Advertisement

ಮೈದಾನದ ದುಃಸ್ಥಿತಿ; ಮೂರು ದಿನಕ್ಕಿಳಿದ ಅಭ್ಯಾಸ ಪಂದ್ಯ

06:00 AM Jul 25, 2018 | Team Udayavani |

ಚೆಮ್ಸ್‌ಫೋರ್ಡ್‌: ಬುಧವಾರದಿಂದ ಇಲ್ಲಿ ಆರಂಭವಾಗಬೇಕಿದ್ದ ಭಾರತ ಮತ್ತು ಎಸೆಕ್ಸ್‌ ಕೌಂಟಿ ತಂಡದ ನಡುವಿನ ಅಭ್ಯಾಸ ಪಂದ್ಯ ಕೇವಲ 3 ದಿನಕ್ಕೆ ಸೀಮಿತಗೊಂಡಿದೆ. ಆರಂಭದಲ್ಲಿ ಜು. 25ರಿಂದ 28ರ ವರೆಗೆ 4 ದಿನಗಳ ಅಭ್ಯಾಸ ಪಂದ್ಯವೆಂದು ನಿಗದಿಯಾಗಿದ್ದರೂ ಈಗ ಒಂದು ದಿನವನ್ನು ಕಡಿತಗೊಳಿಸಲಾಗಿದೆ. ಮೈದಾನದಲ್ಲಿನ ಅಂಕಣ ಮತ್ತು ಹೊರಾವರಣ ಹಾಳಾಗಿರುವುದರಿಂದ ಭಾರತ ತಂಡ ಗಾಯದ ಭೀತಿ ಎದುರಿಸಿದೆ. ಈ ಕಾರಣಕ್ಕಾಗಿ ಇಂತಹ ಅಂಕಣದಲ್ಲಿ ನಾಲ್ಕು ದಿನ ಆಡಲು ಸಾಧ್ಯವಿಲ್ಲವೆಂದು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಇಲ್ಲಿನ ಓವಲ್‌ ಮೈದಾನದಲ್ಲಿ 25 ಅಂಕಣಗಳಿವೆ (ಪಿಚ್‌). ಅಷ್ಟರಲ್ಲೂ ಹುಲ್ಲು ಬೆಳೆದಿದೆ. ಆದರೆ ಅಂಕಣದ ಹೊರಭಾಗದಲ್ಲಿ, ಇಡೀ ಮೈದಾನದಲ್ಲಿ ಎಲ್ಲೂ ಹುಲ್ಲಿಲ್ಲ. ಇದು ಭಾರತ ತಂಡಕ್ಕೆ ಆತಂಕ ತರಿಸಿದೆ. ಇಂತಹ ಕಡೆ ಆಡಿದರೆ ಆಟಗಾರರು ಗಾಯಗೊಳ್ಳುವುದು ಖಚಿತವೆನ್ನುವುದು ತಂಡ ವ್ಯವಸ್ಥಾಪಕರ ಅಭಿಪ್ರಾಯ. 

ಆ. ಒಂದರಿಂದ ಭಾರತ-ಇಂಗ್ಲೆಂಡ್‌ ನಡುವೆ ಮೊದಲ ಟೆಸ್ಟ್‌ ಆರಂಭವಾಗಲಿದೆ. ಅದಕ್ಕೂ ಮುನ್ನ ಯಾವುದೇ ಆಟಗಾರರು ಗಾಯಗೊಳ್ಳುವುದನ್ನು ತಂಡ ಬಯಸದು. ಆದ್ದರಿಂದ ಅಭ್ಯಾಸವನ್ನು ಮೂರು ದಿನಕ್ಕೆ ಸೀಮಿತ ಮಾಡಿ ಜು. 27ಕ್ಕೆ ಬರ್ಮಿಂಗ್‌ಹ್ಯಾಮ್‌ಗೆ ತೆರಳಿ ಅಭ್ಯಾಸ ಶುರು ಮಾಡಲು ನಿರ್ಧರಿಸಿದೆ.

