Advertisement
ಲಬುಶೇನ್ 67 ರನ್ ಮಾಡಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದು, ಸ್ಟೀವನ್ ಸ್ಮಿತ್ ಸರಣಿಯಲ್ಲೇ ಮೊದಲ ಸಲ ಎರ ಡಂಕೆಯ ಸ್ಕೋರ್ ದಾಖಲಿಸಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಟೆಸ್ಟ್ ಪದಾರ್ಪಣೆ ಮಾಡಿದ ನವದೀಪ್ ಸೈನಿ ಹೊರತುಪಡಿಸಿ ಭಾರತದ ಉಳಿದ ಬೌಲರ್‌ಗಳು ಸಿಡ್ನಿಯ ಒದ್ದೆ ಟ್ರ್ಯಾಕ್‌ನ ಲಾಭ ಎತ್ತುವಲ್ಲಿ ವಿಫಲರಾದರು. ಭಾರತದ ಕಳಪೆ ಕ್ಷೇತ್ರರಕ್ಷಣೆ ಕೂಡ ಇದಕ್ಕೆ ಕಾರಣವಾಯಿತು.
ಶೇ. 70ರಷ್ಟು ಮಾತ್ರವೇ ಫಿಟ್‌ನೆಸ್ ಹೊಂದಿದ್ದ ಡೇವಿಡ್ ವಾರ್ನರ್ ಸರಣಿಯಲ್ಲಿ ಮೊದಲ ಸಲ ಆಡಲಿಳಿದರು. ಆದರೆ ಇದರಿಂದ ಆಸ್ಟ್ರೇಲಿಯದ ಓಪನಿಂಗ್‌ಗೆ ಲಾಭವೇನೂ ಆಗಲಿಲ್ಲ. ಅವರು ಕೇವಲ 5 ರನ್ ಮಾಡಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿ ವಾಪಸಾದರು. ಆಗ ಆಸೀಸ್ ಸ್ಕೋರ್‌ಬೋರ್ಡ್ ಕೇವಲ 6 ರನ್ ತೋರಿಸುತ್ತಿತ್ತು. 8ನೇ ಓವರ್ ವೇಳೆ ಸುರಿದ ಮಳೆಯಿಂದ ಆಟಕ್ಕೆ ತೀವ್ರ ಅಡಚಣೆಯಾಯಿತು. ಮಳೆ ಸತತವಾಗಿ ಸುರಿದ ಪರಿಣಾಮ ನಾಲ್ಕೂವರೆ ಗಂಟೆಗಳ ಆಟ ನಷ್ಟವಾಯಿತು. ಆಟ ಪುನರಾರಂಭಗೊಂಡಾಗ ಸಿಡ್ನಿ ಪಿಚ್‌ನಲ್ಲಿ ಭಾರತದ ಬೌಲರ್ ಮೆರೆದಾಡುವ ನಿರೀಕ್ಷೆ ಇತ್ತಾದರೂ ಇದು ಹುಸಿಯಾಯಿತು. ಪುಕೋವ್‌ಸ್ಕಿ-ಲಬುಶೇನ್ ಸೇರಿಕೊಂಡು ಎಚ್ಚರಿಕೆಯ ಆಟವಾಡುತ್ತ ಇನ್ನಿಂಗ್ಸ್ ಬೆಳೆಸತೊಡಗಿದರು. ದ್ವಿತೀಯ ವಿಕೆಟಿಗೆ ಭರ್ತಿ 100 ರನ್ ಒಟ್ಟುಗೂಡಿತು. ಈ ಜೋಡಿಯನ್ನು ಮುರಿಯುವಲ್ಲಿ ಸೈನಿ ಯಶಸ್ವಿಯಾದರು. 110 ಎಸೆತಗಳಿಂದ 62 ರನ್ ಬಾರಿಸಿದ ಪುಕೋವ್‌ಸ್ಕಿ ಲೆಗ್ ಬಿಫೋರ್ ಬಲೆಗೆ ಬಿದ್ದರು. ಪಂತ್ ಕೈಯಲ್ಲಿ 2 ಜೀವದಾನ ಪಡೆದ ಅವರು 4 ಫೋರ್ ಹೊಡೆದರು.
