Advertisement

ಹಗಲು ರಾತ್ರಿ ಟೆಸ್ಟ್‌ : ಮೊದಲ ದಿನವೇ ಮಂಕಾದ ಭಾರತ

09:21 PM Dec 17, 2020 | mahesh |

ಅಡಿಲೇಡ್‌: ವಿದೇಶದಲ್ಲಿ ಮೊದಲ ಹಗಲು ರಾತ್ರಿ ಟೆಸ್ಟ್‌ ಪಂದ್ಯ ಆಡಲಿಳಿದ ಭಾರತ ಮೊದಲ ದಿನವೇ ಕಾಂಗರೂಗಳ ಬಿಗಿ ಹಿಡಿತಕ್ಕೆ ಸಿಲುಕಿ ಚಡಪಡಿಸಿದೆ. ಅತಿಯಾದ ಎಚ್ಚರಿಕೆಯ ಆಟ, ಕೊಹ್ಲಿಯ ರನೌಟ್‌ ಸಂಕಟ, ಎರಡನೇ ಹೊಸ ಚೆಂಡಿನ ದಾಳಿಯನ್ನು ನಿಭಾಯಿಸುವಲ್ಲಿ ತೋರಿದ ವೈಫ‌ಲ್ಯ ಭಾರತ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಕೊನೆಯಲ್ಲಿ 6ಕ್ಕೆ 233 ರನ್‌ ಗಳಿಸಿ ಒಂದಿಷ್ಟು ಸಮಾಧಾನಪಟ್ಟಿದೆ.

Advertisement

ಇದಕ್ಕಾಗಿ ಭಾರತ 89 ಓವರ್‌ಗಳನ್ನು ನಿಭಾಯಿಸಿತು. 74 ರನ್‌ ಮಾಡಿದ ವಿರಾಟ್‌ ಕೊಹ್ಲಿ ಗರಿಷ್ಠ ರನ್‌ಗಳಿಕೆಗಾರ. ಪೂಜಾರ ಮತ್ತು ರಹಾನೆ 40ರ ಗಡಿ ದಾಟಿ ನಿರ್ಗಮಿಸಿದರು. ಪೂಜಾರ-ಕೊಹ್ಲಿ 3ನೇ ವಿಕೆಟಿಗೆ 68 ರನ್‌, ಬಳಿಕ ಕೊಹ್ಲಿ-ರಹಾನೆ 4ನೇ ವಿಕೆಟಿಗೆ 84 ರನ್‌ ಒಟ್ಟುಗೂಡಿಸಿ ಆಸೀಸ್‌ ದಾಳಿಗೆ ತಕ್ಕಮಟ್ಟಿಗೆ ಜವಾಬು ನೀಡುವಲ್ಲಿ ಯಶಸ್ವಿಯಾದರು.

ಆದರೆ 2ನೇ ಹೊಸ ಚೆಂಡು ಕಾಂಗರೂಗಳಿಗೆ ವರದಾನವಾಗಿ ಪರಿಣಮಿಸಿತು. ಸ್ಟಾರ್ಕ್‌ ಹೊಸ ಚೆಂಡಿನ 4ನೇ ಎಸೆತದಲ್ಲೇ ರಹಾನೆ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಮೂರೇ ಓವರ್‌ ಅಂತರದಲ್ಲಿ ಹನುಮ ವಿಹಾರಿ ಅವರನ್ನು ಹೇಜಲ್‌ವುಡ್‌ ಎಲ್‌ಬಿ ಮೂಲಕವೇ ವಾಪಸ್‌ ಕಳುಹಿಸಿದರು. ಇದಕ್ಕೂ ಮುನ್ನ ಕೊಹ್ಲಿ ರನೌಟ್‌ ಆಗಿದ್ದು ಭಾರತದ ಸರದಿಯ ನಾಟಕೀಯ ಕುಸಿತಕ್ಕೆ ಸಾಕ್ಷಿಯಾಯಿತು.