ಭಾರತೀಯರ ಭರ್ಜರಿ ಅಭ್ಯಾಸ
ಭಾರತೀಯರು ಮಂಗಳವಾರ ಎರಡು ಗುಂಪುಗಳಾಗಿ ಅಭ್ಯಾಸ ನಡೆಸಿದರು. ಕೊಹ್ಲಿ, ಪೂಜಾರ, ಬುಮ್ರಾ, ಶಮಿ, ರಾಹುಲ್‌… ಎಲ್ಲರೂ ನೆಟ್‌ನಲ್ಲಿ ಬೆವರು ಹರಿಸಿದರು. ಪೂಜಾರ, ರಾಹುಲ್‌ ಬ್ಯಾಟಿಂಗ್‌ ಅಭ್ಯಾಸ ನಡೆಸಿದರೆ, ಕೊಹ್ಲಿ ಸ್ಲಿಪ್‌ ಕ್ಷೇತ್ರರಕ್ಷಣೆ ಅಭ್ಯಾಸ ನಡೆಸಿದರು. ಬುಮ್ರಾ, ಶಮಿ ಬಹಳ ಹೊತ್ತು ನೆಟ್‌ನಲ್ಲಿ ಬೌಲಿಂಗ್‌ ನಡೆಸಿದರು. ಬುಮ್ರಾ ಎಡಗೈ ತೋರುಬೆರಳಿಗೆ ಬ್ಯಾಂಡೇಜ್‌ ಸುತ್ತಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಎರಡನೇ ಹಂತದ ಅಭ್ಯಾಸದಲ್ಲಿ ಜಡೇಜ, ನಾಯರ್‌, ಇಶಾಂತ್‌, ಅಶ್ವಿ‌ನ್‌ ಕಾಣಿಸಿಕೊಂಡರು.

ಈ ಪಂದ್ಯಕ್ಕೆ  ಪ್ರಥಮ ದರ್ಜೆ ಮಾನ್ಯತೆ ಇಲ್ಲ
ಈಗಿನ ಪ್ರಕಾರ ಇದು ಪ್ರಥಮ ದರ್ಜೆ ಮಾನ್ಯತೆ ಹೊಂದಿಲ್ಲದ ಅಭ್ಯಾಸ ಪಂದ್ಯ. ಆದ್ದರಿಂದ ಭಾರತವಿಲ್ಲಿ ತನ್ನ ಹದಿನೆಂಟೂ ಆಟಗಾರರನ್ನು ಆಡಿಸಲು ಅಡ್ಡಿಯಿಲ್ಲ. ಆದರೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ಗೆ ಮುನ್ನ ಭರ್ಜರಿ ಅಭ್ಯಾಸ ನಿರೀಕ್ಷಿಸಿದ್ದ ಭಾರತ ತಂಡ ಬೇಸರಗೊಂಡಿದೆ. ಯಾಕೆ ಪಂದ್ಯವನ್ನು 3 ದಿನಕ್ಕೆ ಇಳಿಸಲಾಯಿತು ಎಂಬ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ತಂಡದ ತರಬೇತುದಾರ ರವಿಶಾಸ್ತ್ರಿ, ಮೈದಾನ ಸಿಬಂದಿ ಗಹನವಾದ ಚರ್ಚೆ ಮಾಡುತ್ತಿರುವುದು ಪರಿಸ್ಥಿತಿಯ ಚಿತ್ರಣ ನೀಡಿದೆ.

Advertisement

ಈ ಬಗ್ಗೆ ಮೈದಾನದ ಸಿಬಂದಿಯನ್ನು ಪ್ರಶ್ನಿಸಿದಾಗ, ಭಾರತ ತಂಡದ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ. ಆದರೆ 4ನೇ ದಿನದ ಆಟಕ್ಕೆ ಟಿಕೆಟ್‌ಗಳನ್ನು ಮಾರಲಾಗಿದೆ. ಹಾಗಿದ್ದರೂ ಭಾರತ ಈ ನಿರ್ಧಾರ ತೆಗೆದುಕೊಂಡಿರುವುದು ಬೇಸರ ಮೂಡಿಸಿದೆ ಎಂದು ಹೇಳಿದ್ದಾರೆ. ಆದರೆ ಪಿಚ್‌ ಮೇಲಿನ ಹುಲ್ಲನ್ನು ಕತ್ತರಿಸುವ ಬಗ್ಗೆ ಯಾವುದೇ ಸ್ಪಷ್ಟನೆಯನ್ನೂ ಅವರು ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next