Advertisement

ಮತ್ತೆ ಆಕ್ಲೆಂಡ್‌ ಆಟ; ಕಾದಿದೆ ಬ್ಯಾಟಿಂಗ್‌ ಮೇಲಾಟ

10:23 AM Jan 27, 2020 | Sriram |

ಆಕ್ಲೆಂಡ್‌: ಶುಕ್ರವಾರ ಆಕ್ಲೆಂಡ್‌ನ‌ “ಈಡನ್‌ ಪಾರ್ಕ್‌’ನಲ್ಲಿ ಆತಿಥೇಯ ನ್ಯೂಜಿಲ್ಯಾಂಡಿನ ಮೇಲೆ ಸವಾರಿ ಮಾಡಿದ ಟೀಮ್‌ ಇಂಡಿಯಾ ಈಗ ರವಿವಾರ ಇದೇ ಅಂಗಳದಲ್ಲಿ ಮತ್ತೂಂದು ಗೆಲುವಿಗೆ ಸ್ಕೆಚ್‌ ಹಾಕಿದೆ. ದ್ವಿತೀಯ ಟಿ20 ಪಂದ್ಯ ಕೂಡ ಇಲ್ಲೇ ನಡೆಯಲಿದ್ದು, ಗೆದ್ದದ್ದೇ ಆದಲ್ಲಿ ಸರಣಿ ಮೇಲೆ ಕೊಹ್ಲಿ ಪಡೆಯ ಹಿಡಿತ ಬಿಗಿಗೊಳ್ಳಲಿದೆ.

Advertisement

ಆಕ್ಲೆಂಡ್‌ನ‌ಲ್ಲಿ ನಡೆದ ಮೊದಲ ಮುಖಾಮುಖೀ 200 ಪ್ಲಸ್‌ ಮೊತ್ತದ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸಣ್ಣ ಅಂಗಳದಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಮುನ್ನುಗ್ಗಿ ಬಾರಿಸಿದ್ದರು. ಬರೋಬ್ಬರಿ 30 ಬೌಂಡರಿ, 20 ಸಿಕ್ಸರ್‌ಗಳು ಸಿಡಿದಿದ್ದವು. ರವಿವಾರ ಇದಕ್ಕಿಂತ ಭಿನ್ನವಾದ ಆಟವನ್ನು ನಿರೀಕ್ಷಿಸುವುದು ಬೇಡವೆನಿಸುತ್ತದೆ. ಮತ್ತೆ ಬೌಲರ್‌ಗಳು ದಂಡಿಸಿಕೊಳ್ಳುವುದು, ಇನ್ನೂರರಾಚೆಯ ಮೇಲಾಟ ನಡೆಯುವುದು ಬಹುತೇಕ ಖಚಿತ. ಆಗ ಚೇಸಿಂಗ್‌ ನಡೆಸುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚು ಎಂಬುದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ. ಇಲ್ಲವೇ ಮೊದಲು ಬ್ಯಾಟಿಂಗ್‌ ನಡೆಸುವ ತಂಡ 225ರ ತನಕವಾದರೂ ಸಾಗಬೇಕು!

ಬದಲಾವಣೆ ಅನುಮಾನ
ಈ ಪಂದ್ಯಕ್ಕಾಗಿ ಭಾರತದ ತಂಡದಲ್ಲಿ ಬದಲಾವಣೆಯ ಸಾಧ್ಯತೆ ಕಡಿಮೆ. ಬೌಲಿಂಗ್‌ ವಿಭಾಗದಲ್ಲಿ ಶಾದೂìಲ್‌ ಠಾಕೂರ್‌ ಬದಲು ನವದೀಪ್‌ ಸೈನಿ ಸೇರ್ಪಡೆಯ ಮಾತುಗಳು ಕೇಳಿಬರುತ್ತಿವೆಯಾದರೂ ಆಕ್ಲೆಂಡ್‌ ಮಟ್ಟಿಗೆ ಯಾವ ಬೌಲರ್‌ ಇದ್ದರೂ ಒಂದೇ ಎಂಬ ಸ್ಥಿತಿ ಇದೆ. “ಸಣ್ಣ ಬೌಂಡರಿ’ಯಾದ್ದರಿಂದ ಇಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರವನ್ನು ತಡೆಯುವುದು ಸುಲಭವಲ್ಲ. ಶುಕ್ರವಾರ ಮೊಹಮ್ಮದ್‌ ಶಮಿ (4 ಓವರ್‌, 53/0), ಶಾದೂìಲ್‌ ಠಾಕೂರ್‌ (3 ಓವರ್‌, 44/1) ದುಬಾರಿಯಾದುದರ ಹಿಂದೆ ಬೇರೆ ಯಾವುದೇ ಕಾರಣ ಇಲ್ಲ.