ಆಮೆಗತಿಯ ಆಟದ ಹೊರತಾಗಿಯೂ 3ಕ್ಕೆ 188 ರನ್‌ ಗಳಿಸಿ ಚೇತರಿಕೆಯ ಹಾದಿ ಹಿಡಿದಿದ್ದ ಭಾರತ, 18 ರನ್‌ ಅಂತರದಲ್ಲಿ 3 ವಿಕೆಟ್‌ ಉದುರಿಸಿಕೊಂಡು ಪುನಃ ಒತ್ತಡಕ್ಕೆ ಸಿಲುಕಿತು. ಆದರೆ ಅಡಿಲೇಡ್‌ ಟ್ರ್ಯಾಕ್‌ ವರ್ತಿಸುವ ರೀತಿ ಗಮನಿಸಿದರೆ, ಭಾರತ 290-300 ರನ್‌ ಪೇರಿಸುವಲ್ಲಿ ಯಶಸ್ವಿಯಾದರೆ ಜಿದ್ದಾಜಿದ್ದಿ ಹೋರಾಟ ಸಾಧ್ಯವಿದೆ. ಈಗ ಕ್ರೀಸಿನಲ್ಲಿರುವ ವೃದ್ಧಿಮಾನ್‌ ಸಹಾ (9), ಆರ್‌.ಅಶ್ವಿ‌ನ್‌ (15) ಮತ್ತು ಬಾಲಂಗೋಚಿಗಳ ನೆರವಿನಿಂದ ದ್ವಿತೀಯ ದಿನ 50-60 ರನ್‌ ಹರಿದು ಬರಬೇಕಿದೆ.

ಸೊನ್ನೆ ಸುತ್ತಿದ ಶಾ
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತಕ್ಕೆ ಗಟ್ಟಿಮುಟ್ಟಾದ ಅಡಿಪಾಯ ಲಭಿಸಲಿಲ್ಲ. ಪೃಥ್ವಿ ಶಾ ದ್ವಿತೀಯ ಎಸೆತದಲ್ಲೇ ಸ್ಟಾರ್ಕ್‌ಗೆ ಬೌಲ್ಡ್‌ ಆಗಿ ಸೊನ್ನೆ ಸುತ್ತಿ ಹೋದರು. ಇಲ್ಲಿಂದಲೇ ಪ್ರವಾಸಿಗರ ಮೇಲೆ ಒತ್ತಡ ಬಿತ್ತು. ಅಗರ್ವಾಲ್‌-ಪೂಜಾರ 17.5 ಓವರ್‌ ನಿಂತು 32 ರನ್‌ ಒಟ್ಟುಗೂಡಿಸಿದರು. ಆಗ 40 ಎಸೆತಗಳಿಂದ 17 ರನ್‌ (2 ಬೌಂಡರಿ) ಮಾಡಿದ ಅಗರ್ವಾಲ್‌ ಕಮಿನ್ಸ್‌ಗೆ ಬೌಲ್ಡ್‌ ಆದರು.

Advertisement

ಮೊದಲ ಅವಧಿಯ 25 ಓವರ್‌ಗಳ ಆಟದಲ್ಲಿ ಒಟ್ಟುಗೂಡಿದ್ದು ಬರೀ 41 ರನ್‌. 50 ರನ್‌ ಪೂರ್ತಿಯಾಗಲು ಭರ್ತಿ 30 ಓವರ್‌ ಬೇಕಾಯಿತು. ನೂರರ ಗಡಿ ತಲುಪುವಾಗ 50ನೇ ಓವರ್‌ ಜಾರಿಯಲ್ಲಿತ್ತು. ಈವರೆಗೆ ಏಕದಿನ ಹಾಗೂ ಟಿ20 ಜೋಶ್‌ ಕಂಡ ಕ್ರಿಕೆಟ್‌ ಅಭಿಮಾನಿಗಳಿಗೆ ಸಹಜವಾಗಿಯೇ ಈ ಆಟ ಬೋರ್‌ ಹೊಡೆಸಿತ್ತು!

