Advertisement

ಆಂಗ್ಲರೆದುರು ಎಡವಿದವರಿಗೆ ಬಾಂಗ್ಲಾ ಟೆಸ್ಟ್‌

10:04 AM Jul 04, 2019 | Team Udayavani |

ಬರ್ಮಿಂಗ್‌ಹ್ಯಾಮ್‌: ನಿಧಾನ ಗತಿಯ ಬ್ಯಾಟಿಂಗ್‌ ಮೂಲಕ ರವಿವಾರ ಆತಿಥೇಯ ಇಂಗ್ಲೆಂಡ್‌ ಎದುರು ಗೆಲುವಿನ ಅವಕಾಶವನ್ನು ಕಳೆದುಕೊಂಡ ಭಾರತಕ್ಕೀಗ “ಬಾಂಗ್ಲಾ ಟೆಸ್ಟ್‌’ ಎದುರಾಗಿದೆ.

Advertisement

ಮಂಗಳವಾರ ಬರ್ಮಿಂಗ್‌ಹ್ಯಾಮ್‌ನಲ್ಲೇ ನಡೆಯಲಿರುವ ಈ ಪಂದ್ಯದಲ್ಲಿ ಕೊಹ್ಲಿ ಪಡೆ ತೀವ್ರ ಎಚ್ಚರಿಕೆಯ ಹೆಜ್ಜೆಗಳೊಂದಿಗೆ ಮುಂದಡಿ ಇಡಬೇಕಿದೆ. ಆಗಷ್ಟೇ ಸೆಮಿಫೈನಲ್‌ ಖಾತ್ರಿಯಾಗಲಿದೆ.

ಟೀಮ್‌ ಇಂಡಿಯಾದ ನಾಕೌಟ್‌ ಪ್ರವೇಶಕ್ಕೆ ಬೇಕಿರುವುದು ಒಂದೇ ಜಯ. ಇದನ್ನು ಇನ್ನೂ ಕಿರಿದಾಗಿ ಹೇಳುವುದಾದರೆ “ಒಂದೇ ಅಂಕ’. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಎದುರಿನ ಕೊನೆಯ 2 ಪಂದ್ಯಗಳು ಬಾಕಿ ಉಳಿದಿವೆ. ಇದರಲ್ಲಿ ಕನಿಷ್ಠ ಒಂದನ್ನಾದರೂ ಗೆಲ್ಲಲೇಬೇಕು. ಇಲ್ಲವೇ ಒಂದು ಪಂದ್ಯ ರದ್ದಾಗಬೇಕು! ಈ ಗೆಲುವು ಬಾಂಗ್ಲಾ ವಿರುದ್ಧವೇ ಒಲಿದರೆ ಕೊಹ್ಲಿ ಪಡೆ ಸೇಫ್. ಅಕಸ್ಮಾತ್‌ ಇಲ್ಲಿ ಎಡವಿ, ಕೊನೆಯಲ್ಲಿ ಶ್ರೀಲಂಕಾ ವಿರುದ್ಧವೂ ಮುಗ್ಗರಿಸಿದರೆ ಆಗ ಏನೂ ಸಂಭವಿಸಬಹುದು!

ರವಿವಾರ ಇದೇ ಅಂಗಳದಲ್ಲಿ ಇಂಗ್ಲೆಂಡಿಗೆ ಭಾರೀ ರನ್‌ ಬಿಟ್ಟುಕೊಟ್ಟ ಬಳಿಕ ಭಾರತ ಕೇವಲ 31 ರನ್ನುಗಳಿಂದ ಹಿಂದುಳಿಯಿತು. ಎಜ್‌ಬಾಸ್ಟನ್‌ನ ಸಣ್ಣ ಅಂಗಳದಲ್ಲಿ 338 ರನ್‌ ಗಳಿಸುವುದು ಭಾರೀ ಸವಾಲೇನೂ ಆಗಿರಲಿಲ್ಲ. 5 ವಿಕೆಟ್‌ಗಳು ಕೈಲಿದ್ದರೂ ಕೊಹ್ಲಿ ಪಡೆ ಜೋಶ್‌ ತೋರಲಿಲ್ಲ. ನಿಧಾನ ಗತಿಯ ಆರಂಭ ಭಾರತದ ಚೇಸಿಂಗ್‌ಗೆ ಭಾರೀ ಹೊಡೆತವಿಕ್ಕಿತು. ಹಾಗೆಯೇ ಕೊನೆಯ 5 ಓವರ್‌ಗಳಲ್ಲಿ ಬರೀ 39 ರನ್‌ ಮಾಡಿದ್ದೂ ಸೋಲಿನತ್ತ ಮುಖ ಮಾಡಿಸಿತು. “ಕೆಲವು ನಿರ್ದಿಷ್ಟ ಕಾರಣ’ಗಳಿಗಾಗಿ ಭಾರತ ಉದ್ದೇಶಪೂರ್ವಕವಾಗಿಯೇ ಈ ಪಂದ್ಯವನ್ನು ಸೋತಿದೆ ಎಂಬ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿವೆ. ಊಹಿಸುವವರು ಹೇಗೂ ಊಹಿಸಬಹುದು!

