Advertisement

ಹಾಕಿ: 4 ದಶಕಗಳ ಪದಕ ಬರ ನೀಗೀತೇ?

01:16 AM Aug 05, 2021 | Team Udayavani |

ಟೋಕಿಯೊ: ಒಂದು ಕಾಲದಲ್ಲಿ ಹಾಕಿ ದೊರೆಯಾಗಿ ಒಲಿಂಪಿಕ್ಸ್‌ನಲ್ಲಿ ರಾಜ್ಯಭಾರ ಮಾಡಿದ ಕೀರ್ತಿ ಭಾರತದ್ದು. ಆದರೆ 1980ರ ಬಳಿಕ, ಭರ್ತಿ 4 ದಶಕಗಳಿಂದ ಒಲಿಂಪಿಕ್ಸ್‌ ಪದಕ ಗೆಲ್ಲದೆ ತೀವ್ರ ಬರಗಾಲವನ್ನೂ ಅನುಭವಿಸಿದೆ. ಗುರುವಾರ ಇದನ್ನು ನಿವಾರಿಸಿಕೊಳ್ಳುವ ಅತ್ಯುತ್ತಮ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಮನ್‌ಪ್ರೀತ್‌ ಪಡೆ ಜರ್ಮನಿ ವಿರುದ್ಧ ಹೋರಾಡಲಿದ್ದು, ಗೆದ್ದರೆ ಕಂಚಿನ ಪದಕವನ್ನು ತನ್ನದಾಗಿಸಿಕೊಳ್ಳಲಿದೆ.

Advertisement

1972ರ ಬಳಿಕ ಮೊದಲ ಸಲ ಒಲಿಂಪಿಕ್ಸ್‌ ಸೆಮಿಫೈನಲ್‌ ಕಂಡ ಭಾರತಕ್ಕೆ ವಿಶ್ವ ಚಾಂಪಿಯನ್‌ ಬೆಲ್ಜಿಯಂ ಬಲವಾದ ಹೊಡೆತ ನೀಡಿತ್ತು. ಕೊನೆಯಲ್ಲಿ ಕಂಚಾದರೂ ಒಲಿಯಲಿ ಎಂಬುದು ದೇಶದ ಕ್ರೀಡಾಭಿಮಾನಿಗಳ ಹಾರೈಕೆ. ಎದು ರಾಳಿ ಜರ್ಮನಿ ಕಳೆದ ರಿಯೋ ಒಲಿಂಪಿಕ್ಸ್‌ನಲ್ಲೂ ಇದೇ ಹಂತದ ಸ್ಪರ್ಧೆಯಲ್ಲಿ ಜಯ ಸಾಧಿಸಿ ಕಂಚು ಜಯಿಸಿತ್ತು.

ಒಲಿಯದ ಪೆನಾಲ್ಟಿ ಯಶಸ್ಸು:

ವಿಶ್ವ ದರ್ಜೆಯ 4 ಮಂದಿ ಡ್ರ್ಯಾಗ್‌ ಫ್ಲಿಕರ್‌ಗಳನ್ನು ಹೊಂದಿರುವ ಹೆಗ್ಗಳಿಕೆ ಭಾರತದ್ದು. ಇವರೆಂದರೆ ರೂಪಿಂದರ್‌ ಪಾಲ್‌ ಸಿಂಗ್‌, ಉಪನಾಯಕ ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌ ಮತ್ತು ಅಮಿತ್‌ ರೋಹಿದಾಸ್‌. ಆದರೂ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತ ವಿಫ‌ಲವಾಗುತ್ತಲೇ ಇದೆ. ಬೆಲ್ಜಿಯಂ ವಿರುದ್ಧ ಇದು ಮತ್ತೂಮ್ಮೆ ಸಾಬೀತಾಯಿತು. ಇದಕ್ಕೆ ಪರಿಹಾರ ಸಿಗದ ಹೊರತು ಕಂಚು ಸಿಗದು ಎಂಬುದನ್ನು ಮನ್‌ಪ್ರೀತ್‌ ಪಡೆ ಗಮನಿಸಬೇಕಿದೆ.

ಸಮಬಲದ ಸಾಧನೆ:

Advertisement

ಜರ್ಮನಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 1-3 ಗೋಲುಗಳಿಂದ ಎಡವಿತ್ತು. ಇತ್ತಂಡಗಳ ರ್‍ಯಾಂಕಿಂಗ್‌ನಲ್ಲಿ ಭಾರೀ ಅಂತರವೇನಿಲ್ಲ. ಭಾರತ ಮೂರರಲ್ಲಿ, ಜರ್ಮನಿ ನಾಲ್ಕನೇ ಸ್ಥಾನದಲ್ಲಿದೆ. ಒಲಿಂಪಿಕ್ಸ್‌ನಲ್ಲಿ ಭಾರತ ಹೊರತುಪಡಿಸಿದರೆ ಅತೀ ಹೆಚ್ಚು ಚಿನ್ನ ಗೆದ್ದ ತಂಡವೆಂಬುದು ಜರ್ಮನಿಯ ಹೆಗ್ಗಳಿಕೆ (4). ಒಲಿಂಪಿಕ್ಸ್‌ ನಲ್ಲಿ ಇತ್ತಂಡಗಳು 11 ಸಲ ಎದುರಾಗಿದ್ದು, ತಲಾ 4 ಜಯ ದಾಖಲಿಸಿವೆ. 3 ಪಂದ್ಯ ಡ್ರಾಗೊಂಡಿದೆ.

ಗುರುವಾರದ ಪಂದ್ಯವನ್ನು 2017ರ ಹಾಕಿ ವರ್ಲ್ಡ್ ಲೀಗ್‌ ಫೈನಲ್ಸ್‌ ಕೂಟದ ಕಂಚಿನ ಸ್ಪರ್ಧೆಯ ಪುನರಾವರ್ತನೆ ಎನ್ನಬಹುದು. ಅಲ್ಲಿ ಭಾರತ 2-1ರಿಂದ ಜರ್ಮನ್‌ ಪಡೆಯನ್ನು ಮಗುಚಿತ್ತು.

Advertisement

Udayavani is now on Telegram. Click here to join our channel and stay updated with the latest news.

Next