ನ್ಯೂಜಿಲ್ಯಾಂಡ್‌ ಬೌಲರ್‌ಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸೌಥಿ (48/0), ಸ್ಯಾಂಟ್ನರ್‌ (50/1) ಕೂಡ ಚೆನ್ನಾಗಿ ದಂಡಿಸಿಕೊಂಡಿದ್ದರು. ಆದರೆ ಇಂಥ ಬ್ಯಾಟಿಂಗ್‌ ಟ್ರ್ಯಾಕ್‌ನಲ್ಲೂ ಬೌಲರ್‌ಗಳು ಮ್ಯಾಜಿಕ್‌ ಮಾಡಿದ್ದೇ ಆದರೆ ಅದೊಂದು ಅಮೋಘ ಸಾಧನೆಯಾಗಲಿದೆ.

ಇತ್ತಂಡಗಳ ಬೌಲಿಂಗ್‌ ಸಾಮರ್ಥ್ಯವನ್ನು ಅವಲೋಕಿಸಿದರೆ ನ್ಯೂಜಿಲ್ಯಾಂಡಿಗಿಂತ ಭಾರತದ್ದೇ ಒಂದು ತೂಕ ಹೆಚ್ಚು. ಜತೆಗೆ ವೆರೈಟಿಯೂ ಇದೆ. ಬೌಲ್ಟ್, ಫ‌ರ್ಗ್ಯುಸನ್‌ ಗೈರಲ್ಲಿ ಕಿವೀಸ್‌ ಬೌಲಿಂಗ್‌ ದುರ್ಬಲವಾಗಿ ಗೋಚರಿಸುತ್ತಿದೆ.

Advertisement

ಇತ್ತಂಡಗಳಿಗೆ ಬ್ಯಾಟಿಂಗೇ ಕೀ ಬ್ಯಾಟಿಂಗ್‌ ಮಟ್ಟಿಗೆ ಎರಡೂ ತಂಡಗಳದ್ದು ಸಮಬಲ ಸಾಮರ್ಥ್ಯ. ನಮ್ಮಲ್ಲಿ ರಾಹುಲ್‌, ರೋಹಿತ್‌, ಕೊಹ್ಲಿ, ಅಯ್ಯರ್‌, ಪಾಂಡೆ ಯಾವ ಹೊತ್ತಿನಲ್ಲೂ ಸಿಡಿಯಬಲ್ಲರು. ಆತಿಥೇಯರ ಪಾಳೆಯದಲ್ಲಿ ಗಪ್ಟಿಲ್‌, ಮುನ್ರೊ, ವಿಲಿಯಮ್ಸನ್‌, ಟೇಲರ್‌, ಅವರಂಥ ಘಟಾನುಘಟಿಗಳಿದ್ದಾರೆ. ಆದರೆ ಒತ್ತಡವನ್ನು ಮೀರಿ ರನ್‌ ಗಳಿಸುವುದು ಮುಖ್ಯ.

ಇದಕ್ಕೆ ಮೊದಲ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ತೋರ್ಪಡಿಸಿದ ಬ್ಯಾಟಿಂಗೇ ಅತ್ಯುತ್ತಮ ನಿದರ್ಶನ. ಬೆಟ್ಟದಷ್ಟು ಮೊತ್ತವನ್ನು ಬೆನ್ನಟ್ಟಬೇಕಾದ ಸಂದರ್ಭದಲ್ಲಿ ಅಯ್ಯರ್‌ ಸ್ವಲ್ಪವೂ ವಿಚಲಿತರಾಗದೆ ಕಿವೀಸ್‌ ಬೌಲರ್‌ಗಳನ್ನು ಚೆಂಡಾಡಿದ್ದರು. ಕಳೆದ ಸೆಪ್ಟಂಬರ್‌ನಿಂದ ಭಾರತ ಪಾಲ್ಗೊಂಡ ಎಲ್ಲ 12 ಟಿ20 ಪಂದ್ಯಗಳಲ್ಲಿ ಆಡಿದ ಅಯ್ಯರ್‌, 34.14ರ ಸರಾಸರಿ ಹಾಗೂ 154.19ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಪೇರಿಸುತ್ತ ಬಂದಿದ್ದಾರೆ.