Related Articles
ಹಿಂದಿನ 3 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 1, 0 ಹಾಗೂ 8 ರನ್ ಮಾಡಿದ್ದ ಸ್ಟೀವನ್ ಸ್ಮಿತ್ ಇಲ್ಲಿ ನೈಜ ಆಟಕ್ಕೆ ಕುದುರಿದ ಸೂಚನೆ ಯೊಂದನ್ನು ರವಾನಿಸಿದ್ದಾರೆ. 64 ಎಸೆತ ಎದುರಿಸಿರುವ ಅವರು 31 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದು 5 ಬೌಂಡರಿಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಆರ್. ಅಶ್ವಿನ್ ಸ್ಪಿನ್ನಿಗೆ ಚಡಪಡಿಸುವ ಸ್ಮಿತ್, ಇಲ್ಲಿ ಅವರನ್ನೇ ಟಾರ್ಗೆಟ್ ಮಾಡಿಕೊಂಡಂತಿತ್ತು. ಅಶ್ವಿನ್ ಮೇಲೆ ಒತ್ತಡ ಹೇರುವುದು ನಮ್ಮ ಯೋಜನೆ ಎಂದು ಅವರು ದಿನದಾಟದ ಬಳಿಕ ಪ್ರತಿಕ್ರಿಯಿಸಿದರು.
Advertisement
ಲಬುಶೇನ್ 149 ಎಸೆತಗಳನ್ನು ಎದುರಿಸಿದ್ದು, 8 ಬೌಂಡರಿ ನೆರವಿನಿಂದ 67 ರನ್ ಬಾರಿಸಿ ಮುನ್ನುಗ್ಗುವ ಸೂಚನೆ ನೀಡಿದ್ದಾರೆ. ಲಬುಶೇನ್-ಸ್ಮಿತ್ ಜತೆಯಾಟದಲ್ಲಿ ಈಗಾಗಲೇ 60 ರನ್ ಒಟ್ಟುಗೂಡಿದೆ. ದ್ವಿತೀಯ ದಿನದಾಟದಲ್ಲಿ ಈ ಎರಡು ವಿಕೆಟ್‌ಗಳನ್ನು ಬೇಗ ಉರುಳಿಸಿದರಷ್ಟೇ ಭಾರತ ಮೇಲುಗೈ ನಿರೀಕ್ಷಿಸಬಹುದು.
ಸ್ಥಾನ ಉಳಿಸಿಕೊಂಡ ವೇಡ್ಈ ಪಂದ್ಯಕ್ಕಾಗಿ ಆಸ್ಟ್ರೇಲಿಯ ಎರಡು ಬದಲಾವಣೆ ಮಾಡಿಕೊಂಡಿತು. ಆದರೆ ಮ್ಯಾಥ್ಯೂ ವೇಡ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಟ್ರ್ಯಾವಿಸ್ ಹೆಡ್ ತಂಡದಿಂದ ಬೇರ್ಪಟ್ಟರು. ಗೇಟ್‌ಪಾಸ್ ಪಡೆದ ಮತ್ತೂಬ್ಬ ಆಟಗಾರ ಜೋ ಬರ್ನ್ಸ್. ಸೈನಿಗೆ ಟೆಸ್ಟ್ ಕ್ಯಾಪ್ ನೀಡಿದ ಬುಮ್ರಾ!
