ಮುಂಬಯಿ: ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಭ್ ಪಂತ್ ಅವರು ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮುಂಬಯಿಯಲ್ಲಿ ಮಂಗಳವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ರಿಷಭ್ ಹೆಲ್ಮೆಟ್ ಗೆ ಚೆಂಡು ಬಡಿದ ಕಾರಣ ಅವರು ಗಾಯಗೊಂಡಿದ್ದರು.
ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡದ ಆಟಗಾರರು ಇಂದು ರಾಜ್ ಕೋಟ್ ಗೆ ಆಗಮಿಸಿದರು. ಆದರೆ ಈ ತಂಡದ ಜೊತೆಯಲ್ಲಿ ರಿಷಭ್ ಪಂತ್ ಅವರು ಇರಲಿಲ್ಲ. ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ರಿಷಭ್ ಪಂತ್ ಅವರು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಪ್ರಕ್ರಿಯೆಗಳಿಗೆ ಒಳಪಡಲಿದ್ದಾರೆ.
ಆಸೀಸ್ ಬೌಲರ್ ಪ್ಯಾಟ್ ಕಮಿನ್ಸ್ ಎಸೆದಿದ್ದ ಬೌನ್ಸರ್ ಒಂದು ರಿಷಭ್ ಅವರ ಹೆಲ್ಮೆಟ್ ಗೆ ಬಡಿದಿತ್ತು. ಈ ಸಂದರ್ಭದಲ್ಲಿ ಅವರು 28 ರನ್ ಮಾಡಿ ಬ್ಯಾಟಿಂಗ್ ಮಾಡುತ್ತಿದ್ದರು. 44ನೇ ಓವರ್ ನಲ್ಲಿ ಕಮಿನ್ಸ್ ಅವರು ಎಸೆದ ಈ ಬೌನ್ಸರ್ ಅನ್ನು ಹುಕ್ ಮಾಡುವ ಸಂದರ್ಭದಲ್ಲಿ ಪಂತ್ ಬ್ಯಾಟಿಗೆ ಆಗಿದ ಚೆಂಡು ಬಳಿಕ ಅವರ ಹೆಲ್ಮೆಟ್ ಗೆ ಬಡಿದು ಟರ್ನರ್ ಅವರ ಕೈ ಸೇರಿತ್ತು.
ಹೀಗೆ ಔಟಾದ ಪಂತ್ ಬಳಿಕ ಇನ್ನಿಂಗ್ಸ್ ಮಧ್ಯದಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು ಹಾಗೂ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಪಂತ್ ಮೈದಾನಕ್ಕೆ ಇಳಿದಿರಲಿಲ್ಲ. ಪಂತ್ ಬದಲಿಗೆ ಕೆ.ಎಲ್. ರಾಹುಲ್ ಅವರು ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
‘ಪಂತ್ ಅವರನ್ನು ಎರಡನೇ ಏಕದಿನ ಪಂದ್ಯದಿಂದ ಕೈಬಿಡಲಾಗಿದೆ. ಪುನಶ್ಚೇತನ ನಿಯಮಾಳಿಗೆ ಅನುಸಾರವಾಗಿ ಅವರು ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರನ್ನು ಅಂತಿಮ ಏಕದಿನ ಪಂದ್ಯಕ್ಕೆ ಪರಿಗಣಿಸಬೇಕೇ ಬೇಡವೇ ಎಂದು ನಿರ್ಧರಿಸಲಾಗುವುದು’ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.