ಲಿಯೋನ್‌ ವರ್ಸಸ್‌ ಪೂಜಾರ
ದ್ವಿತೀಯ ಅವಧಿಯಲ್ಲಿ ಟೆಸ್ಟ್‌ ತಜ್ಞ ಪೂಜಾರ ಸ್ಪಿನ್ನರ್‌ ಲಿಯೋನ್‌ಗೆ ದಾಖಲೆ 10ನೇ ಸಲ ವಿಕೆಟ್‌ ಒಪ್ಪಿಸಿದರು. 43 ರನ್ನಿಗೆ ಪೂಜಾರ ಎದುರಿಸಿದ್ದು ಭರ್ತಿ 160 ಎಸೆತ. ಹೊಡೆದದ್ದು ಎರಡೇ ಬೌಂಡರಿ. ಕೊಹ್ಲಿ 23ನೇ ಅರ್ಧಶತಕದ ಮೂಲಕ ಗಮನ ಸೆಳೆದರು. ಇದನ್ನು ತಲುಪಲು ಅವರು 123 ಎಸೆತ ಬಳಸಿಕೊಂಡರು. ಅಂತಿಮವಾಗಿ 180 ಎಸೆತಗಳಿಂದ, 8 ಬೌಂಡರಿ ಒಳಗೊಂಡ 74 ರನ್‌ ಮಾಡಿ ರನೌಟ್‌ ಸಂಕಟಕ್ಕೆ ಸಿಲುಕಿದರು. ಎಂಟೇ ರನ್‌ ಅಂತರದಲ್ಲಿ ರಹಾನೆ ವಿಕೆಟ್‌ ಕೂಡ ಬಿತ್ತು. 92 ಎಸೆತ ಎದುರಿಸಿದ ರಹಾನೆ 3 ಫೋರ್‌ ಹಾಗೂ ಭಾರತದ ಸರದಿಯ ಏಕೈಕ ಸಿಕ್ಸರ್‌ಗೆ ಸಾಕ್ಷಿಯಾದರು. ಕೊಹ್ಲಿ ರನೌಟ್‌ ಮೊದಲ ದಿನದಾಟದ ತಿರುವಿನ ಹಂತ. ಇದರಿಂದ ಭಾರತಕ್ಕೆ ಮೇಲುಗೈ ಅವಕಾಶವೊಂದು ತಪ್ಪಿತೆಂದೇ ಹೇಳಬಹುದು.

ಸ್ಕೋರ್‌ ಪಟ್ಟಿ
ಭಾರತ 89 ಓವರ್‌, 233/6
ಪೃಥ್ವಿ ಶಾ ಬಿ ಸ್ಟಾರ್ಕ್‌ 0
ಮಾಯಾಂಕ್‌ ಅಗರ್ವಾಲ್‌ ಬಿ ಕಮಿನ್ಸ್‌ 17
ಚೇತೇಶ್ವರ ಪೂಜಾರ ಸಿ ಲಬುಶೇನ್‌ ಬಿ ಲಿಯೋನ್‌ 43
ವಿರಾಟ್‌ ಕೊಹ್ಲಿ ರನೌಟ್‌ 74
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ಸ್ಟಾರ್ಕ್‌ 42
ಹನುಮ ವಿಹಾರಿ ಎಲ್‌ಬಿಡಬ್ಲ್ಯು ಬಿ ಹೇಜಲ್‌ವುಡ್‌ 16
ವೃದ್ಧಿಮಾನ್‌ ಸಹಾ ಬ್ಯಾಟಿಂಗ್‌ 9
ಆರ್‌.ಅಶ್ವಿ‌ನ್‌ ಬ್ಯಾಟಿಂಗ್‌ 15

ಇತರೆ 17
ವಿಕೆಟ್‌ ಪತನ: 1-0, 2-32, 3-100, 4-188, 5-196, 6-206.

ಬೌಲಿಂಗ್‌
ಮಿಚೆಲ್‌ ಸ್ಟಾರ್ಕ್‌ 19 4 49 2
ಜೋಶ್‌ ಹೇಜಲ್‌ವುಡ್‌ 20 6 47 1
ಪ್ಯಾಟ್‌ ಕಮಿನ್ಸ್‌ 19 7 42 1
ಕ್ಯಾಮೆರಾನ್‌ ಗ್ರೀನ್‌ 9 2 15 0
ನಥನ್‌ ಲಿಯೋನ್‌ 21 2 68 1
ಮಾರ್ನಸ್‌ ಲಬುಶೇನ್‌ 1 0 3 0

Advertisement

Udayavani is now on Telegram. Click here to join our channel and stay updated with the latest news.

Next