ಸಾಮಾನ್ಯವಾಗಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ಕ್ರಿಕೆಟಿಗನಿಗೆ ತಂಡದ ಹಿರಿಯ ಆಟಗಾರ ಅಥವಾ ತರಬೇತುದಾರ ಕ್ಯಾಪ್ ನೀಡಿ ಬರಮಾಡಿಕೊಳ್ಳುವುದು ಸಂಪ್ರದಾಯ. ಆದರೆ ಸಿಡ್ನಿಯಲ್ಲಿ ಭಾರತ ಈ ಸಂಪ್ರದಾಯ ಮುರಿಯಿತು. ನವದೀಪ್ ಸೈನಿ ಅವರಿಗೆ ಟೆಸ್ಟ್‌ಕ್ಯಾಪ್ ನೀಡಿದ್ದು ಯಾರು ಗೊತ್ತೇ? ಜಸ್‌ಪ್ರೀತ್ ಬುಮ್ರಾ! ಈ ಸಂದರ್ಭದಲ್ಲಿ ಸೈನಿ ಕುರಿತು ಮಾತಾಡಿದ ಬುಮ್ರಾ, “ಸಾಕಷ್ಟು ಪರಿಶ್ರಮದ ಬಳಿಕ ಈ ಅವಕಾಶ ಲಭಿಸಿದೆ. ಟೆಸ್ಟ್ ಆಡುವ ಅರ್ಹತೆ ನಿಮಗೆ ಇದೆ. ಬೆಸ್ಟ್ ಆಫ್ ಲಕ್’ ಎಂದರು. ಅಂದಹಾಗೆ, ಸೈನಿ ಭಾರತದ 299ನೇ ಟೆಸ್ಟ್ ಕ್ರಿಕೆಟಿಗ. ಆಸ್ಟ್ರೇಲಿಯ ಪರ ಆರಂಭಕಾರ ವಿಲ್ ಪುಕೋವ್‌ಸ್ಕಿ ಟೆಸ್ಟ್‌ಕ್ಯಾಪ್ ಧರಿಸಿದರು. ಅವರಿಗೆ ಸಹಾಯಕ ಕೋಚ್ ಆ್ಯಂಡ್ರೂé ಮೆಕ್‌ಡೊನಾಲ್ಡ್ 460ನೇ ನಂಬರ್‌ನ ಬ್ಯಾಗ್ಗಿ ಗ್ರೀನ್‌ಕ್ಯಾಪ್ ನೀಡಿದರು. ಆದರೆ ಸಿಡ್ನಿಯ ಕಠಿನ ಕೋವಿಡ್-19 ನಿಯಮಾವಳಿಯಿಂದಾಗಿ ಪುಕೋವ್‌ಸ್ಕಿ ಕುಟುಂಬದವರಿಗೆ, ಸ್ನೇಹಿತರಿಗೆ ಸ್ಟೇಡಿಯಂಗೆ ಆಗಮಿಸಿ ಈ ಕ್ಷಣವನ್ನು ಆನಂದಿಸಲು ಸಾಧ್ಯವಾಗಲಿಲ್ಲ.
ಮೊದಲ ಟೆಸ್ಟ್ ಆಡಲಿಳಿದವರು ಇಲ್ಲಿ ಮುಖಾಮುಖೀಯಾದದ್ದು, ಪುಕೋವ್‌ಸ್ಕಿ ವಿಕೆಟನ್ನು ಸೈನಿ ಪಡೆದದ್ದು ಮಾತ್ರ ಕಾಕತಾಳೀಯ! ಎರಡು ಕ್ಯಾಚ್ ಬಿಟ್ಟು ಟ್ರೋಲ್ ಆದ ಪಂತ್
