‌’ ಸಚಿನ್‌ ತೆಂಡುಲ್ಕರ್‌ ಸಮ್ಮಾನಿಸಲಿದ್ದಾರೆ. ಈ ಕಾರ್ಯಕ್ರಮ ಬುಧವಾರ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಅಂತಿಮ ಟಿ20 ಪಂದ್ಯದ ಆರಂಭಕ್ಕೂ ಮುನ್ನ ಕ್ರಿಕೆಟ್‌ ಸಾಧಕರನ್ನು ಬಿಸಿಸಿಐ ಗೌರವಿಸಲಿದೆ.

“ಭಾರತ ರತ್ನ ಸಚಿನ್‌ ತೆಂಡುಲ್ಕರ್‌ ಮತ್ತು ಬಿಸಿಸಿಐ ಅಧಿಕಾರಿಗಳು ಸೇರಿ ಕೊಂಡು ವಿಶ್ವಕಪ್‌ ವಿಜೇತ ಭಾರತದ ಅಂಡರ್‌-19 ವನಿತಾ ತಂಡವನ್ನು ಸಮ್ಮಾನಿಸಲಿದ್ದಾರೆ. ಫೆ. ಒಂದರ ಸಂಜೆ 6.30ಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಕಾರ್ಯಕ್ರಮ ನಡೆಯಲಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next