ಕೆ.ಎಲ್‌. ರಾಹುಲ್‌ ಅವರಂತೂ ಬ್ಯಾಟಿಂಗ್‌ ಫಾರ್ಮ್ನಉಚ್ಛಾಯದಲ್ಲಿದ್ದಾರೆ. ಆಕ್ಲೆಂಡ್‌ನ‌ಲ್ಲಿ ರೋಹಿತ್‌ ವಿಕೆಟ್‌ ಬೇಗ ಬಿದ್ದಾಗ ಕ್ಯಾಪ್ಟನ್‌ ಕೊಹ್ಲಿ ಜತೆ ರಾಹುಲ್‌ ಇನ್ನಿಂಗ್ಸ್‌ ಕಟ್ಟಿದ ರೀತಿ ಅನನ್ಯ. ಜತೆಗೆ ಅವರೀಗ ಕೀಪಿಂಗ್‌ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಭಾರತದ ಪಾಲಿಗೊಂದು ಬೋನಸ್‌. ಇವರೆಲ್ಲರ ಜತೆ ರೋಹಿತ್‌ ಕೂಡ ಸಿಡಿದರೆ ಅದರ ರೋಮಾಂಚನವೇ ಬೇರೆ!

ಆಕ್ಲೆಂಡ್‌ ಅದೃಷ್ಟದ ತಾಣ
ಭಾರತ ಟಿ20 ಇತಿಹಾಸದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಸತತ 2 ಪಂದ್ಯಗಳನ್ನು ಗೆದ್ದದ್ದಿಲ್ಲ. ಹಾಗೆಯೇ ನ್ಯೂಜಿಲ್ಯಾಂಡ್‌ನ‌ಲ್ಲಿ ಎರಡೂ ಗೆಲುವು ಆಕ್ಲೆಂಡ್‌ ಅಂಗಳದಲ್ಲೇ ಒಲಿದಿದೆ. ರವಿವಾರವೂ ಗೆದ್ದರೆ ಅದು ಆಕ್ಲೆಂಡ್‌ನ‌ಲ್ಲಿ ಭಾರತದ ಹ್ಯಾಟ್ರಿಕ್‌ ಸಾಧನೆಯಾಗಲಿದೆ. ಇಲ್ಲಿಂದ ನ್ಯೂಜಿಲ್ಯಾಂಡಿನ ಉಳಿದ ಅಂಗಳಗಳಿಗೆ ಟೀಮ್‌ ಇಂಡಿಯಾ ಗೆಲುವನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಆಕ್ಲೆಂಡ್‌ ಹೊರತುಪಡಿಸಿ ನ್ಯೂಜಿಲ್ಯಾಂಡಿನ ಉಳಿದ ಯಾವುದೇ ಕ್ರೀಡಾಂಗಣದಲ್ಲಿ ಭಾರತ ಟಿ20 ಜಯ ದಾಖಲಿಸಿಲ್ಲ!

ಸಂಭಾವ್ಯ ತಂಡಗಳು
ಭಾರತ
ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜ, ಶಾದೂìಲ್‌ ಠಾಕೂರ್‌/ನವದೀಪ್‌ ಸೈನಿ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ.
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮುನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ರಾಸ್‌ ಟೇಲರ್‌, ಟಿಮ್‌ ಸೀಫ‌ರ್ಟ್‌, ಮಿಚೆಲ್‌ ಸ್ಯಾಂಟ್ನರ್‌, ಬ್ಲೇರ್‌ ಟಿಕ್ನರ್‌, ಟಿಮ್‌ ಸೌಥಿ, ಐಶ್‌ ಸೋಧಿ, ಹಾಮಿಶ್‌ ಬೆನೆಟ್‌.

Advertisement

Udayavani is now on Telegram. Click here to join our channel and stay updated with the latest news.

Next