ಜಡೇಜ,
ಭುವಿಗೆ ಅವಕಾಶ?
ಭಾರತ ತಂಡ ಇಂಗ್ಲೆಂಡ್‌ ಎದುರು ಆಡಿದ ನಿಧಾನ ಗತಿಯ ಆಟವನ್ನು ಬಾಂಗ್ಲಾ ವಿರುದ್ಧವೂ ಪುನರಾವರ್ತಿಸಿದರೆ ಅಪಾಯ ತಪ್ಪಿದ್ದಲ್ಲ. ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಸಿಕ್ಕಿದರೆ ಏಕದಿನ ಜೋಶ್‌ನೊಂದಿಗೆ 330-350 ರನ್‌ ಬಾರಿಸುವುದು ಕ್ಷೇಮ. ಇದಕ್ಕೆ ಭಾರತದ ಮಧ್ಯಮ ಹಾಗೂ ಕೆಳ ಕ್ರಮಾಂಕದ ಆಟಗಾರರ ಸಹಕಾರ ಅಗತ್ಯ. ಇಂಗ್ಲೆಂಡ್‌ ಎದುರು ಧೋನಿ-ಜಾಧವ್‌ ತೋರಿದ ಆಮೆಗತಿಯ ಆಟ ಎಲ್ಲ ದಿಕ್ಕುಗಳಿಂದಲೂ ಟೀಕೆ ಗೊಳಗಾಗಿದೆ. ಕೈಯಲ್ಲಿ ಸಾಕಷ್ಟು ವಿಕೆಟ್‌ ಉಳಿದಿರುವಾಗ ಇವರು ಮುನ್ನುಗ್ಗಿ ಬೀಸದಿದ್ದುದು ಅಚ್ಚರಿಯಾಗಿ ಕಂಡಿದೆ. ಜಾಧವ್‌ ಸ್ಥಾನಕ್ಕೆ ಆಲ್‌ರೌಂಡರ್‌ ಹಾಗೂ ಅದ್ಭುತ ಫೀಲ್ಡರ್‌ ಆಗಿರುವ ರವೀಂದ್ರ ಜಡೇಜ ಅವರನ್ನು ಆಡಿಸುವ ಯೋಜನೆಯೊಂದಿದೆ. ಆಗ ಕುಲದೀಪ್‌ ಅಥವಾ ಚಹಲ್‌ ಅವರನ್ನು ಹೊರಗಿರಿಸಿ ಭುವನೇಶ್ವರ್‌ಗೆ ಮತ್ತೆ ಅವಕಾಶ ನೀಡಬಹುದಾಗಿದೆ. ಬರ್ಮಿಂಗ್‌ಹ್ಯಾಮ್‌ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡದು ಎಂಬುದು ರವಿವಾರವೇ ಸಾಬೀತಾಗಿದೆ.

