Advertisement

ರಾಹುಲ್‌, ಪಾಂಡ್ಯ ಸ್ಥಾನಕ್ಕೆ ಗಿಲ್‌, ವಿಜಯ್‌ ಶಂಕರ್‌​​​​​​​

12:30 AM Jan 14, 2019 | |

ಹೊಸದಿಲ್ಲಿ: “ಟೆಲಿವಿಷನ್‌ ಶೋ’ ಮೂಲಕ ವಿವಾದಕ್ಕೆ ಸಿಲುಕಿ ಅಮಾನತಿಗೊಳಗಾಗಿರುವ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌. ರಾಹುಲ್‌ ಬದಲು ಶುಭಮನ್‌ ಗಿಲ್‌ ಮತ್ತು ವಿಜಯ್‌ ಶಂಕರ್‌ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

ಇವರಲ್ಲಿ ವಿಜಯ್‌ ಶಂಕರ್‌ ಕೂಡಲೇ ಆಸ್ಟ್ರೇಲಿಯಕ್ಕೆ ತೆರಳಲಿದ್ದು, ಉಳಿದೆರಡು ಏಕದಿನ ಪಂದ್ಯಗಳ ಆಯ್ಕೆಗೆ ಲಭ್ಯರಾಗಲಿದ್ದಾರೆ. ಆದರೆ ಶುಭಮನ್‌ ಗಿಲ್‌ ನ್ಯೂಜಿಲ್ಯಾಂಡ್‌ ಪ್ರವಾಸದ ವೇಳೆಯಷ್ಟೇ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ನ್ಯೂಜಿಲ್ಯಾಂಡ್‌ನ‌ಲ್ಲಿ ಭಾರತ 5 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.

ಪಂಜಾಬ್‌ನ 19ರ ಹರೆಯದ ಶುಭಮನ್‌ ಗಿಲ್‌ ಅಗ್ರ ಕ್ರಮಾಂಕದ ಉದಯೋನ್ಮುಖ ಬ್ಯಾಟ್ಸ್‌ಮನ್‌ ಆಗಿದ್ದು, ಕಳೆದ ವರ್ಷ ಭಾರತದ ಅಂಡರ್‌-19 ವಿಶ್ವಕಪ್‌ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸರಣಿಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು. ಪ್ರಸಕ್ತ ಋತುವಿನಲ್ಲಿ ಪಂಜಾನ್‌ ಪರ ರಣಜಿ ಆಡಿದ ಗಿಲ್‌ ಮೊದಲ ಸಲ ಐಪಿಎಲ್‌ನಲ್ಲೂ ಆಡುವ ಅವಕಾಶ ಪಡೆದಿದ್ದಾರೆ. ಅವರು ಪ್ರತಿನಿಧಿಸಲಿರುವ ತಂಡ ಕೋಲ್ಕತಾ ನೈಟ್‌ರೈಡರ್.

ಶಂಕರ್‌, ಉತ್ತಮ ಫಿನಿಶರ್‌
ತಮಿಳುನಾಡಿನ 27ರ ಹರೆಯದ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಉತ್ತಮ ಫಿನಿಶರ್‌ ಆಗಿ ಗುರುತಿಸಲ್ಪಟ್ಟಿದ್ದಾರೆ. ಭಾರತ “ಎ’ ತಂಡದೊಂದಿಗೆ ನ್ಯೂಜಿಲ್ಯಾಂಡ್‌ ಪ್ರವಾಸ ಕೈಗೊಂಡದ್ದು ತನಗೆ ಲಾಭವಾಗಿ ಪರಿಣಮಿಸಲಿದೆ ಎಂಬುದು ಅವರ ಅಭಿಪ್ರಾಯ. ತನ್ನ ಯಶಸ್ಸಿನಲ್ಲಿ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪಾಲು ಮಹತ್ವದ್ದಾಗಿದ್ದು, ನ್ಯೂಜಿಲ್ಯಾಂಡ್‌ ಪ್ರವಾಸದ ವೇಳೆ ತನ್ನನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸುವ ಮೂಲಕ ಆತ್ಮವಿಶ್ವಾಸ ತುಂಬಿದರು ಎಂದು ಪ್ರತಿಕ್ರಿಯಿಸಿದ್ದಾರೆ.

“300 ಪ್ಲಸ್‌ ರನ್‌ ಚೇಸ್‌ ಮಾಡುವಾಗಲೊಮ್ಮೆ ಬಹಳ ಬೇಗ ಕ್ರೀಸ್‌ ಇಳಿದ ನಾನು 87 ರನ್‌ ಬಾರಿಸಿದೆ. ಮತ್ತೂಂದು ಪಂದ್ಯದಲ್ಲಿ 60 ರನ್‌ ಹೊಡೆದಿದ್ದೆ. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಯುವಾಗ ತಂಡದ ಗೆಲುವಿಗೆ 150-160 ರನ್ನುಗಳ ಅಗತ್ಯವಿರುತ್ತಿತ್ತು. ಇದರಿಂದ ಒತ್ತಡ ನಿಭಾಯಿಸುವುದನ್ನು ಕಲಿಯಲು ಸಾಧ್ಯವಾಯಿತು’ ಎಂಬುದಾಗಿ ಭಾರತ ಪರ 5 ಟಿ20 ಪಂದ್ಯಗಳನ್ನು ಆಡಿರುವ ವಿಜಯ್‌ ಶಂಕರ್‌ ಹೇಳಿದರು.

Advertisement

ಹಾರ್ದಿಕ್‌ ಪಾಂಡ್ಯ ಅವರನ್ನು ಆಸ್ಟ್ರೇಲಿಯದ ಟೆಸ್ಟ್‌ ಸರಣಿ ನಡುವೆ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. ರಾಹುಲ್‌ ಟೆಸ್ಟ್‌ನಲ್ಲಿ ಲಭಿಸಿದ ಅವಕಾಶಗಳನ್ನು ಬಳಸಿಕೊಳ್ಳಲು ಸಂಪೂರ್ಣ ವಿಫ‌ಲರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next