ಮೊದಲ ದಿನದಾಟದಲ್ಲಿ ಭಾರತದ ಫೀಲ್ಡಿಂಗ್ ವೈಫಲ್ಯ ಎದ್ದು ಕಂಡಿತು. ಅದರಲ್ಲೂ ಕೀಪರ್ ರಿಷಭ್ ಪಂತ್ ತೀರಾ ಕಳಪೆ ಪ್ರದರ್ಶನ ನೀಡಿದರು. ಮೊದಲ ಟೆಸ್ಟ್ ಆಡಲಿಳಿದ ವಿಲ್ ಪುಕೋವ್‌ಸ್ಕಿ ಅವರ ಅರ್ಧ ಶತಕದ ಸಂಭ್ರಮದಲ್ಲಿ ಪಂತ್ “ಕೊಡುಗೆ’ ಅಪಾರ. ಅವರು ಆಸೀಸ್ ಆರಂಭಿಕನಿಗೆ 10 ನಿಮಿಷಗಳ ಅಂತರದಲ್ಲಿ ಎರಡು ಲೈಫ್ ನೀಡಿ ಟ್ರೋಲ್ ಆದರು. ಸ್ಪಿನ್ನರ್ ಅಶ್ವಿನ್ ಎಸೆದ ಪಂದ್ಯದ 22ನೇ ಓವರಿನ ಅಂತಿಮ ಎಸೆತದಲ್ಲಿ ಪುಕೋವ್‌ಸ್ಕಿ ಮೊದಲ ಲೈಫ್ ಪಡೆದರು. ಡ್ರೈವ್‌ಗೆ ವಿಫಲ ಯತ್ನ ಮಾಡಿದಾಗ ಬ್ಯಾಟಿಗೆ ಎಜ್ ಆದ ಚೆಂಡು ಪಂತ್ ಅವರತ್ತ ಸಾಗಿತು. ಆದರೆ ಅವರು ಕ್ಯಾಚ್ ಪಡೆಯಲು ವಿಫಲರಾದರು.
ಎರಡೇ ಓವರ್‌ಗಳ ಬಳಿಕ ಸಿರಾಜ್ ಎಸೆತವನ್ನು ಪುಲ್ ಮಾಡಲೆತ್ನಿಸಿದ ಪುಕೋವ್‌ಸ್ಕಿಗೆ ಇಲ್ಲೂ ಯಶಸ್ಸು ಸಿಗಲಿಲ್ಲ. ಗ್ಲೌಸ್‌ಗೆ ಸವರಿದ ಚೆಂಡನ್ನು ಪಂತ್ ಎರಡನೇ ಯತ್ನದಲ್ಲಿ ಕ್ಯಾಚ್ ಮಾಡಿದರು. ಆದರೆ ಇದು ನೆಲಕ್ಕೆ ತಾಗಿರಬಹುದೆಂಬ ಅನುಮಾನಕ್ಕೆ ಕಾರಣವಾಯಿತು. ಫೀಲ್ಡ್ ಅಂಪಾಯರ್ ಔಟ್ ನೀಡಿದರೂ ಥರ್ಡ್ ಅಂಪಾಯರ್ ಸಂಶಯದ ಲಾಭವನ್ನು ಬ್ಯಾಟ್ಸ್ ಮನ್‌ಗೆ ನೀಡಿದರು. ಪುಕೋವ್‌ಸ್ಕಿ ಬ್ಯಾಟಿಂಗ್ ಮುಂದುವರಿಸಿದರು! ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್
ವಿಲ್ ಪೊಕೋವ್‌ಸ್ಕಿ ಎಲ್‌ಬಿಡಬ್ಲ್ಯು ಸೈನಿ 62
ಡೇವಿಡ್ ವಾರ್ನರ್ ಸಿ ಪೂಜಾರ ಬಿ ಸಿರಾಜ್ 5
ಮಾರ್ನಸ್ ಲಬುಶೇನ್ ಬ್ಯಾಟಿಂಗ್ 67
ಸ್ಟೀವನ್ ಸ್ಮಿತ್ ಬ್ಯಾಟಿಂಗ್ 31
ಇತರ 1
ಒಟ್ಟು (2 ವಿಕೆಟಿಗೆ) 166
ವಿಕೆಟ್ ಪತನ: 1-6, 2-106.
ಬೌಲಿಂಗ್:
ಜಸ್‌ಪ್ರೀತ್ ಬುಮ್ರಾ 14-3-30-0
ಮೊಹಮ್ಮದ್ ಸಿರಾಜ್ 14-3-46-1
ಆರ್. ಅಶ್ವಿನ್ 17-1-56-0
ನವದೀಪ್ ಸೈನಿ 7-0-32-1
ರವೀಂದ್ರ ಜಡೇಜ 3-2-2-0