Advertisement

ಬಾಂಗ್ಲಾ ಅನುಭವಿ, ಅಪಾಯಕಾರಿ!
“ಟೈಗರ್’ ಎಂದೇ ಗುರುತಿಸಲ್ಪಟ್ಟಿರುವ ಬಾಂಗ್ಲಾದೇಶ ಹೆಸರಿಗೆ ತಕ್ಕಂತೆ ಅತ್ಯಂತ ಅಪಾಯಕಾರಿ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ 2007ರ ಪೋರ್ಟ್‌ ಆಫ್ ಸ್ಪೇನ್‌ ಲೀಗ್‌ ಪಂದ್ಯವೇ ಸಾಕ್ಷಿ. ಅಲ್ಲಿ ಭಾರತ ಆರಂಭದಲ್ಲೇ ಬಾಂಗ್ಲಾಕ್ಕೆ ಶರಣಾಗಿ ಕೂಟದಿಂದ ಹೊರಬಿದ್ದಿತ್ತು. ಮುಂದಿನೆರಡು ವಿಶ್ವಕಪ್‌ ಪಂದ್ಯಗಳಲ್ಲಿ ಭಾರತ ಸೇಡು ತೀರಿಸಿಕೊಂಡಿತು ಎಂಬುದು ಬೇರೆ ಮಾತು. ಆದರೆ ಈ ಬಾರಿಯ ಬಾಂಗ್ಲಾ ಹೆಚ್ಚು ಬಲಿಷ್ಠ ಎಂಬುದನ್ನು ಮರೆಯುವಂತಿಲ್ಲ.

ಬಾಂಗ್ಲಾ ತಂಡದ ಹೆಚ್ಚುಗಾರಿಕೆಯೆಂದರೆ ಅನುಭವ. ಇಲ್ಲಿನ ಬಹುತೇಕ ಆಟಗಾರರಿಗೆ ಭಾರತದ ಕ್ರಿಕೆಟಿಗರಿಗಿಂತಲೂ ಹೆಚ್ಚಿನ ಅಂತಾರಾಷ್ಟ್ರೀಯ ಅನುಭವವಿದೆ. ಶಕಿಬ್‌, ರಹೀಂ, ತಮಿಮ್‌, ಮಹಮದುಲ್ಲ, ಸರ್ಕಾರ್‌, ದಾಸ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಸರದಿ ತಂಡದ ಆಸ್ತಿ. ಶಕಿಬ್‌ ಈಗಾಗಲೇ ಸತತ ಶತಕ ಬಾರಿಸಿ ತಮ್ಮ ನಂಬರ್‌ ವನ್‌ ಆಲ್‌ರೌಂಡರ್‌ ಪಟ್ಟಕ್ಕೆ ವಿಶೇಷ ಗೌರವ ತಂದಿತ್ತಿದ್ದಾರೆ. ಆದರೆ ಬೌಲಿಂಗ್‌ ವಿಭಾಗ ಘಾತಕವಲ್ಲ.

ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ಥಾನ ವಿರುದ್ಧ ಮೊರ್ತಜ ಪಡೆ ಈಗಾಗಲೇ ಜಯ ಸಾಧಿಸಿದೆ. ಆದರೆ ದೊಡ್ಡ ಹಾಗೂ ಬಲಿಷ್ಠ ತಂಡಗಳ ವಿರುದ್ಧ ಎಡವಿದೆ. ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ ತಂಡಗಳು ಬಾಂಗ್ಲಾವನ್ನು ಮಣಿಸಿವೆ.

ಸಂಭಾವ್ಯ ತಂಡಗಳು
ಭಾರತ:
ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ.
ಬಾಂಗ್ಲಾದೇಶ:
ತಮಿಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಶಕಿಬ್‌ ಅಲ್‌ ಹಸನ್‌, ಮುಶ್ಫಿಕರ್‌ ರಹೀಂ, ಲಿಟನ್‌ ದಾಸ್‌, ಮಹಮದುಲ್ಲ, ಮೊಸದ್ದೆಕ್‌ ಹೊಸೈನ್‌, ಮೊಹಮ್ಮದ್‌ ಸೈಫ‌ುದ್ದೀನ್‌, ಮೆಹಿದಿ ಹಸನ್‌, ಮಶ್ರಫೆ ಮೊರ್ತಜ (ನಾಯಕ), ಮುಸ್ತಫಿಜುರ್‌ ರಹಮಾನ್‌.

Advertisement

Udayavani is now on Telegram. Click here to join our channel and stay updated with the latest news.

Next